ETV Bharat / state

ಬಾಗಲಕೋಟೆ: 5ನೇ ಗೆಲುವಿನ ಉತ್ಸಾಹದಲ್ಲಿ ಬಿಜೆಪಿ, ಕಮಲ ಕೋಟೆ ಭೇದಿಸುವ ತವಕದಲ್ಲಿ ಕಾಂಗ್ರೆಸ್‌ - Bagalkote Lok Sabha Profile

author img

By ETV Bharat Karnataka Team

Published : Apr 15, 2024, 4:10 PM IST

Updated : Apr 23, 2024, 12:30 PM IST

ಬಾಗಲಕೋಟೆ ಲೋಕಸಭಾ ಕ್ಷೇತ್ರ
ಬಾಗಲಕೋಟೆ ಲೋಕಸಭಾ ಕ್ಷೇತ್ರ

ಲೋಕಸಭಾ ಚುನಾವಣೆಯ ಕಾವು ದೇಶದಲ್ಲಿ ಹೆಚ್ಚುತ್ತಿದೆ. ಬಾಗಲಕೋಟೆ ಕ್ಷೇತ್ರ ಕೂಡಾ ಇದರಿಂದ ಹೊರತಲ್ಲ. ಕ್ಷೇತ್ರದಿಂದ ಸತತ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಇದೀಗ ಐದನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿರುವ ಕಮಲ ಕಲಿಗೆ ಠಕ್ಕರ್‌ ಕೊಡಲು ಕಾಂಗ್ರೆಸ್​ ಪಕ್ಷ ಸಜ್ಜಾಗಿದೆ.

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಯಲ್ಲಿ ಬಿಜೆಪಿ ಗೆದ್ದಿದೆ. ಹೀಗಾಗಿ ಕ್ಷೇತ್ರ ಕೇಸರಿ ಪಕ್ಷದ ಭದ್ರಕೋಟೆಯಾಗಿದೆ. ಇಂತಹ ಭದ್ರಕೋಟೆಯನ್ನು ಪುಡಿಗಟ್ಟಲು ಈ ಬಾರಿ ಕಾಂಗ್ರೆಸ್‌ ಭಾರೀ ಕಸರತ್ತು ನಡೆಸುತ್ತಿದೆ.

ಬಿಜೆಪಿಯಿಂದ 5ನೇ ಬಾರಿಗೆ ಹಾಲಿ ಸಂಸದ ಪಿಸಿ ಗದ್ದಿಗೌಡರ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹೊಸ ಮುಖ ಸಂಯುಕ್ತಾ ಪಾಟೀಲ ಅಖಾಡದಲ್ಲಿದ್ದಾರೆ. ಸಂಯುಕ್ತಾ ಪಾಟೀಲ ಸಚಿವ ಶಿವಾನಂದ ಪಾಟೀಲರ ಪುತ್ರಿ. ಗದ್ದಿಗೌಡರ ತಮ್ಮ ಅಭಿವೃದ್ಧಿ ಕಾರ್ಯ, ಸಂಘಟನೆ ಮತ್ತು ಮೋದಿ ಅವರ ಅಲೆ ನಂಬಿಕೊಂಡಿದ್ದಾರೆ. ಇತ್ತ, ಸಂಯುಕ್ತಾ ಪಾಟೀಲ್ ಕೈ​​ ಪಕ್ಷದ ವರ್ಚಸ್ಸು ಹಾಗೂ ತಂದೆ, ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ್​ ಅವರ ಕೃಪಾಕಟಾಕ್ಷವನ್ನು ನೆಚ್ಚಿಕೊಂಡಿದ್ದಾರೆ.

ಬಾಗಲಕೋಟೆ ಲೋಕಸಭಾ ಮತಕ್ಷೇತ್ರ
ಬಾಗಲಕೋಟೆ ಲೋಕಸಭಾ ಮತಕ್ಷೇತ್ರ

ಮತದಾರರ ಮಾಹಿತಿ: ಜಿಲ್ಲೆಯ ಒಟ್ಟು ಜನಸಂಖ್ಯೆ 25,41,799. ಪುರುಷರು 12,70,564, ಮಹಿಳೆಯರು 12,71,369. ಒಟ್ಟು ಮತದಾರರು 18,02,462. ಇದರಲ್ಲಿ ಪುರುಷರು 8,93,698. ಮಹಿಳೆಯರು 9,08,664. ತೃತೀಯ ಲಿಂಗದ 100 ಮತದಾರರಿದ್ದಾರೆ.

