ETV Bharat / state

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದ ನರೇಂದ್ರ ಮೋದಿ ವಿಫಲರಾದರು: ಸಿಎಂ ಆರೋಪ

author img

By ETV Bharat Karnataka Team

Published : Jan 24, 2024, 10:55 PM IST

ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ
ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಪ್ರಧಾನಿ ಅದರಲ್ಲಿ ವಿಫಲರಾಗಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು: ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅದರಲ್ಲಿ ವಿಫಲರಾಗಿದ್ದಾರೆ. ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು‌. ಆಗಲಿಲ್ಲ ಈ ವೈಫಲ್ಯ ಮುಚ್ಚಿಕೊಳ್ಳಲು ಶ್ರೀರಾಮನನ್ನು ಮುಂದಿಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕಾವೇರಿ ನದಿಯ ನೀರು ತುಂಬಿಸುವ ಯೋಜನೆ ಉದ್ಘಾಟನೆ ಕಾರ್ಯಕ್ರಮ
ಕಾವೇರಿ ನದಿಯ ನೀರು ತುಂಬಿಸುವ ಯೋಜನೆ ಉದ್ಘಾಟನೆ ಕಾರ್ಯಕ್ರಮ

ಪಿರಿಯಾಪಟ್ಟಣ ತಾಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಮತ್ತು ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಮುತ್ತಿನಮುಳುಸೋಗೆಯಲ್ಲಿ ಉದ್ಘಾಟಿಸಿ ಮಾತನಾಡಿದರು. ಮಹಾತ್ಮಗಾಂಧಿ ಹೇಳಿದ ರಘು ಪತಿ ರಾಘವ ರಾಜಾರಾಮನನ್ನು ನಾವು ಪೂಜಿಸುತ್ತೇವೆ, ನಾವೂ ಭಜಿಸುತ್ತೇವೆ‌. ಜನದ್ರೋಹವನ್ನು ಬಚ್ಚಿಟ್ಟುಕೊಳ್ಳಲು ಶ್ರೀರಾಮನನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ಕ್ಷಮಿಸಬೇಡಿ. ಬೆಂಬಲಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಪಿರಿಯಾಪಟ್ಟಣದ ಜನ, ಜಾನವಾರು, ಕೃಷಿಯ ಅನುಕೂಲಕ್ಕಾಗಿ ಮತ್ತು ಇಲ್ಲಿನ ಅಂತರ್ಜಲ ಹೆಚ್ಚಳಕ್ಕೆ ನಾನೇ ಶಂಕುಸ್ಥಾಪನೆ ಮಾಡಿ ನಾನೇ ಈಗ ಉದ್ಘಾಟಿಸಿದ್ದೇನೆ. 79 ಹಳ್ಳಿ 93 ಸಾವಿರ ಜನರಿಗೆ ಇದರಿಂದ ಲಾಭ ಆಗುತ್ತಿದೆ. ಇದು ನಮ್ಮ ಸರ್ಕಾರ ಪಿರಿಯಾಪಟ್ಟಣದಲ್ಲಿ ನಿರ್ವಹಿಸಿದ ಜವಾಬ್ದಾರಿ ಎಂದರು. ನಮ್ಮ ಸರ್ಕಾರದ ಒಂದು ಯೋಜನೆ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ ಮರು ಜೀವ ನೀಡಿದೆ. ಇದೇ ರೀತಿ ಪಿರಿಯಾಪಟ್ಟಣದ ಕೆರೆಗಳಿಗೆ ಮರು ಜೀವ ನೀಡಿ ಇಲ್ಲಿನ ಅಂತರ್ಜಲವೃದ್ಧಿಗೆ ಈ ಯೋಜನೆ ಜೀವದಾನವಾಗಲಿದೆ ಎಂದು ವಿವರಿಸಿದರು.

ನುಡಿದಂತೆ ನಡೆಯೋದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಸರ್ಕಾರದ, ಕಾಂಗ್ರೆಸ್ ಸರ್ಕಾರದ ಸಂಸ್ಕಾರ. ಬಿಜೆಪಿ ಕೊಟ್ಟ ಮಾತುಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಜನ ಜಾನವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ, ಜನರು ಗುಳೆ ಹೋಗದಂತೆ ತಡೆದಿದ್ದೇವೆ. ಇದು ನಮ್ಮ ಸಾಧನೆ.

