ETV Bharat / state

ಮೋದಿಯವರೇ ನೀವು ನಿಜವಾಗಿ ರೈತರ ಹಿತೈಷಿಯಾ? ಹಿತಶತ್ರುವಾ?: ಸಿಎಂ ಸಿದ್ದರಾಮಯ್ಯ - CM Siddaramaiah

author img

By ETV Bharat Karnataka Team

Published : Apr 21, 2024, 6:10 AM IST

CM Siddaramaiah
ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆಗೆ ಮತ ಪ್ರಚಾರ ಜೋರಾಗಿದೆ. ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ, ಎದೆ ಮೇಲೆ ಕೈಯಿಟ್ಟು ಆತ್ಮಸಾಕ್ಷಿಗೆ ಕಿವಿಕೊಟ್ಟು ಹೇಳಿ, ನೀವು ನಿಜವಾಗಿ ರೈತರ ಹಿತೈಷಿಯಾ? ಹಿತಶತ್ರುವಾ? ರೈತರ ಪಾಲಿನ ಮರಣ ಶಾಸನದಂತಿದ್ದ ಕೃಷಿ ಕ್ಷೇತ್ರದ ಐದು ಕರಾಳ ಕಾಯಿದೆಗಳನ್ನು ಬಲವಂತವಾಗಿ ಜಾರಿಗೊಳಿಸಲು ಪ್ರಯತ್ನಿಸಿದವರು ಯಾರು? ಮಳೆ-ಚಳಿ-ಗಾಳಿಯನ್ನು ಲೆಕ್ಕಿಸದೆ ಪ್ರತಿಭಟನೆಗಿಳಿದ ರೈತರು ದೆಹಲಿಗೆ ಬರದಂತೆ ರಸ್ತೆ ಮೇಲೆ ಮುಳ್ಳು ನೆಟ್ಟು, ಗುಂಡಿ ತೋಡಿ ಹಿಂದಕ್ಕೆ ಓಡಿಸುವ ಕುಟಿಲ ಕಾರಸ್ತಾನಗಳನ್ನು ಮಾಡಿದ್ದು ಯಾರು? ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಲ್ಲಿ ಸುಮಾರು 700 ಅಮಾಯಕರು ಪೊಲೀಸರ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಾಗ ಕನಿಷ‍್ಠ ಸಂತಾಪವನ್ನೂ ಸೂಚಿಸದ ನಿಮಗೆ ರೈತರ ಸಮ್ಮಾನ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?.‌

ನಮ್ಮ ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ, ಬರ ಬಿದ್ದಾಗ ಬರಲಿಲ್ಲ, ಬೆಳೆ ಕಳೆದುಕೊಂಡ ಬರಗಾಲ ಪೀಡಿತ ಪ್ರದೇಶದ ರೈತರಿಗೆ ಪರಿಹಾರ ನೀಡಲಿಲ್ಲ. ನಾನೇ ಖುದ್ದಾಗಿ ದೆಹಲಿಗೆ ಬಂದು ಭೇಟಿ ಮಾಡಿ ಮನವಿ ಕೊಟ್ಟರೂ ಇಲ್ಲಿಯ ವರೆಗೆ ಪೈಸೆ ಹಣ ನೀಡಿಲ್ಲ. ಈ ರೀತಿಯ ರೈತ ವಿರೋಧಿ ಧೋರಣೆ ಇಟ್ಟುಕೊಂಡ ನೀವು ಚುನಾವಣೆ ಕಾಲದಲ್ಲಿ ಮಾತ್ರ ತಪ್ಪದೆ ಹಾಜರಾಗಿ ರೈತರ ಪರ ಪ್ರೀತಿ-ಕಾಳಜಿಯ ಮಳೆ ಸುರಿಸಿದರೆ ರಾಜ್ಯದ ರೈತರು ನಿಮ್ಮನ್ನು ನಂಬುತ್ತಾರೆ ಎಂದು ತಿಳಿದುಕೊಂಡಿದ್ದಿರಾ ಎಂದು ಪ್ರಶ್ನಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನನ್ನಾಗಿ ಮಾಡಬೇಕೆಂಬ ರೈತರ ಬೇಡಿಕೆಯನ್ನು ಇನ್ನೂ ಈಡೇರಿಸಲು ನೀವು ಸಿದ್ಧರಿಲ್ಲ. ರಸಗೊಬ್ಬರದ ಬೆಲೆಯನ್ನು ಏರಿಸುತ್ತಲೇ ಇದ್ದೀರಿ, ಬೀಜ-ಗೊಬ್ಬರ ಮೇಲೆ ಜಿಎಸ್‌ಟಿ ಹೇರಿಕೆ ಮಾಡಿದ್ದೀರಿ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರ ಭೂಮಿಯನ್ನು ಕಾರ್ಪೋರೇಟ್ ಕುಳಗಳಿಗೆ ಮಾರಾಟ ಮಾಡುವ ಹುನ್ನಾರ ನಡೆಸಿರುವ ನಿಮ್ಮನ್ನು ಯಾವ ರೈತ ತಮ್ಮ ಹಿತಚಿಂತಕ ಎಂದು ನಂಬುತ್ತಾರೆ ಹೇಳಿ?.

