ETV Bharat / state

ಅಪಾಯಕಾರಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್​​ ಅಧಿಕಾರಕ್ಕೆ ತರಬೇಡಿ: ಮೋದಿ - PM Modi campaign

author img

By ETV Bharat Karnataka Team

Published : Apr 20, 2024, 7:10 PM IST

Updated : Apr 20, 2024, 10:44 PM IST

ಕಾಂಗ್ರೆಸ್ ಸರ್ಕಾರ ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ, ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ. ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ, ಎಲ್ಲೆಲ್ಲೂ ಭ್ರಷ್ಟಾಚಾರ ನಡೀತಿದೆ, ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೋದಿ
ಮೋದಿ

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಇಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಗಳು ಅಪಾಯಕಾರಿಯಾಗಿವೆ. ಬೀದಿಗಳಲ್ಲಿ ಬಾಂಬ್ ಸಿಡೀತಿವೆ, ಹಾಡಹಗಲೇ ಹಲ್ಲೆಗಳಾಗುತ್ತಿವೆ, ಇದು ಸಾಮಾನ್ಯ ವಿಚಾರಗಳಲ್ಲ. ಹಾಗಾಗಿ ಕಾಂಗ್ರೆಸ್ ಗೆಲ್ಲಿಸೋದು ಬೇಡ ಎಂದು ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ ಮೋದಿ ಅವರು ವಾಗ್ದಾಳಿ ನಡೆಸಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮನ ಪ್ರತಿಮೆ ನೀಡಿ ಬೆಂಗಳೂರು ಕರಗದ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಮೋದಿ, ಬೆಂಗಳೂರಿನ ನನ್ನ ಸೋದರ ಸೋದರಿಯರಿಗೆ ನನ್ನ ನಮಸ್ಕಾರಗಳು ಎನ್ನುತ್ತಲೇ ಭುವನೇಶ್ವರಿ, ಅಣ್ಣಮ್ಮ, ಬನಶಂಕರಿ ಸೇರಿ ಬೆಂಗಳೂರಿನ ದೇವತೆಗಳ ಹೆಸರು ಪ್ರಸ್ತಾಪಿಸಿ ನಮಿಸಿ ಮಾತು ಆರಂಭಿಸಿದರು.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶ
ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶ

ಕರ್ನಾಟಕದಲ್ಲಿ ಯಾವ ರೀತಿಯ ವಿಚಾರಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಕೊಡ್ತಿದೆಯೋ ಅದು ಅಪಾಯಕಾರಿ. ಇಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗ್ತಿವೆ, ಬೀದಿಗಳಲ್ಲಿ ಬಾಂಬ್​​ಗಳನ್ನು ಸ್ಫೋಟಿಸಲಾಗ್ತಿದೆ. ಭಜನೆ ಕೀರ್ತನೆ ಕೇಳಿದವರ ಮೇಲೂ ಹಲ್ಲೆ ಮಾಡಲಾಗ್ತಿದೆ. ಇವು ಸಾಮಾನ್ಯ ಘಟನೆಗಳಲ್ಲ, ಕರ್ನಾಟಕ, ಬೆಂಗಳೂರಿನ ಜನ ಕಾಂಗ್ರೆಸ್​​ನಿಂದ ಇದಕ್ಕಾಗಿಯೇ ದೂರ ಇರಬೇಕು ಎಂದು ಮೋದಿ ಕರೆ ನೀಡಿದರು.

ಹಿಂದೆ ದೇಶ ಆರ್ಥಿಕ‌ ಸಂಕಷ್ಟದಲ್ಲಿತ್ತು. ಬ್ಯಾಂಕ್​​ಗಳು ಮುಳುಗುವ ಭೀತಿ ಎದುರಿಸುತ್ತಿದ್ದ ಕಾಲ ಈಗ ಬದಲಾಗಿದೆ. ಅನ್ಯ ದೇಶಗಳು ಭಾರತದ ಗೆಳೆತನ ಮಾಡಲು ಹಾತೊರೆಯುತ್ತಿವೆ, ಬಂಡವಾಳ ಹೂಡಲು ಉತ್ಸುಕವಾಗಿವೆ. ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕ ದೇಶ, ಭಾರತ ಯಾರನ್ನೂ ಅನುಸರಿಸುತ್ತಿಲ್ಲ, ಭಾರತವನ್ನ ಬೇರೆಯವ್ರು ಅನುಸರಿಸುತ್ತಿದ್ದಾರೆ ಎಂದರು.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶ
ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶ

ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಮೋದಿ ಪರಿವಾರದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಇಂಡಿಯಾ ಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಗುಣಮಟ್ಟದ ಬದುಕು ಏನು ಅಂತ ಗೊತ್ತಿದೆ. ದೇಶದ ಜನರ ಬದುಕಿನಲ್ಲಿ ಗುಣಮಟ್ಟ ತರಲು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ, ಬಡವರಿಗೆ ಒಂದು ಕೋಟಿ ಮನೆ ಕೊಡಲಾಗಿದೆ, 84 ಸಾವಿರ ಮನೆಗಳು ಬೆಂಗಳೂರಿಗೆ ಸಿಕ್ಕಿವೆ. ಮಧ್ಯಮ ವರ್ಗದ ಮನೆಗಳ ಕನಸು ನನಸು ಮಾಡಿದ್ದೇವೆ. ಜನರ ಒಳಿತಿಗಾಗಿ ರೇರಾ ಕಾಯ್ದೆ ಜಾರಿಯಾಗಿದೆ, ಏಳು ಲಕ್ಷದವರೆಗೆ ಈಗ ಆದಾಯ ತೆರಿಗೆ ಕಟ್ಟುವಂತಿಲ್ಲ, 10 ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ, ಜಿಎಸ್‌ಟಿ ಬಂದ ನಂತರ ಪರೋಕ್ಷ ತೆರಿಗೆಗೆ ತೆರೆ ಬಿದ್ದಿದೆ, ಎಲ್‌ಇಡಿ ಬಲ್ಬ್​ 400 ರೂ. ಇತ್ತು, ಈಗ 40 ರೂ. ಆಗಿದೆ, ಆ ಬಲ್ಬ್​​ಗಳಿಂದ ಹೆಚ್ಚು ಬೆಳಕು ಸಿಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಎಫ್​ಐಆರ್ ದಾಖಲು - FIR filed against Vijayendra

ಜನೌಷಧ ಕೇಂದ್ರಗಳಲ್ಲಿ 80% ಕಡಿಮೆ ದರದಲ್ಲಿ ಔಷಧ ಕೊಡಲಾಗುತ್ತಿದೆ. 2014 ರಲ್ಲಿ ಒಂದು ಮೊಬೈಲ್ ಡೇಟಾ ಜಿಬಿ ಗೆ 250 ರೂ ಇತ್ತು, ಈಗ 10 ರೂ. ಆಗಿದೆ. ಮೊಬೈಲ್ ಬಿಲ್ ಈಗ 500 ರೂ.ಗಿಂತ ಕಮ್ಮಿ ಬರ್ತಿದೆ, ಇದರಿಂದ ಐದಾರು ಸಾವಿರ ಉಳಿಯುತ್ತಿದೆ. ನಮ್ಮ ಸರ್ಕಾರ ಡೇಟಾ ಸುರಕ್ಷತೆಗೆ ಬಲವಾದ ಕಾನೂನು ತಂದಿದೆ ಎಂದರು.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶ
ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಕಲ್ಪ ಸಮಾವೇಶ

