ETV Bharat / state

ಬೆಂಗಳೂರು: ಶಾಲೆಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್; ಮತ್ತೊಂದು ಎಫ್ಐಆರ್ ದಾಖಲು

author img

By ETV Bharat Karnataka Team

Published : Feb 4, 2024, 10:23 AM IST

ಬೆಂಗಳೂರು  Bangaluru  bomb threats  File an FIR  ಬಾಂಬ್ ಬೆದರಿಕೆ
ಬೆಂಗಳೂರು: ಮುಂದುವರೆದ ಬಾಂಬ್ ಬೆದರಿಕೆಗಳ ಸರಣಿ, ಮತ್ತೊಂದು ಎಫ್ಐಆರ್ ದಾಖಲು

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ನಗರದ ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ರವಾನಿಸುತ್ತಿದ್ದಾರೆ. ಇತ್ತೀಚಿಗೆ ಕೇಂದ್ರೀಯ ವಿದ್ಯಾಲಯಕ್ಕೆ ಬೆದರಿಕೆ ಇ-ಮೇಲ್ ಬಂದಿದೆ. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜನವರಿ 28ರಂದು ಬೆಳಿಗ್ಗೆ 7.37ರ ಸುಮಾರಿಗೆ ವಿದ್ಯಾಲಯದ ಅಧಿಕೃತ ಇ-ಮೇಲ್ ಐಡಿಗೆ sahukarisrinuvasarao65@gmail.comನಿಂದ ಇ-ಮೇಲ್ ಕಳುಹಿಸಲಾಗಿದೆ. ''ಶಾಲೆಯ ಒಳಗಡೆ ಒಂದು ಬಾಂಬ್ ಇಡಲಾಗಿದೆ. ನಾಳೆ ಬೆಳಿಗ್ಗೆ 10:20ಕ್ಕೆ ಸ್ಫೋಟವಾಗಲಿದೆ'' ಎಂದು ಬರೆಯಲಾಗಿತ್ತು. ತಕ್ಷಣ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದು, ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಿದ್ದಾರೆ.

ಇತ್ತೀಚಿನ ಘಟನೆಗಳು: ಶಾಲೆಗಳಿಗೆ ಬಾಂಬ್​ ಬೆದರಿಕೆ ಇ-ಮೇಲ್ ರವಾನಿಸುವ ಪ್ರಕರಣಗಳ ತನಿಖೆಯನ್ನು ನಗರ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಕುರಿತಂತೆ ಸೈಪ್ರಸ್ ಮೂಲದ ಇಮೇಲ್ ಸರ್ವಿಸ್ ಪ್ರೊವೈಡರ್ ಕಂಪನಿಯಿಂದ ಮಾಹಿತಿ ಕೋರಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದ ವಿಶೇಷ ತಂಡದಿಂದ ತನಿಖೆ ನಡೆಯುತ್ತಿದೆ. ಬೆದರಿಕೆ ಸಂದೇಶ ಕಳುಹಿಸಲಾದ ಇಮೇಲ್ ಸರ್ವಿಸ್ ಪ್ರೊವೈಡರ್​ನಿಂದ ಅದರ ಬಳಕೆದಾರರ ಮಾಹಿತಿ ಕೋರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇತ್ತೀಚೆಗೆ ತಿಳಿಸಿದ್ದರು.

ಜಮೈಕಾ, ಕೌಲಾಲಂಪುರ್ ನಂತರ ಬೆಂಗಳೂರಿನಲ್ಲಿ ಬೆದರಿಕೆ: ಎರಡು ಪ್ರತ್ಯೇಕ ಐಡಿಗಳಿಂದ ಮೇಲ್ ಕಳುಹಿಸಲಾಗಿದ್ದು, ಅವೆರಡೂ ಸಹ ಸೈಪ್ರಸ್ ಮೂಲದ ಬೀಬಲ್.ಕಾಮ್ ಎಂಬ ಸರ್ವಿಸ್ ಪ್ರೊವೈಡರ್​ನಲ್ಲಿ ನೋಂದಣಿಯಾಗಿವೆ. ಆದ್ದರಿಂದ ಅವುಗಳ ಬಳಕೆದಾರರು ಯಾರು ಎಂಬ ಬಗ್ಗೆ ಮಾಹಿತಿ ಕೋರಲಾಗಿತ್ತು. ಕಳೆದ ನವೆಂಬರ್ 12ರಂದು ಸೈಪ್ರಸ್ ಮೂಲದ ಬೀಬಲ್.ಕಾಮ್ ಮೂಲಕ ಜಮೈಕಾದ 70 ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಕಳುಹಿಸಲಾಗಿತ್ತು. ನವೆಂಬರ್ 23ರಂದು ಬೀಬಲ್ ಸರ್ವಿಸ್ ಪ್ರೊವೈಡರ್ ಮೂಲಕವೇ ಮಲೇಷ್ಯಾದ ರಾಜಧಾನಿ ಕೌಲಾಲಂಪುರ್​ನ 19 ಇಂಟರ್​ನ್ಯಾಷನಲ್ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು.

ಡಿ.1 ರಂದು ಬೆಂಗಳೂರು ನಗರದ 48 ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ 20 ಶಾಲೆಗಳೂ ಸೇರಿದಂತೆ ಒಟ್ಟು 68 ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇ–ಮೇಲ್‌ ಬಂದಿದ್ದವು. ಪರಿಶೀಲಿಸಿದಾಗ ಇದೊಂದು ಹುಸಿ ಬೆದರಿಕೆ ಎಂಬುದು ತಿಳಿದಿತ್ತು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಪಿ.ಎಸ್.ದಿನೇಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.