ಬಿಜೆಪಿ ರೈತ ವಿರೋಧಿ: ನಿಮ್ಮ ಭಾರತೀಯ ಜನತಾ ಪಕ್ಷ ಹುಟ್ಟಿನಿಂದಲೇ ರೈತ ವಿರೋಧಿ. ಅದು ಬಂಡವಾಳಿಗರು, ಉದ್ಯಮಿಗಳು ಮತ್ತು ವರ್ತಕರ ಪಕ್ಷ. ಈ ಪಕ್ಷದ ಡಿಎನ್ಎನಲ್ಲಿಯೇ ರೈತ ವಿರೋಧಿ ವಿಷ ಇದೆ. ನರೇಂದ್ರ ಮೋದಿ ಅವರೇ? ನೀವು ಪ್ರಧಾನಿಯಾದ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ಯದ ರೈತರಿಗೆ ನೀವು ನೀಡಿರುವ ಕೊಡುಗೆ ಏನು? ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ, ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ನೀಡುವ ಭರವಸೆ ನೀಡಿ ವಂಚನೆ, ಬರಪರಿಹಾರಕ್ಕೆ ಹಣ ನೀಡಲು ನಿರಾಕರಣೆ. ಇದೇನಾ ನಿಮ್ಮ ರೈತ ಪ್ರೀತಿ? ಇದೇನಾ ಕಿಸಾನ್ ಸಮ್ಮಾನ್? ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಪಕ್ಷದ ರಾಜ್ಯ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳೊಳಗೆ ಹಾವೇರಿಯಲ್ಲಿ ಬೀಜ-ಗೊಬ್ಬರ ಕೇಳಿದ ರೈತರಿಗೆ ಗುಂಡಿಟ್ಟು ಸಾಯಿಸಿದರು. ಸಾಲ ಮನ್ನಾ ಮಾಡಿ ಎಂದು ರೈತರು ಕೇಳಿದರೆ "ನಾನೇನು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದೇನಾ?" ಎಂದು ವಿಧಾನಮಂಡಲದಲ್ಲಿ ಕೇಳಿದ್ದರು.

ಇದೇನಾ ನಿಮ್ಮ ಪಕ್ಷದ ರೈತರ ಬಗೆಗಿನ ಕಾಳಜಿ?. ರಾಜ್ಯದಲ್ಲಿ ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ತಿದ್ದುಪಡಿ, ಭೂಸುಧಾರಣಾ ಕಾಯ್ದೆಗೂ ತಿದ್ದುಪಡಿ ತರುವ ಪ್ರಯತ್ನ ಮಾಡಿತ್ತು. ಇದೇನಾ ನಿಮ್ಮ ರೈತ ಪರ ಸರ್ಕಾರ? ಎಂದು ಪ್ರಶ್ನಿಸಿದ್ದಾರೆ.