ನಮ್ಮ ಸೌರ ಯೋಜನೆಯಿಂದಾಗಿ ಮನೆಗಳಲ್ಲಿ ವಿದ್ಯುತ್ ಉಚಿತವಾಗುವುದು ಮಾತ್ರವಲ್ಲ ಅದರಿಂದ ಆದಾಯವೂ ಬರಲಿದೆ. ಇವಿ ವಾಹನಗಳ ಚಾರ್ಜಿಂಗ್​​ನಿಂದಾಗಿ ಇಂಧನ ಶುಲ್ಕವೂ ಉಚಿತವಾಗಲಿದೆ. ಐದು ಲಕ್ಷದವರೆಗೂ ಉಚಿತ ಆರೋಗ್ಯ ಸೇವಾ ಯೋಜನೆ, 70 ವರ್ಷ ದಾಟಿದ ವ್ಯಕ್ತಿಗೆ 5 ಲಕ್ಷದವರೆಗೂ ಉಚಿತ ಚಿಕಿತ್ಸೆ ಸಿಗಲಿದೆ. ಬೆಂಗಳೂರು ಸಬರ್ಬನ್ ಪ್ರಾಜೆಕ್ಟ್ ಕೆಲಸ ಶುರುವಾಗಿದೆ. ಸ್ಯಾಟಲೈಟ್ ರಿಂಗ್ ರಸ್ತೆಯ ಲಾಭವೂ ಶೀಘ್ರದಲ್ಲಿ ಸಿಗಲಿದೆ. ಮೇಡ್ ಇನ್ ಇಂಡಿಯಾಕ್ಕೂ ಬೆಂಗಳೂರು ಕೊಡುಗೆ ಅಪಾರವಾಗಿದೆ, ಕರ್ನಾಟಕಕ್ಕೂ ಶೀಘ್ರದಲ್ಲಿಯೇ ಬುಲೆಟ್ ಟ್ರೈನ್ ಬರಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಚಾಮರಾಜನಗರ: ಎರಡನೇ ಸಲ ಗೆಲ್ಲುತ್ತಾ ಬಿಜೆಪಿ, ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್? - Loka sabha election 2024

ಕಾಂಗ್ರೆಸ್ ಸರ್ಕಾರ ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ, ಟ್ಯಾಕ್ಸ್ ಸಿಟಿಯನ್ನ ಟ್ಯಾಂಕರ್ ಸಿಟಿ ಮಾಡಿದೆ. ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗುತ್ತಿದೆ, ಎಲ್ಲೆಲ್ಲೂ ಭ್ರಷ್ಟಾಚಾರ ನಡೀತಿದೆ, ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹೆಚ್‌ಎಎಲ್ ವಿಚಾರದಲ್ಲಿ ಆರೋಪ ಮಾಡಿ ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಮುಂದಾಗಿತ್ತು. ಅದೇ ಹೆಚ್‌ಎ‌ಎಲ್ ಈಗ ಅನೇಕ ಸಾಧನೆ ಮಾಡಿದೆ, ದಾಖಲೆಯ ಲಾಭ ಗಳಿಸಿದೆ, ರಾಜ್ಯದಲ್ಲಿ ಏಷ್ಯಾದ ದೊಡ್ಡ ಹೆಲಿಕಾಪ್ಟರ್ ನಿರ್ಮಾಣ ಕೈಗಾರಿಕೆ ಹೆಚ್ಎಎಲ್ ಸ್ಥಾಪಿಸಿದೆ. ಆದರೆ ಕಾಂಗ್ರೆಸ್ ತಂತ್ರಜ್ಞಾನದ ವಿರೋಧಿಯಾಗಿದೆ, ಇಡೀ ಜಗತ್ತು ಡಿಜಿಟಲ್ ಇಂಡಿಯಾ ಶ್ಲಾಘಿಸುತ್ತಿದೆ, ಕೊರೊನಾ ವೇಳೆ ವ್ಯಾಕ್ಸಿನ್ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡಿತು ಎಂದರು.

ಜನರ ಕನಸು ನನಸು ಮಾಡುವುದೇ ನಮ್ಮ ಸಂಕಲ್ಪ, ಇದಕ್ಕಾಗಿ ಬಿಜೆಪಿ ಜೆಡಿಎಸ್ ಒಟ್ಟಾಗಿದ್ದೇವೆ. ನಿಮ್ಮ ಕನಸೇ ನನ್ನ ಕನಸು, ನನ್ನ ಪ್ರತಿ ಕ್ಷಣ, ನಿಮಗಾಗಿ ದೇಶಕ್ಕಾಗಿ ಸಮರ್ಪಣೆ. ಇದು 24*7 ಫಾರ್ 2047 ವರೆಗೆ ನಿರಂತರ ಎಂದು ಆಶ್ವಾಸನೆ ನೀಡಿದರು.

ಇದನ್ನೂ ಓದಿ: ನಾವು ಬೇಡ ಎಂದ ಮೇಲೆ ನಮಗೇಕೆ ಬಿಜೆಪಿ? ಶಿರಸಿಯಲ್ಲಿ ಶಾಸಕ ಹೆಬ್ಬಾರ್ ಅಸಮಾಧಾನ - Lok Sabha Election 2024

Last Updated :Apr 20, 2024, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.