ETV Bharat / state

ಚಾಮರಾಜನಗರ: ಎರಡನೇ ಸಲ ಗೆಲ್ಲುತ್ತಾ ಬಿಜೆಪಿ, ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್? - Loka sabha election 2024

author img

By ETV Bharat Karnataka Team

Published : Apr 20, 2024, 7:30 PM IST

Updated : Apr 21, 2024, 11:51 AM IST

ಚಾಮರಾಜನಗರ ಲೋಕಸಭಾ ಕ್ಷೇತ್ರ
ಚಾಮರಾಜನಗರ ಲೋಕಸಭಾ ಕ್ಷೇತ್ರ

ಕಾಂಗ್ರೆಸ್​ ಭದ್ರಕೋಟೆಯಾದ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಲಗ್ಗೆ ಹಾಕಿದ್ದು, ಇದನ್ನು ಉಳಿಸಿಕೊಳ್ಳಲು ಪಕ್ಷ ಹೋರಾಟ ನಡೆಸಲಿದೆ. ಇತ್ತ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಾರಿ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವುದು ಪ್ರತಿಷ್ಠೆಯಾಗಿದೆ.

ಚಾಮರಾಜನಗರ: ಹಳೆ ಮೈಸೂರು ಭಾಗದ ಜಾನಪದ ಕಲೆಗಳ ತವರೂರು, ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ ಪುಣ್ಯ ಕ್ಷೇತ್ರಗಳನ್ನು ಒಳಗೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಾವು ತೀವ್ರತೆ ಪಡೆದಿದೆ. ಪರಿಶಿಷ್ಟ ಜಾತಿಗೆ (ಎಸ್​ಸಿ)ಮೀಸಲಾದ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್​ನಿಂದ ಸಚಿವ ಹೆಚ್.ಸಿ. ಮಹಾದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಕಣಕ್ಕಿಳಿದಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿಯ ಓರ್ವ ಶಾಸಕನೂ ಇಲ್ಲದಿರುವುದು, ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಈ ಕ್ಷೇತ್ರಕ್ಕೆ ಒಳಪಡುವುದು ಹಾಗೂ ಗ್ಯಾರಂಟಿಗಳ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕೈ ಪಕ್ಷದ ವಿಶ್ವಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಮಬಲ ಹಾಗೂ ಬಾಲರಾಜು ಅವರು ಸಜ್ಜನ ರಾಜಕಾರಣಿ ಎಂಬುದು ಕಮಲ ಅರಳುವ ಲೆಕ್ಕಾಚಾರ ಬಿಜೆಪಿಯದ್ದು.

ಚುನಾವಣೆಗಳಲ್ಲಿ  ಗೆದ್ದ ಅಭ್ಯರ್ಥಿಗಳ ಪೂರ್ಣ ವಿವರ
ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳ ಪೂರ್ಣ ವಿವರ

2019 ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಆ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರು ಗೆಲ್ಲುವ ಮೂಲಕ ಬಿಜೆಪಿ ಬಾವುಟ ಹಾರಿಸಿದ್ದರು. ಈಗ ಎರಡನೇ ಬಾರಿಗೆ ಕಮಲ‌ ಅರಳಿಸುವ ಜೊತೆಗೆ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕೆಂದು ಕಮಲಕಲಿಗಳು ಪಣ ತೊಟ್ಟಿದ್ದಾರೆ.

ಮತ್ತೊಂದೆಡೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಎಲ್ಲ ಸಮುದಾಯದ ಜನರು ಬೆಂಬಲ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪಕ್ಷವಾರು ಗೆಲುವಿನ ಮಾಹಿತಿ
ಪಕ್ಷವಾರು ಗೆಲುವಿನ ಮಾಹಿತಿ

ಕ್ಷೇತ್ರದಲ್ಲಿ ಕೈ- ದಳದ್ದೇ ಪಾರುಪತ್ಯ: 1962 ರಿಂದ ಈವರೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಪತ್ಯವನ್ನು ಮೆರೆದಿದೆ. ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಪಕ್ಷ ಇಲ್ಲಿ ಬರೋಬ್ಬರಿ 10 ಬಾರಿ ಜಯಭೇರಿ ಬಾರಿಸಿದ್ದರೆ, 4 ಬಾರಿ ಜಾತ್ಯತೀತ ಜನತಾದಳ ಗೆದ್ದಿದೆ.‌ 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ವಿಜಯ ಸಾಧಿಸಿತ್ತು.

ವರ್ಷ ಗೆದ್ದ ಅಭ್ಯರ್ಥಿ ಪಕ್ಷ
1962 ಎಂ.ಎಸ್.ಸಿದ್ದಯ್ಯ ಕಾಂಗ್ರೆಸ್
1967 ಎಂ.ಎಸ್.ಸಿದ್ದಯ್ಯ ಕಾಂಗ್ರೆಸ್
1971 ಎಂ.ಎಸ್.ಸಿದ್ದಯ್ಯ ಕಾಂಗ್ರೆಸ್
1977 ಬಿ.ರಾಚಯ್ಯ ಕಾಂಗ್ರೆಸ್
1980 ವಿ.ಶ್ರೀನಿವಾಸಪ್ರಸಾದ್ ಕಾಂಗ್ರೆಸ್
1984 ವಿ.ಶ್ರೀನಿವಾಸಪ್ರಸಾದ್ ಕಾಂಗ್ರೆಸ್
1989 ವಿ.ಶ್ರೀನಿವಾಸಪ್ರಸಾದ್ ಕಾಂಗ್ರೆಸ್
1991 ವಿ.ಶ್ರೀನಿವಾಸಪ್ರಸಾದ್ ಕಾಂಗ್ರೆಸ್
1996 ಎ.ಸಿದ್ದರಾಜು ಜೆಡಿಎಸ್
1998 ಎ.ಸಿದ್ದರಾಜು ಜೆಡಿಎಸ್
1999 ವಿ.ಶ್ರೀನಿವಾಸಪ್ರಸಾದ್ ಜೆಡಿಯು
2004 ಕಾಗಲವಾಡಿ ಶಿವಣ್ಣ ಜೆಡಿಎಸ್
2009 ಆರ್.ಧ್ರುವನಾರಾಯಣ ಕಾಂಗ್ರೆಸ್
2014 ಆರ್.ಧ್ರುವನಾರಾಯಣ ಕಾಂಗ್ರೆಸ್
2019 ವಿ.ಶ್ರೀನಿವಾಸಪ್ರಸಾದ್ ಬಿಜೆಪಿ

ಜಾತಿವಾರು ಅಂದಾಜು ಲೆಕ್ಕಾಚಾರ: ಕ್ಷೇತ್ರವು ಎಸ್​ಸಿ ಮೀಸಲು ಕ್ಷೇತ್ರವಾಗಿದ್ದು, ಈ ಜಾತಿಯ ಜನರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಪರಿಶಿಷ್ಟ ಜಾತಿ 4.60 ಲಕ್ಷ, ಎಸ್​ಟಿ 3.20 ಲಕ್ಷ, ಲಿಂಗಾಯತ 4.20 ಲಕ್ಷ, ಉಪ್ಪಾರ 1.80 ಲಕ್ಷ, ಕುರುಬ 1.30 ಲಕ್ಷ, ಒಕ್ಕಲಿಗ 1.80 ಲಕ್ಷ, ಮುಸ್ಲಿಂ 90 ಸಾವಿರ, ಇತರೆ 1.50 ಲಕ್ಷ ಜನರಿದ್ದಾರೆ.

ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಮೈಸೂರು ಜಿಲ್ಲೆಯ ವರುಣಾ, ನಂಜನಗೂಡು, ಟಿ.ನರಸೀಪುರ, ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಮತದಾರರ ವಿವರ: ಕ್ಷೇತ್ರದಲ್ಲಿ ಒಟ್ಟು 17,57,616 ಮಂದಿ ಮತದಾರರಿದ್ದಾರೆ.‌ ಇದರಲ್ಲಿ 8,69,389 ಪುರುಷರು, 8,88,113 ಮಹಿಳೆಯರು, 114, ಇತರೆ ಮತದಾರರಿದ್ದಾರೆ. ಒಟ್ಟು ಮತಗಟ್ಟೆಗಳ ಸಂಖ್ಯೆ 2000 ಇವೆ. ಕಳೆದ 2019 ರ ಚುನಾವಣೆಯಲ್ಲಿ ಶೇಕಡಾ 73.63 ರಷ್ಟು ಮತದಾನವಾಗಿತ್ತು.

14 ಅಭ್ಯರ್ಥಿಗಳ ಮಧ್ಯೆ ಪೈಪೋಟಿ: 22 ಮಂದಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 8 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ. ಬಹುಜನ ಸಮಾಜ ಪಕ್ಷದ ಎಂ. ಕೃಷ್ಣಮೂರ್ತಿ, ಬಿಜೆಪಿಯಿಂದ ಎಸ್. ಬಾಲರಾಜು, ಕಾಂಗ್ರೆಸ್​ನ ಸುನೀಲ್ ಬೋಸ್ ಸೇರಿದಂತೆ 14 ಮಂದಿ ಸ್ಪರ್ಧೆಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವಾದ ಚಾಮರಾಜನಗರದಲ್ಲಿ ಕಾಂಗ್ರೆಸ್​ ಗೆಲ್ಲಿಸುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಇದು ಮೊದಲ ಲೋಕ ಚುನಾವಣೆಯಾಗಿದೆ.

ಇದನ್ನೂ ಓದಿ: ಬಿಜೆಪಿ ಭದ್ರ ಕೋಟೆಯಾಗಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಲಗ್ಗೆ ಇಡುವುದೇ ಕಾಂಗ್ರೆಸ್? - LOK SABHA ELECTION 2024

Last Updated :Apr 21, 2024, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.