2017ರಲ್ಲಿಯೂ ರಾಜ್ಯದಲ್ಲಿ ಬರಗಾಲ ಇತ್ತು. ಇದರಿಂದ ಕಷ್ಟ-ನಷ್ಟಕ್ಕೀಡಾಗಿದ್ದ ರೈತರನ್ನು ರಕ್ಷಿಸಲಿಕ್ಕಾಗಿ ನಾನು ರೈತರ 50,000 ರೂಪಾಯಿ ವರೆಗಿನ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದೆ. ಇದರಿಂದ ರಾಜ್ಯದ 22.27 ಲಕ್ಷ ರೈತರ ರೂ. 8,165 ಕೋಟಿಯಷ್ಟು ಸಾಲ ಮನ್ನಾ ಆಗಿದೆ.

ತಾವು ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಸಹಕಾರಿ ಬ್ಯಾಂಕುಗಳು ಮಾತ್ರವಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಂದು ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ತೀರ್ಮಾನ ಕೈಗೊಳ್ಳುತ್ತೇವೆ ಎಂದು 2018ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಡುಗಡೆ ಮಾಡಿದ್ದ ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದ ಬಿಜೆಪಿ ಘೋಷಿಸಿತ್ತು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಡಬಲ್ ಎಂಜಿನ್ ಸರ್ಕಾರ ಕೊನೆಗೂ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡಲಿಲ್ಲ. ನರೇಂದ್ರ ಮೋದಿ ಅವರೇ ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿದೆ? ಯಾವ ರೈತ ಸಮ್ಮಾನದ ತುತ್ತೂರಿ ಊದುತ್ತಿದ್ದೀರಿ ನೀವು? ಎಂದಿದ್ದಾರೆ.

ಯುಪಿಎ ಸರ್ಕಾರ ರೈತರ ಸಾಲಮನ್ನಾ: ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ 76,000 ಕೋಟಿ ರೂಪಾಯಿಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಿತ್ತು. ಆದರೆ ನೀವು ನಿಮ್ಮ ಸ್ನೇಹಿತರಾದ ವಂಚಕ ಉದ್ಯಮಿಗಳಿಗೆ ಸೇರಿರುವ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದಿರಿ. ಆದರೆ ಅದೇ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕೆಂದು ನಿಮಗೆ ಅನಿಸಲೇ ಇಲ್ಲವೇ?.

ರೈತ ಚಳುವಳಿಯ ತವರು ಕರ್ನಾಟಕ. ನಮ್ಮ ರೈತರು ಪ್ರಜ್ಞಾವಂತರಿದ್ದಾರೆ. ಯಾರು ರೈತರ ಹಿತಶತ್ರುಗಳು? ಯಾರು ರೈತರ ಹಿತಚಿಂತಕರು ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಜ್ಞಾವಂತಿಕೆ ಅವರಿಗೆ ಇದೆ. ಈ ಚುನಾವಣೆಯಲ್ಲಿ ರೈತ ವಿರೋಧಿಗಳಿಗೆ ಅವರು ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದಿದ್ದಾರೆ.

ಚೊಂಬು ಜಾಹೀರಾತು: ಇನ್ನು, ರಾಜ್ಯದ ಲೋಕ ಸಮರ‌ ಅಖಾಡದಲ್ಲಿ ಚೊಂಬು ಪಾಲಿಟಿಕ್ಸ್ ಜೋರಾಗಿದೆ. ದೇವೇಗೌಡರು ಪ್ರಧಾನಿ ಮುಂದೆ ಕಾಂಗ್ರೆಸ್​​ನ ಚೊಂಬು ಜಾಹೀರಾತಿನ‌ ಪತ್ರಿಕೆಯನ್ನು ಪ್ರದರ್ಶಿಸುತ್ತಿರುವ ಫೋಟೋವನ್ನು ಸಿಎಂ ಸಿದ್ದರಾಮಯ್ಯ ವಿಡಂಬನಾತ್ಮಕವಾಗಿ ಮೂದಲಿಸಿ ಎಕ್ಸ್ ಪೋಸ್ಟ್ ಮೂಲಕ ಟಾಂಗ್ ನೀಡಿದ್ದಾರೆ.

