ETV Bharat / state

ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ ಶೇ.50 ರಷ್ಟು ಇಳಿಕೆ

author img

By ETV Bharat Karnataka Team

Published : Feb 20, 2024, 10:51 PM IST

Eಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ ಶೇ.50 ರಷ್ಟು ಇಳಿಕೆ
ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ ಶೇ.50 ರಷ್ಟು ಇಳಿಕೆ

ಡಿಸಿಎಂ ಮಂಡಿಸಿದ ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇಕಡ 50ರಷ್ಟು ಕಡಿತ ಸೇರಿದಂತೆ ತೆರಿಗೆದಾರರ ಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024ನ್ನು ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಈ ವಿಧೇಯಕದಿಂದ ಬೆಂಗಳೂರಿನ ನಾಗರಿಕರಿಗೆ ತೆರಿಗೆ ಬಾಬ್ತು, ದಂಡ ವಿನಾಯಿತಿ ಸೇರಿ ಸುಮಾರು ರೂ. 2,700 ಕೋಟಿ ರೂಪಾಯಿಯಷ್ಟು ಅನುಕೂಲವಾಗಲಿದೆ. ಜತೆಗೆ ಪಾಲಿಕೆಗೆ ಸುಮಾರು ರೂ.1,000 ಕೋಟಿಯಷ್ಟು ಆಸ್ತಿ ತೆರಿಗೆ ಬರಲಿದೆ. ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5-7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಹಾಗೂ 3 ಲಕ್ಷದಷ್ಟು ಮಂದಿ ಭಾಗಶಃ ತೆರಿಗೆ ಪಾವತಿದಾರರಿಗೆ ಒಟ್ಟಾರೆ 13 ರಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ವಿಧೇಯಕದಲ್ಲಿ ಬಡ ಹಾಗೂ ದುರ್ಬಲ ವರ್ಗದವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಸರ್ಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇರುವುದಿಲ್ಲ. 1 ಸಾವಿರ ಚದರ್​ ಅಡಿ ವರೆಗಿನ ಸ್ವಯಂ ಬಳಕೆ ಆಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗಿದೆ. ವಸತಿ ಮತ್ತು ಮಿಶ್ರ ಆಸ್ತಿದಾರರ (ವಸತಿ ಮತ್ತು ವಾಣಿಜ್ಯ) ಬಾಕಿಯನ್ನು ಎಷ್ಟೇ ವರ್ಷದಿಂದ ಉಳಿಸಿಕೊಂಡಿದ್ದರೂ ಹಿಂದಿನ 5 ವರ್ಷಕ್ಕೆ ಮಾತ್ರ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. 5 ವರ್ಷಕ್ಕಿಂತ ಹಿಂದಿನ ಅವಧಿಗೆ ಬಡ್ಡಿ ಮನ್ನಾ ಮಾಡಲಾಗಿದೆ.

ಇದೊಂದು ಜನಸ್ನೇಹಿ ತಿದ್ದುಪಡಿಯಾಗಿದ್ದು, ಸರ್ಕಾರಕ್ಕೆ ನಷ್ಟವಾದರೂ ಪರವಾಗಿಲ್ಲ, ಜನರಿಗೆ ಅನುಕೂಲವಾಗಲಿ ಎಂದು ಈ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಶಿವಕುಮಾರ್ ಸದನದಲ್ಲಿ ತಿಳಿಸಿದರು. ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ತಿದ್ದುಪಡಿ ವಿಧೇಯಕ ಅಂಗೀಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡ ತೆರಿಗೆ ಮೇಲೆ ದುಪ್ಪಟ್ಟು ದಂಡ ಪಾವತಿಸಬೇಕಾಗಿ ಬಂದು ಬೆಂಗಳೂರು ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ತೆರಿಗೆ ಮೊತ್ತಕ್ಕಿಂತ ದಂಡದ ಪ್ರಮಾಣವೇ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಈಗ ಸರ್ಕಾರ ಹಿಂದಿನ ಸರಕಾರ ಅಂಗಿಕರಿಸಿದ್ದ ಕಾಯ್ದೆಗೆ ತಿದ್ದುಪಡಿ ತಂದು ನಾಗರಿಕರ ತೆರಿಗೆ ಹೊರೆ ಕಡಿಮೆ ಮಾಡಿದೆ.

ಇದನ್ನೂ ಓದಿ: ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.