ಜಿಲ್ಲೆಯ ಹುನಗುಂದ, ಬಾದಾಮಿ, ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ ಹಾಗೂ ತೇರದಾಳ ಸೇರಿ 7 ವಿಧಾನಸಭೆ ಮತಕ್ಷೇತ್ರ ಹಾಗೂ ಗದಗ ಜಿಲ್ಲೆಯ ನರಗುಂದ ಮತಕ್ಷೇತ್ರ ಹೀಗೆ ಒಟ್ಟು 8 ವಿಧಾನಸಭೆ ಮತಕ್ಷೇತ್ರಗಳು ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿವೆ. ಲೋಕಸಭಾ ವ್ಯಾಪ್ತಿಯಲ್ಲಿ ಲಿಂಗಾಯತ ಸಮುದಾಯ ನಿರ್ಣಾಯಕರು. ಕುರುಬರು, ಎಸ್‌ಸಿ-ಎಸ್ಟಿ ಹಾಗೂ ಅಲ್ಪಸಂಖ್ಯಾತ ಮತದಾರರು ಕೂಡಾ ಕ್ಷೇತ್ರದಲ್ಲಿ ಮಹತ್ವದ ಪಾಲು ಹೊಂದಿದ್ದಾರೆ.

ಪಿಸಿ ಗದ್ದಿಗೌಡರ
ಪಿಸಿ ಗದ್ದಿಗೌಡರ

ಕ್ಷೇತ್ರದ ಇತಿಹಾಸ: 1957ರಿಂದ ಇಲ್ಲಿಯವರೆಗೂ ಒಂದೇ ಪಕ್ಷದಲ್ಲಿದ್ದು ನಾಲ್ಕು ಬಾರಿ ಆಯ್ಕೆಯಾಗಿರುವ ಅಪರೂಪದ ದಾಖಲೆಯನ್ನು ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಮಾಡಿದ್ದಾರೆ.

1957ರಲ್ಲಿ ಕಾಂಗ್ರೆಸ್‌ನಿಂದ ಆರ್.​ಬಿ.ಬಿದರಿ ಎಂಬವರು ಕ್ಷೇತ್ರ ರಚನೆಯಾದ ಬಳಿಕ ಮೊದಲು ಸಲ ಸ್ಪರ್ಧಿಸಿದ್ದರು. ಆಗ 2,43,679 ಮತದಾನವಾಗಿತ್ತು. ಅದರಲ್ಲಿ 1,58,171 ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಡೆದು ಗೆಲುವು ಸಾಧಿಸಿದ್ದರು. ಎಸ್.​​ಬಿ.ದೇಸಾಯಿ ಪಕ್ಷೇತರ ಅಭ್ಯರ್ಥಿಯಾಗಿ 85,508 ಮತಗಳನ್ನು ಪಡೆದು ಸೋಲುಂಡಿದ್ದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್​​ಬಿ ಪಾಟೀಲ ಸ್ಪರ್ಧಿಸಿದ್ದು, ಮೊದಲು ಬಾರಿಗೆ ಬಿಜೆಪಿಯಿಂದ ಎನ್​​ಕೆ ಧರ್ಸಿ ಎಂಬವರು ಸ್ಪರ್ಧೆ ಮಾಡಿದ್ದರು. ಒಟ್ಟು 2,68,395 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 1,88,849 ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಪಕ್ಷದ ಅಭ್ಯರ್ಥಿ 67,820 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಎಸ್​​ಬಿ ಪಾಟೀಲ ಸ್ಪರ್ಧೆ ಮಾಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಎಡಿ ತೊಂಡಿಹಾಳ ಹಾಗೂ ಬಿಜೆಪಿಯಿಂದ ಎನ್​​ಕೆ ಭಾಟಿ ಸ್ಪರ್ಧೆ ಮಾಡಿದ್ದರು. ಆಗ ಒಟ್ಟು 3,16,256 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ 1,83,984 ಮತಗಳನ್ನು ಪಡೆದು ಜಯಗಳಿಸಿದ್ದು, ಪಕ್ಷೇತರ ಅಭ್ಯರ್ಥಿ 58,304 ಹಾಗೂ ಬಿಜೆಪಿ ಅಭ್ಯರ್ಥಿ 57,315 ಮತಗಳನ್ನು ಪಡೆದು ಸೋಲುಡಿದ್ದರು. 1971ರಲ್ಲಿ ಭಾರತೀಯ ಕಾಂಗ್ರೆಸ್​ ಜಗಜೀವರಾವ್ ಪಕ್ಷದ ವತಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಎಸ್​​ಬಿ ಪಾಟೀಲ ಮತ್ತೆ ಸ್ಪರ್ಧಿಸಿದ್ದರು. ಎಸ್​​ಎಸ್​ ಮೆಳ್ಳಿಗೇರಿ ಎಂಬವರು ಕಾಂಗ್ರೆಸ್ ಪಕ್ಷದ ನಿಜಲಿಂಗಪ್ಪ ಬಣದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದರು. ಆಗ 2,99,677 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ 1,97,589 ಮತಗಳನ್ನು ಪಡೆದು ಜಗಜೀವನರಾವ್ ಬಣದ ಕಾಂಗ್ರೆಸ್ ಪಕ್ಷ ಜಯಗಳಿಸಿದ್ದು, ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದ ಬಣಕ್ಕೆ ಸೋಲಾಗಿತ್ತು.

