ETV Bharat / state

ಲೋಕಸಭಾ ಚುನಾವಣೆ: 'ಗಾಂವ್ ಚಲೋ' ಅಭಿಯಾನಕ್ಕೆ ನಾಳೆ ವಿಜಯೇಂದ್ರ ಚಾಲನೆ

author img

By ETV Bharat Karnataka Team

Published : Feb 7, 2024, 10:12 PM IST

BJP
ಬಿಜೆಪಿ

ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಚ್.ಗೊಲ್ಲಹಳ್ಳಿ ಗ್ರಾಮದಲ್ಲಿ ಗಾಂವ್ ಚಲೋ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡುವರು.

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರತಿ ಗ್ರಾಮವನ್ನೂ ತಲುಪಲು ಬಿಜೆಪಿ ಹೈಕಮಾಂಡ್ ರೂಪಿಸಿರುವ 'ಗಾಂವ್ ಚಲೋ' ಅಭಿಯಾನಕ್ಕೆ ಗುರುವಾರ ರಾಜ್ಯದಲ್ಲಿ ಚಾಲನೆ ಸಿಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಯಾನ ಉದ್ಘಾಟಿಸುವರು.

ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ರಾಜ್ಯಾಧ್ಯಕ್ಷರಿಗೆ ಸಾಥ್ ನೀಡಲಿದ್ದಾರೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಅಭಿಯಾನ ಆರಂಭಗೊಂಡಿದೆ. ರಾಜ್ಯದಲ್ಲಿ 28 ಸಾವಿರ ಕಂದಾಯ ಗ್ರಾಮಗಳನ್ನು ಈ ಅಭಿಯಾನ ಸಂಪರ್ಕಿಸಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೆಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿಗೆ ಹೊಸ ತಂಡ ಸಿಕ್ಕ ನಂತರ ಅನುಷ್ಠಾನಕ್ಕೆ ತರಲಾಗುತ್ತಿರುವ ಮೊದಲ ಸಂಘಟನಾತ್ಮಕ ಪ್ರಕ್ರಿಯೆ ಇದಾಗಿದೆ. ವಿಶೇಷ ಉತ್ಸುಕತೆಯಿಂದ ವಿಜಯೇಂದ್ರ ತಂಡ ಅಭಿಯಾನ ಆರಂಭಕ್ಕೆ ಸಿದ್ದತೆ ಮಾಡಿಕೊಂಡಿದೆ. ಮಾಜಿ ಸಚಿವ ಸುನೀಲ್ ಕುಮಾರ್ ಅಭಿಯಾನದ ಸಂಚಾಲಕರಾಗಿದ್ದು, ಬೂತ್ ಗೆದ್ದು ಕ್ಷೇತ್ರ ಗೆಲ್ಲಬೇಕೆನ್ನುವ ಬಿಜೆಪಿಯ ಚುನಾವಣಾ ಧ್ಯೇಯದಂತೆ ಒಟ್ಟಾರೆ ಬೂತ್ ಸಶಕ್ತೀಕರಣ ಉದ್ದೇಶವನ್ನು ಅಭಿಯಾನ ಒಳಗೊಂಡಿದೆ.

ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಸೇರ್ಪಡೆ: ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಬಿಜೆಪಿಗೆ ಹಲವು ನಾಯಕರು ಸೇರ್ಪಡೆಯಾದರು. ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡ, ಡಾ.ರವಿಕುಮಾರ್ ಅವರು ಬಿಜೆಪಿ ಸೇರಿದ್ದಾರೆ. ಪಕ್ಷದ ಧ್ವಜ ನೀಡುವ ಮೂಲಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬರಮಾಡಿಕೊಂಡರು.

ಲೋಕಾಯುಕ್ತ ದಾಳಿಯ ನಂತರ ಮಾಡಾಳ್ ವಿರೂಪಾಕ್ಷಪ್ಪ ಕುಟುಂಬಕ್ಕೆ ಟಿಕೆಟ್ ನೀಡದಂತೆ ಒತ್ತಡ ಬಂದ ಹಿನ್ನೆಲೆಯಲ್ಲಿ ಮಾಡಾಳು ಮಲ್ಲಿಕಾರ್ಜುನ್​​ಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೂ ಪಕ್ಷೇತರವಾಗಿ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಾಗಾಗಿ ಅವರನ್ನು 6 ವರ್ಷ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ ವರ್ಷ ಪೂರ್ಣಗೊಳ್ಳುವ ಮೊದಲೇ ಇಂದು ಉಚ್ಚಾಟನೆ ವಾಪಸ್ ಪಡೆದು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಮೂಲಕ ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂಓದಿ: ಸಿಎಂ ಜನತಾದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ : ನೋಡಲ್ ಅಧಿಕಾರಿಗಳ ನಿಯೋಜನೆ, ಪ್ರತ್ಯೇಕ ಕೌಂಟರ್ ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.