ETV Bharat / state

10 ವರ್ಷಗಳಲ್ಲಿ ಮೊದಲ ಬಾರಿಗೆ ಶೇ.50ರಷ್ಟು ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾದ ಸಿಐಡಿ 'ಟಿಎಂಸಿ' ತಂಡ - CIT TMC Team

author img

By ETV Bharat Karnataka Team

Published : Apr 4, 2024, 10:15 PM IST

ಸಿಐಡಿ
ಸಿಐಡಿ

ಸೂಕ್ಷ್ಮ ಹಾಗೂ ಗಂಭೀರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ‌ ಮೂರು ತಿಂಗಳಲ್ಲಿ 4 ಪ್ರಕರಣಗಳಲ್ಲಿ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ‌‌. ಇದು ಕಳೆದ 10 ವರ್ಷಗಳಿಗೆ ಹೋಲಿಸಿದರೆ ಶಿಕ್ಷೆ ಪ್ರಮಾಣ ಶೇ.50ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ಸೂಕ್ಷ್ಮ ಹಾಗೂ ಗಂಭೀರ ಅಪರಾಧ ಪ್ರಕರಣಗಳ ತನಿಖೆ ನಡೆಸುವ ರಾಜ್ಯ ಅಪರಾಧ ತನಿಖಾ ವಿಭಾಗದಲ್ಲಿ (ಸಿಐಡಿ) ತೆರೆಯಲಾಗಿರುವ ಟ್ರಯಲ್ ಮಾನಿಟರಿಂಗ್ ಸೆಲ್ (ಟಿಎಂಸಿ) ಫಲ ನೀಡಿದ್ದು, ಪ್ರಕರಣಗಳಲ್ಲಿ ಶಿಕ್ಷೆ ಕೊಡಿಸುವ ಪ್ರಮಾಣ ಹೆಚ್ಚಿಸುವಲ್ಲಿ ಸಫಲವಾಗಿದೆ.

ಕಳೆದ‌ ಮೂರು ತಿಂಗಳಲ್ಲಿ 4 ಪ್ರಕರಣಗಳಲ್ಲಿ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ‌‌. ಇದು ಕಳೆದ 10 ವರ್ಷಗಳಿಗೆ ಹೋಲಿಸಿದರೆ ಶಿಕ್ಷೆ ಪ್ರಮಾಣ ಶೇ.50ಕ್ಕೆ ಏರಿಕೆಯಾಗಿದೆ. 2018ರಲ್ಲಿ 17 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ಸಜೆ ಪ್ರಮಾಣ ಶೇ.34ರಷ್ಟು ಮಾತ್ರವೇ ಇತ್ತು. ಹೊಸದಾಗಿ ರಚಿಸಲಾಗಿರುವ ಟಿಎಂಸಿ ತಂಡವು ಪ್ರಕರಣಗಳ ಮೇಲ್ವಿಚಾರಣೆ ಹಾಗೂ ಪಬ್ಲಿಕ್ ಪ್ರ್ಯಾಸಿಕ್ಯೂಟರ್ ನಡುವೆ ನಿರಂತರ ಸಮನ್ವಯತೆಯಿಂದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳಗೊಳ್ಳಲು ಕಾರಣವಾಗಿದೆ.

2014 ರಿಂದ 2023ರ ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವ 268 ಪ್ರಕರಣಗಳಲ್ಲಿ 54ರಲ್ಲಿ ಮಾತ್ರ (ಶೇ.20) ಶಿಕ್ಷೆ ಪ್ರಕಟವಾಗಿದೆ. 214 ಪ್ರಕರಣಗಳನ್ನ ಖುಲಾಸೆಗೊಳಿಸಲಾಗಿದೆ ಎಂದು ಸಿಐಡಿ ಅಂಕಿ ಅಂಶಗಳೇ ಸ್ಪಷ್ಟಪಡಿಸಿವೆ.

ಸಿಐಡಿಯಲ್ಲಿ ಹಣಕಾಸು, ಸೈಬರ್, ಮಾನವ ಕಳ್ಳಸಾಗಾಣಿಕೆ, ಆರ್ಥಿಕ ಅಪರಾಧ, ನರಹತ್ಯೆ ಮತ್ತು ಚೌರ್ಯ, ಖೋಟಾನೋಟು, ನರಹತ್ಯೆ, ಮಾದಕವಸ್ತು, ಶಿಲ್ಪವಿಭಾಗ, ಅರಣ್ಯ ಘಟಕ ಹಾಗೂ ಹೊಸದಾಗಿ ತೆರೆಯಲಾಗಿರುವ ಕ್ರಿಮಿನಲ್‌ ಇಂಟಲಿಜೆನ್ಸ್ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವಿಭಾಗದಿಂದ‌ ಓರ್ವ ಇನ್​ಸ್ಪೆಕ್ಟರ್ ಆಯಾ ವಿಭಾಗಗಳ ಪ್ರಕರಣಗಳ ವ್ಯಾಜ್ಯದ ನಿಗಾ ವಹಿಸುತ್ತಾರೆ‌‌.

ತನಿಖಾಧಿಕಾರಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಯಾವ ಹಂತದಲ್ಲಿ ಕೇಸ್ ಇರುವ ಬಗ್ಗೆ ಪಬ್ಲಿಕ್ ಪ್ರ್ಯಾಸಿಕ್ಯೂಟರ್​ಗಳೊಂದಿಗೆ ಸಮನ್ವಯತೆ ಸಾಧಿಸುವುದು, ವ್ಯಾಜ್ಯಕ್ಕೆ ಸಂಬಂಧಿಸಿದ ದಾಖಲೆ, ಸಾಕ್ಷ್ಯಾಧಾರ ಒದಗಿಸುವುದು, ಸಮಯಕ್ಕೆ ಸರಿಯಾಗಿ ಸಾಕ್ಷಿದಾರ ಹಾಗೂ ತನಿಖಾಧಿಕಾರಿಯನ್ನ ಕೋರ್ಟ್ ಮುಂದೆ ಹಾಜರುಪಡಿಸುವ ಹಾಗೂ ನ್ಯಾಯಾಲಯದ ಮೇಲ್ವಿಚಾರಣೆಯನ್ನ‌ ಟಿಎಂಸಿ ಇನ್​ಸ್ಪೆಕ್ಟರ್ ವಹಿಸಿಕೊಳ್ಳಲಿದ್ದಾರೆ.

ಅಪರಾಧ ವ್ಯವಸ್ಥೆಯಲ್ಲಿ ಎಷ್ಟೇ ಉತ್ತಮವಾಗಿ ತನಿಖೆ ನಡೆಸಿದರೂ ನ್ಯಾಯಾಲಯದಲ್ಲಿ ಉತ್ತಮವಾಗಿ ಪ್ರಾಸಿಕ್ಯೂಷನ್ ನಡೆದಾಗ ಮಾತ್ರ ಶಿಕ್ಷಾ ಪ್ರಮಾಣದಲ್ಲಿ ಸುಧಾರಣೆಯಾಗಲಿದೆ. ಇದನ್ನ ಮನಗಂಡಿರುವ ಸಿಐಡಿ ಡಿಜಿಪಿ ಎಂ. ಎ ಸಲೀಂ ಅವರು ಟ್ರಯಲ್ ಮಾನಿಟರಿಂಗ್ ಸೆಲ್‌ ತೆರೆದಿದ್ದಾರೆ.

ಡಿಐಜಿಪಿ ನೇತೃತ್ವದಲ್ಲಿ‌‌ ಟಿಎಂಸಿ ಕಾರ್ಯನಿರ್ವಹಿಸಲಿದ್ದು, ಪ್ರತಿವಾರ ಶನಿವಾರ ಇನ್‌ಸ್ಪೆಕ್ಟರ್​ಗಳೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲದೆ‌ ಆಯಾ ವಿಭಾಗದ ಎಸ್ಪಿ ಅವರು ಪ್ರತ್ಯೇಕ ಮೂರು ಪ್ರಕರಣಗಳ ಮೇಲ್ವಿಚಾರಣೆ‌‌ ನಡೆಸಲಿದ್ದಾರೆ. ತನಿಖಾಧಿಕಾರಿಗಳು ತಲಾ ಎರಡು ಪ್ರಕರಣಗಳನ್ನ ನಿರ್ವಹಿಸಲಿದ್ದಾರೆ.

ಸುಪ್ರೀಂಕೋರ್ಟ್, ಹೈಕೋರ್ಟ್ ಸೇರಿ ವಿವಿಧ ನ್ಯಾಯಾಲಯಗಳಲ್ಲಿ ಸಿಐಡಿಗೆ ಸಂಬಂಧಿತ ಪ್ರಕರಣಗಳ ಕುರಿತಂತೆ ಬರುವ ತಡೆಯಾಜ್ಞೆ ತೆರವಿಗೆ ಉಪನಿರ್ದೇಶಕ ಆಫ್ ಪ್ರಾಸಿಕ್ಯೂಷನ್ (ಡಿಡಿಪಿ) ಅವರನ್ನ ನೊಡೆಲ್ ಅಧಿಕಾರಿಯನ್ನ ನಿಯೋಜಿಸಲಾಗಿದೆ‌‌. ಅಡ್ವೋಕೇಟ್ ಜನರಲ್ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ತಡೆಯಾಜ್ಞೆ ತೆರವಿಗೆ ಮುಂದಾಗಲು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಎಂಸಿ ತಂಡ ರಚನೆಯಿಂದಾಗಿ ಕಳೆದ ವರ್ಷ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿ 12 ಪ್ರಕರಣಗಳ ಪೈಕಿ 4 ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ‌ ಇನ್ನಷ್ಟು ಶಿಕ್ಷೆ ಪ್ರಮಾಣ ಅಧಿಕಗೊಳ್ಳುವ ವಿಶ್ವಾಸವಿದೆ ಎಂದು ಸಲೀಂ ತಿಳಿಸಿದ್ದಾರೆ.

ಶಿಕ್ಷೆ ಖುಲಾಸೆ ಶಿಕ್ಷೆ ಪ್ರಮಾಣ (ಶೇಕಡವಾರು)

ವರ್ಷಖುಲಾಸೆಶಿಕ್ಷೆಪ್ರಮಾಣ (ಶೇಕಡವಾರು)
2014 019 10
2015 0326 10.34
2016 0217 10.53
2017 0513 27.38
2018 1733 34
2019 12 38 24
2020 0413 23.53
2021 0443 8.51
2022 02 14 12.50
2023 0408 33.33
2024 0404 50
ಒಟ್ಟು 58218 21

ಇದನ್ನೂ ಓದಿ: ಬೆಂಗಳೂರು: ಸಿಐಡಿಯಿಂದ ತನಿಖೆ ನಡೆಸಲ್ಪಟ್ಟ ಮೂರು ಪ್ರಕರಣಗಳಿಗೆ ಒಂದೇ ವಾರದಲ್ಲಿ ಶಿಕ್ಷೆ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.