ಕಳೆದ ವರ್ಷ ಸೆಪ್ಟೆಂಬರ್ ನಿಂದ ಇವತ್ತಿನವರೆಗೂ ನಾನು ರಾಜ್ಯದ ಪಾಲಿನ ಬರ ಪರಿಹಾರದ ಹಣವನ್ನು ಕೊಡಿ ಎಂದು ಪತ್ರ ಬರೆಯುತ್ತಿದ್ದೇವೆ. ನಾವೇ ಖುದ್ದಾಗಿ ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿಯನ್ನು ರಾಜ್ಯಕ್ಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜನ ಪ್ರತಾಪ್ ಸಿಂಹ ಸೇರಿ 25 ಮಂದಿ ಎಂಪಿಗಳನ್ನು ಗೆಲ್ಲಿಸಿದರು. ಒಬ್ಬೇ ಒಬ್ಬ ಬಿಜೆಪಿ ಸಂಸದರು ರಾಜ್ಯಕ್ಕೆ ಒಂದೇ ಒಂದು ರೂಪಾಯಿ ಬರ ಪರಿಹಾರ ತರಲಿಲ್ಲ ಎಂದು ವಿವರಿಸಿದ ಮುಖ್ಯಮಂತ್ರಿಗಳು, "ಮಿಸ್ಟರ್ ಪ್ರತಾಪ್ ಸಿಂಹ ಏಕೆ ಒಂದೇ ಒಂದು ರೂಪಾಯಿ ತರಲಿಲ್ಲ. ಇಷ್ಟು ಎಂಪಿಗಳಿದ್ದು ಆಗುವುದಿಲ್ಲವೇ ನಿಮಗೆ?" ಎಂದು ಖಾರವಾಗಿ ಪ್ರಶ್ನಿಸಿದರು.

ಕಾವೇರಿ ನದಿಯ ನೀರು ತುಂಬಿಸುವ ಯೋಜನೆ ಉದ್ಘಾಟನೆ ಕಾರ್ಯಕ್ರಮ
ಕಾವೇರಿ ನದಿಯ ನೀರು ತುಂಬಿಸುವ ಯೋಜನೆ ಉದ್ಘಾಟನೆ ಕಾರ್ಯಕ್ರಮ

ದೇವೇಗೌಡರು ಈಗ ಪ್ರದಾನಿ ಮೋದಿ ಮತ್ತು ಬಿಜೆಪಿ ಜತೆ ತಮ್ಮ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿಗೆ ಹೇಳಿ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರವನ್ನು ದೊರಕಿಸಿ ಕೊಡಲಿ. ಜಾತ್ಯತೀತ ಎಂದು ಪಕ್ಷದ ಹೆಸರಿಟ್ಟುಕೊಂಡು ಈಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಲೇವಡಿ ಮಾಡಿದರು.

ರಾಜ್ಯದ ಒಂದು ಕೋಟಿ 30 ಲಕ್ಷ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಪ್ರತೀ ತಿಂಗಳು 4 ರಿಂದ 6 ಸಾವಿರ ರೂಪಾಯಿ ಕೈ ಸೇರುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಇಲ್ಲಿಯವರೆಗೂ 139 ಕೋಟಿ ಮಹಿಳೆಯರು ಉಚಿತವಾಗಿ ಬಸ್​ಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದಾಗ ಸಾರ್ವಜನಿಕರು ಸಂಭ್ರಮದಿಂದ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಇದನ್ನೂ ಓದಿ: ನೌಕರರಿಗೆ ಖುಷಿ ಸುದ್ದಿ: ಎನ್​ಪಿಎಸ್​ನಲ್ಲಿದ್ದ 13 ಸಾವಿರ ರಾಜ್ಯ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಭಾಗ್ಯ: ಹಣಕಾಸು ಇಲಾಖೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.