ಸಂಯುಕ್ತಾ ಪಾಟೀಲ
ಸಂಯುಕ್ತಾ ಪಾಟೀಲ

1977ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಸವನಗೌಡ ಸಂಗನಗೌಡ ಪಾಟೀಲ ಎಂಬವರು ಸ್ಪರ್ಧೆ ಮಾಡಿದ್ದು, ಭಾರತೀಯ ಲೋಕದಳದಿಂದ ಕೃಷ್ಣಪ್ಪ ಕೇಶವರಾವ್ ತುಂಗಳ ಎಂಬವರು ಪ್ರತಿಸ್ಪರ್ಧಿಯಾಗಿದ್ದರು. 3,66,290 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2,12,393 ಮತಗಳು ಪಡೆದು ಗೆಲುವು ಸಾಧಿಸಿತು. ಭಾರತೀಯ ಲೋಕದಳ 1,40,295 ಮತಗಳನ್ನು ಪಡೆದು ಸೋಲು ಕಂಡಿತ್ತು. 1980ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (I)ನಿಂದ ವೀರನಗೌಡ ಪಾಟೀಲ ಸ್ಪರ್ಧಿಸಿದ್ದು, ಜನತಾ ಪಕ್ಷದಿಂದ ಹುಂಡೆಕಾರ ತೋಟಪ್ಪ ಮಲ್ಲಪ್ಪ ಎಂಬವರು, ಕಾಂಗ್ರೆಸ್ ಪಕ್ಷ (U) ದಿಂದ ಅದೃಷ್ಟಪ್ಪ ವಾಸಪ್ಪ ದೇಸಾಯಿ ಎಂಬವರು ಹಾಗೂ ಜನತಾ ಪಾರ್ಟಿಯಿಂದ ಶಿವಲಿಂಗಪ್ಪ ರಾಚಪ್ಪ ಕವಿಶೆಟ್ಟಿ ಸ್ಪರ್ಧಿಸಿದ್ದರು. ಆಗ 4,29,698 ಮತ ಚಲಾವಣೆ ಆಗಿದ್ದು, ಇದರಲ್ಲಿ ಕಾಂಗ್ರೆಸ್ (I)ಗೆ 2,45,812 ಮತಗಳಿಂದ ಜಯಗಳಿಸಿತು. ಜನತಾ ಪಕ್ಷಕ್ಕೆ 91,839 ಮತಗಳು, ಕಾಂಗ್ರೆಸ್ (U)ಗೆ 64,132 ಹಾಗೂ ಜನತಾ ಪಾರ್ಟಿಗೆ 10,320 ಮತಗಳನ್ನು ಪಡೆದು ಸೋಲು ಕಂಡಿದ್ದವು.

