ETV Bharat / state

ಮದುವೆ ