ETV Bharat / state

ಬಿಬಿಎಂಪಿ ಬಜೆಟ್​: 12,369.46 ಕೋಟಿ ರೂ. ಮೊತ್ತದ ಆಯವ್ಯಯ ಮಂಡನೆ

author img

By ETV Bharat Karnataka Team

Published : Feb 29, 2024, 12:47 PM IST

Updated : Feb 29, 2024, 1:01 PM IST

BBMP budget
ಬಿಬಿಎಂಪಿ ಬಜೆಟ್​ ಮಂಡನೆ

BBMP budget: ಇಂದು ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ 2024-25ನೇ ಸಾಲಿನ ಬಜೆಟ್​ ಮಂಡಿಸಿದರು.

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ 2024-25ನೇ ಸಾಲಿನಲ್ಲಿ 12,369.46 ಕೋಟಿ ರೂ. ಬಜೆಟ್ ಮಂಡಿಸಿದೆ. ಒಟ್ಟು 2.17 ಕೋಟಿ ರೂ. ಉಳಿತಾಯದ ಬಜೆಟ್ ಇದಾಗಿದೆ. ಗುರುವಾರ ನಗರದ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ಬಿಬಿಎಂಪಿ 2024-25ನೇ ಸಾಲಿನ ಆಯವ್ಯಯವನ್ನು ಆಡಳಿತಗಾರ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಪ್ರಸ್ತುತ ಪಡಿಸಿದರು.

2024-25ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶುಲ್ಕ ಸೇರಿ ಒಟ್ಟು ಸ್ವೀಕೃತಿ 12,371.63 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ಖರ್ಚು 12,369.46 ಕೋಟಿ ರೂ. ಇರಲಿದೆ ಎಂದು ಶಿವಾನಂದ ಕಲಕೇರಿ ಬಜೆಟ್ ಭಾಷಣದಲ್ಲಿ ತಿಳಿಸಿದರು. ಈ ವೇಳೆ ವಿಶೇಷ ಆಯುಕ್ತರು, ವಲಯ ಆಯುಕ್ತರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

BBMP budget
ಬಿಬಿಎಂಪಿ ಬಜೆಟ್​ ಮಂಡನೆ

ಪಾಲಿಕೆ ವ್ಯಾಪ್ತಿಯಲ್ಲಿನ 20 ಲಕ್ಷ ಆಸ್ತಿಗಳ ಗಣಕೀಕರಣ: ಪಾಲಿಕೆ ವ್ಯಾಪ್ತಿಯಲ್ಲಿರುವ 20 ಲಕ್ಷ ಆಸ್ತಿಗಳನ್ನು ಗಣಕೀಕರಣಗೊಳಿಸಿ, ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತು ಕಾವೇರಿ-2 ತಂತ್ರಾಂಶದೊಂದಿಗೆ ಪಾಲಿಕೆಯ 'ನಮ್ಮ ಸ್ವತ್ತು' ವ್ಯವಸ್ಥೆಯನ್ನು ಸಂಯೋಜನೆ ಮಾಡಲಾಗುವುದು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಪಾಲಿಕೆಯ ಕಂದಾಯ ವಿಭಾಗದ ಅವವ್ಯಯದ ಸಂಬಂಧ ಮಾತನಾಡಿ, ಆಸ್ತಿ ತೆರಿಗೆ ಮೇಲಿನ ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆದಾರರಿಗೆ ಓ. ಟಿ.ಎಸ್ ಜಾರಿಗೆ ತಂದಿದ್ದು, ಇದರಿಂದ 15 ಲಕ್ಷ ತೆರಿಗೆದಾರರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಾರ್ಗದರ್ಶನ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗಲಿದೆ. ಪಾಲಿಕೆಯಲ್ಲಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು ಮತ್ತು ಇದರಿಂದ 500 ಕೋಟಿ ರೂ.ಗಳಷ್ಟು ಜಾಹೀರಾತು ಆದಾಯವನ್ನು ಗಳಿಸುವ ನೀರಿಕ್ಷೆಯಿದೆ. ಒಟ್ಟು 6000 ಕೋಟಿಯ ರೂ ಅಸ್ತಿ ತೆರಿಗೆ ನಿರೀಕ್ಷಿಸಲಾಗಿದೆ. ಪ್ರೀಮಿಯಂ ಎಫ್‌ಎಆರ್ ವ್ಯವಸ್ಥೆಯನ್ನು ಜಾರಿಗೆ ತಂದು ಇದರಿಂದ 1000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು.

BBMP budget
ಬಿಬಿಎಂಪಿ ಬಜೆಟ್​ ಮಂಡನೆ

ಬೆಂಗಳೂರು ಸುಮಾರು 741 ಚದರ ಕಿಲೋ ಮೀಟರ್​ ವಿಸ್ತೀರ್ಣದೊಂದಿಗೆ 225 ವಾರ್ಡುಗಳಿಗೆ ವಿಶಾಲವಾದ ನಗರವಾಗಿದೆ. ಬೆಂಗಳೂರಿನ ನಾಗರೀಕರಿಗೆ ಉನ್ನತೀಕರಿಸಿದ ಯೋಜಿತ ಸಂಚಾರ ವ್ಯವಸ್ಥೆಗಳ ಅಳವಡಿಕೆ, ನಡಿಗೆ ಸ್ನೇಹಿ ಪುಟ್​ಪಾತ್‌ಗಳು ಮತ್ತು ಹಸಿರಿನಿಂದ ಕಂಗೊಳಿಸುವ ನಗರವನ್ನು ಮತ್ತಷ್ಟು ಹಸಿರಾಗಿಸಿ, ನಾಗರೀಕರ ಉಸಿರಾಗಿ ರೂಪಿಸುವ ಆಶಯವನ್ನು ಬ್ರ್ಯಾಂಡ್ ಬೆಂಗಳೂರು ಹೊಂದಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ನಗರದ ಮಕ್ಕಳನ್ನು ಒಳಗೊಂಡಂತೆ ಎಲ್ಲಾ ಸ್ತರದ ನಾಗರೀಕರಿಂದ ಸರಿಸುಮಾರು 70,000 ಸಲಹೆಗಳನ್ನು ಕ್ರೋಢೀಕರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ ಸಮಿತಿಯು ಎಲ್ಲಾ ಸಲಹೆಗಳನ್ನು ಪರಿಗಣಿಸಿ, ಪರಿಷ್ಕರಿಸಿ, ನೀಡುವ ನಿರ್ದೇಶನಗಳಂತೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಬ್ರ್ಯಾಂಡ್ ಬೆಂಗಳೂರು ಉದ್ದೇಶಕ್ಕಾಗಿ 2024- 25ನೇ ಸಾಲಿನ ಪಾಲಿಕೆಯ ಆಯವ್ಯಯದಲ್ಲಿ ದಾಖಲೆಯ 1,580 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ 8 ವಿಭಾಗಗಳಾದ ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು, ಟೆಕ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರು, ನೀರಿನ ಭದ್ರತೆಯ ಬೆಂಗಳೂರು ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ.

ಈ ಸಾಲಿನಲ್ಲಿ 16,000 ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. 8 ವಲಯಗಳಲ್ಲಿ ಅಧಿಕಾರ ವಿಕೇಂದ್ರಿಕರಣ ಮಾಡಿ ಆಡಳಿತವನ್ನು ಬಲಪಡಿಸಲು ಯೋಜನೆ ರೂಪಿಸಲಾಗುವುದು. ಒಂದೊಂದು ವಲಯಕ್ಕೆ ಒಬ್ಬ ಐ.ಎ.ಎಸ್ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು. ಪಾಲಿಕೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಸಲುವಾಗಿ ಒಂದು ಗ್ರಂಥಾಲಯ ಮತ್ತು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆ: ₹436 ಕೋಟಿ ಗಾತ್ರದ ಬಜೆಟ್ ಮಂಡನೆ

Last Updated :Feb 29, 2024, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.