1984ರಲ್ಲಿ ಕಾಂಗ್ರೆಸ್ ಪಕ್ಷದಿಂದ ಭೀಮನಗೌಡ ಹನಮಂತಗೌಡ ಪಾಟೀಲ ಎಂಬವರು ಸ್ಪರ್ಧೆ ಮಾಡಿದ್ದು, ಜನತಾ ಪಕ್ಷದಿಂದ ಪರ್ವತಗೌಡ ಮಲ್ಲನಗೌಡ ನಾಡಗೌಡ ಎಂಬವರು ಪ್ರತಿಸ್ಪರ್ಧಿಯಾಗಿದ್ದರು. ಒಟ್ಟು 4,87,671 ಮತಗಳ ಚಲಾವಣೆಯಾಗಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2,34,955 ಮತಗಳು ಪಡೆದುಕೊಂಡು, ಜಯಶಾಲಿಯಾಗಿದ್ದರು. ಜನತಾಪಕ್ಷ 2,24,443 ಮತಗಳಿಂದ ಪಡೆದು ಪರಾಜಿತರಾಗಿದ್ದರು. 1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮಣ್ಣಪ್ಪ ಸುಭಾಸ ಪಾಟೀಲ, ಜನತಾದಳದಿಂದ ಶಿವಲಿಂಗಪ್ಪ ಸಂಗಪ್ಪ ಮಲಘಾನ ಕೆಆರ್​ಎಸ್​ ಪಕ್ಷದಿಂದ ಶಂಕರಗೌಡ ವೀರುಪಾಕ್ಷಗೌಡ ಪಾಟೀಲ ಹಾಗೂ ಜನತಾ ಪಾರ್ಟಿಯಿಂದ ಮಲ್ಲಪ್ಪ ತೋಟಪ್ಪ ಹುಂಡೇಕಾರ ಸ್ಪರ್ಧೆ ಮಾಡಿದ್ದರು. ಆಗ 6,63,239 ಮತಗಳು ಚಲಾವಣೆಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ 3,06,990 ಮತಗಳನ್ನು ಪಡೆದು ಜಯಸಾಲಿ ಆಗಿದ್ದರು. ಜನತಾದಳ ಅಭ್ಯರ್ಥಿ 2,74,752 ಮತಗಳು ಪಡೆದು ಸೋಲು ಕಂಡಿದ್ದರು. ಐದು ಪಕ್ಷೇತರ ಸೇರಿದಂತೆ ಒಟ್ಟು 9 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಇತಿಹಾಸದ ಪುಟ ಸೇರಿದ ಚುನಾವಣೆ: 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿದ್ದಪ್ಪ ಭೀಮಪ್ಪ ನ್ಯಾಮಗೌಡರ ಸ್ಪರ್ಧೆ ಮಾಡಿದ್ದು, ಜನತಾದಳದಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ ಹೆಗಡೆ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಪಿಎಚ್ ಪೂಜಾರ ಸ್ಪರ್ಧಿಸಿದ್ದರು. ಮುಖ್ಯಮಂತ್ರಿಯೊಬ್ಬರು ಬಾಗಲಕೋಟೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದಿತ್ತು. ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಹಿನ್ನೆಲೆಯಲ್ಲಿ ಅನುಕಂಪದ ಅಲೆಯಲ್ಲಿ ರಾಮಕೃಷ್ಣ ಹೆಗಡೆ ಸೋಲು ಕಂಡಿರುವುದು ಇತಿಹಾಸದ ಪುಟ ಸೇರಿದೆ. ಆಗ ಒಟ್ಟು 6,12,827 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2,76,849 ಮತಗಳನ್ನು ಪಡೆದುಕೊಂಡು ಜಯಭೇರಿ ಸಾಧಿಸಿತು. ಜನತಾದಳದ ರಾಮಕೃಷ್ಣ ಹೆಗಡೆ ಅವರಿಗೆ 2,55,645 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಬಿಜೆಪಿ ಕೇವಲ 33,681 ಮತಗಳನ್ನು ಮಾತ್ರ ಪಡೆದುಕೊಂಡಿತ್ತು. ಈ ಸಂದರ್ಭದಲ್ಲಿ ಒಟ್ಟು 13 ಜನರು ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿರುವುದು ಗಮನ ಸೆಳೆದಿತ್ತು.

1996ರಲ್ಲಿ ಜನತಾದಳದಿಂದ ಹುಲ್ಲಪ್ಪ ಯಮನಪ್ಪ ಮೇಟಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಸಿದ್ದು ಭೀಮಪ್ಪ ನ್ಯಾಮಗೌಡ ಹಾಗೂ ಬಿಜೆಪಿಯಿಂದ ವೀರಣ್ಣ ಚರಂತಿಮಠ ಸೇರಿದಂತೆ 11 ಜನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಒಟ್ಟು 6,75,719 ಮತ ಚಲಾವಣೆಯಾಗಿದ್ದು, ಇದರಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಅಭ್ಯರ್ಥಿ ಜಯಗಳಿಸಿದ್ದು ವಿಶೇಷವಾಗಿತ್ತು. ಜನತಾದಳ 2,50,683 ಮತಗಳನ್ನು ಪಡೆದು ಜಯಶಾಲಿಯಾಗಿತ್ತು. ಕಾಂಗ್ರೆಸ್ 2,29,351 ಮತಗಳು ಹಾಗೂ ಬಿಜೆಪಿ 1,54,161 ಮತಗಳನ್ನು ಪಡೆದು ಪರಾಜಿತಗೊಂಡಿದ್ದವು. 1998ರಲ್ಲಿ ಲೋಕಸೇವಾ ಸಂಘ ಪಕ್ಷದಿಂದ ಅಜಯಕುಮಾರ ಸರನಾಯಕ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಮತ್ತೆ ಸಿದ್ದು ನ್ಯಾಮಗೌಡ ಸ್ಪರ್ಧೆ ಮಾಡಿದ್ದರು. ಜನತಾದಳದಿಂದ ಹುಲ್ಲಪ್ಪ ಮೇಟಿ ಹಾಗೂ ಇತರ ಮೂವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆಗ ಒಟ್ಟು 7,24,951 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಲೋಕಸೇವಾ ಸಂಘದ ಅಭ್ಯರ್ಥಿ 3,52,795 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ 2,69,163 ಹಾಗೂ ಜನತಾದಳ 80,868 ಮತಗಳನ್ನು ಪಡೆದು ಪರಾಜಿತಗೊಂಡಿದ್ದವು. 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಆರ್​ಎಸ್​ ಪಾಟೀಲ, ಜನತಾದಳ (U) ದಿಂದ ಮತ್ತೆ ಅಜೇಯಕುಮಾರ ಸರನಾಯಕ, ಜೆಡಿಎಸ್​ನಿಂದ ಅಶೋಕ ವೀರುಪಾಕ್ಷಪ್ಪ ಗಾಣಿಗೇರ ಸ್ಪರ್ಧೆ ಮಾಡಿದ್ದರು. ಒಟ್ಟು 7,83,829 ಮತದಾನವಾಗಿದ್ದು, ಇದರಲ್ಲಿ ಕಾಂಗ್ರೆಸ್ 3,78,488 ಮತಗಳನ್ನು ಪಡೆದು ಜಯಭೇರಿ ಸಾಧಿಸಿತ್ತು. ಜೆಡಿಯು 3,02,054 ಮತಗಳು ಹಾಗೂ ಜೆಡಿಎಸ್ 72,422 ಮತಗಳನ್ನು ಪಡೆದು ಸೋಲುಂಡಿದ್ದವು.

2004ರಲ್ಲಿ ಬಿಜೆಪಿಯಿಂದ ಗದ್ದಿಗೌಡರ, ಕಾಂಗ್ರೆಸ್ ಪಕ್ಷದಿಂದ ಆರ್​​ಎಸ್​ ಪಾಟೀಲ, ಜೆಡಿಎಸ್‌ನಿಂದ ಧರೆಪ್ಪ ಸಿದ್ದಪ್ಪ ಸಾಂಗ್ಲೀಕರ ಸ್ಪರ್ಧಿಸಿದ್ದರು. ಒಟ್ಟು 8,68,472 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಬಿಜೆಪಿ ಅಭ್ಯರ್ಥಿ 4,59,451 ಮತಗಳನ್ನು ಪಡೆದು ಜಯಭೇರಿ ಸಾಧಿಸಿದ್ದರು. ಕಾಂಗ್ರೆಸ್ 2,92,068 ಮತಗಳು ಹಾಗೂ ಜೆಡಿಎಸ್ ಪಕ್ಷ 64,075 ಮತಗಳನ್ನು ಪಡೆದು ಸೋಲು ಅನುಭವಿಸಿದ್ದವು. 2009ರಲ್ಲಿ ಬಿಜೆಪಿಯಿಂದ ಮತ್ತೆ ಗದ್ದಿಗೌಡರ, ಕಾಂಗ್ರೆಸ್ ಪಕ್ಷದಿಂದ ಜೆಟಿ ಪಾಟೀಲ ಸೇರಿ ಒಟ್ಟು 15 ಜನ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಟ್ಟು 8,59,928 ಮತ ಚಲಾವಣೆಯಾಗಿದ್ದು, ಇದರಲ್ಲಿ ಬಿಜೆಪಿ ಅಭ್ಯರ್ಥಿ 4,13,272 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ 3,77,826 ಮತಗಳ ಪಡೆದುಕೊಂಡು ಪರಾಜಿತಗೊಂಡಿತ್ತು.