ದೇವೇಗೌಡರು ಚಿಕ್ಕಬಳ್ಳಾಪುರ ಸಮಾವೇಶದಲ್ಲಿ ಪ್ರಧಾನಿ ಪಕ್ಕದಲ್ಲಿ ಚೊಂಬು ಜಾಹೀರಾತಿನ ಪತ್ರಿಕೆಯನ್ನು ಪ್ರದರ್ಶಿಸುತ್ತಿರುವ ಫೋಟೋವನ್ನೇ ಬಳಸಿ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ದಿ ಆರ್ಟಿಸ್ಟ್ ದಿ ಆರ್ಟ್ ಎಂಬ ಬರಹದೊಂದಿಗೆ ಮೂದಲಿಸಿದ್ದಾರೆ. ಪ್ರಧಾನಿ ಮೋದಿಗೆ ದಿ ಆರ್ಟಿಸ್ಟ್ ಎಂದು ಉಲ್ಲೇಖಿಸಿ, ಪತ್ರಿಕೆ ಚೊಂಬು ಜಾಹೀರಾತಿಗೆ ದಿ ಆರ್ಟ್ ಎಂಬಂತೆ ವಿಡಂಬನಾತ್ಮಕವಾಗಿ ಟೀಕಿಸಿದ್ದಾರೆ.

ಚಿಕ್ಕಬಳ್ಳಾಪುರ ಮೈತ್ರಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾತನಾಡಿ, ಕಾಂಗ್ರೆಸ್ ಪತ್ರಿಕೆಗಳಲ್ಲಿ ನೀಡಿದ ಚೊಂಬು ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದರು. ದೇವೇಗೌಡರು ಸಿಎಂ, ಡಿಸಿಎಂ ಮಾತನಾಡ್ತೀರಾ?. ಜಾಹೀರಾತು ಕೊಡ್ತೀರಾ? ಖಾಲಿ ಚೊಂಬು, ನಾಚಿಕೆಯಾಗಬೇಕು ನಿಮಗೆ ಅಂತ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ವಿರುದ್ಧ ಗೌಡರು ಗುಡುಗಿದ್ರು. ಸೋನಿಯಾಗಾಂಧಿ ಯುಪಿಎ ಒಕ್ಕೂಟದ ಅಧ್ಯಕ್ಷರು. ಕೋಲ್ಗೇಟ್, 2G ಸ್ಪೆಕ್ಟ್ರಂ ಸೇರಿದಂತೆ ಎಷ್ಟು ಹಗರಣಗಳು ಬಂದ್ವು. ಈ ಹಗರಣಗಳಿಂದ ರಾಷ್ಟ್ರದ ಸಂಪತ್ತು ಲೂಟಿ ಮಾಡಿ ಚೊಂಬನ್ನು ಖಾಲಿ ಮಾಡಿದ್ರು. 2014ರಲ್ಲಿ ಪ್ರಧಾನಿ ಮೋದಿಗೆ ಖಾಲಿ ಚೊಂಬನ್ನು ಕೊಟ್ಟಿದ್ರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಆ ಚೊಂಬನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದು ಮೋದಿ ಅಂತ ದೇವೇಗೌಡರು ಶ್ಲಾಘಿಸಿದ್ರು.

ಈ ವೇಳೆ ಪತ್ರಿಕೆಯಲ್ಲಿನ ಕಾಂಗ್ರೆಸ್​​ನ ಚೊಂಬು ಜಾಹೀರಾತನ್ನು ದೇವೇಗೌಡರು ಪ್ರದರ್ಶಿಸಿದ್ದರು. ಇದನ್ನೇ ಸಿಎಂ ಸಿದ್ದರಾಮಯ್ಯರು ವಿಡಂಬನಾತ್ಮಕವಾಗಿ ಮೂದಲಿಸಿದ್ದಾರೆ. ಇತ್ತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರು ಇದನ್ನೇ ಎಕ್ಸ್ ಪೋಸ್ಟ್ ಮಾಡುವ ಮೂಲಕ ಪ್ರಧಾನಿಗೆ ಖಾಲಿ ಚೊಂಬಿನ ವಾಸ್ತವತೆ ಪರಿಚಯವಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಅಪಾಯಕಾರಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್​​ ಅಧಿಕಾರಕ್ಕೆ ತರಬೇಡಿ: ಮೋದಿ - PM Modi campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.