ಅಭ್ಯರ್ಥಿಗಳು
ಅಭ್ಯರ್ಥಿಗಳು

2014ರಲ್ಲಿ ಬಿಜೆಪಿಯಿಂದ ಮತ್ತೆ ಗದ್ದಿಗೌಡರ,ಕಾಂಗ್ರೆಸ್ ಪಕ್ಷದಿಂದ ಅಜೇಯಕುಮಾರ ಸರನಾಯಕ, ಜೆಡಿಎಸ್ ಪಕ್ಷದಿಂದ ರವಿ ಹುಣಶ್ಯಾಳ ಹಾಗೂ ನಿವೃತ್ತ ಪೊಲೀಸ್​ ಅಧಿಕಾರಿಯಾಗಿದ್ದ ಶಂಕರ ಬಿದರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಗಮನ ಸೆಳೆಯಲಾಗಿತ್ತು. 1,078,805 ಒಟ್ಟು ಮತ ಚಲಾವಣೆ ಆಗಿತ್ತು. ಇದರಲ್ಲಿ 5,71,548 ಮತಗಳು ಬಿಜೆಪಿ ಪಡೆದುಕೊಂಡು ಜಯಭೇರಿ ಸಾಧಿಸಿದರೆ, ಕಾಂಗ್ರೆಸ್ 4,54,988 ಮತಗಳು ಹಾಗೂ ಜೆಡಿಎಸ್ 7,237, ಪಕ್ಷೇತರ ಅಭ್ಯರ್ಥಿ ಶಂಕರ ಬಿದರಿ 10,959 ಮತಗಳನ್ನು ಪಡೆದು ಠೇವಣಿ ಕಳದುಕೊಂಡರು. 2019ರಲ್ಲಿ ಬಿಜೆಪಿ ಪಕ್ಷದಿಂದ ಪುನಃ ಪಿಸಿ ಗದ್ದಿಗೌಡರ, ಕಾಂಗ್ರೆಸ್ ಪಕ್ಷದಿಂದ ವೀಣಾ ಕಾಶಪ್ಪನವರ ಸೇರಿದಂತೆ ಒಟ್ಟು 12 ಜನ ಪಕ್ಷೇತರು ಸ್ಪರ್ಧಾಕಣದಲ್ಲಿದ್ದರು. ಆಗ 10,78,805 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಬಿಜೆಪಿ 6,64,638 ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 4,96,451 ಮತಗಳಿಗೆ ತೃಪ್ತಿಪಟ್ಟಿತ್ತು.

ಹೀಗೆ 1957ರಿಂದ ಇಲ್ಲಿಯವರೆಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಯು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಆಯ್ಕೆಯಾಗಿದ್ದಾರೆ. ಈಗ ಐದನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ತಮ್ಮ ಅದೃಷ್ಟ ಪರೀಕ್ಷೆಗೆ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಜಾತಿ, ಅಧಿಕಾರ ಹಾಗೂ ಇತರ ಅಂಶಗಳ ಮೂಲಕ ಗದ್ದಿಗೌಡರ ಅವರಿಗೆ ಕಟ್ಟಿ ಹಾಕಲು ತಂತ್ರ ರೂಪಿಸುತ್ತಿದೆ. ಆದರೆ, ಗದ್ದಿಗೌಡರ ನಾಲ್ಕು ಅವಧಿಯಲ್ಲಿ ತಾವು ಮಾಡಿರುವ ಸಾಧನೆ ಹಾಗೂ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಆಗಬೇಕು ಎನ್ನುವ ದೃಷ್ಟಿಯಿಂದ ಮತದಾರರು ಐದನೇ ಬಾರಿ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಹಂತಹ ಚುನಾವಣೆ; ಅತಿ ಹೆಚ್ಚು, ಅತಿ ಕಡಿಮೆ ಸ್ಪರ್ಧಿಗಳು ಯಾವ ಕ್ಷೇತ್ರದಲ್ಲಿದ್ದಾರೆ? - LOK SABHA ELECTION

Last Updated :Apr 23, 2024, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.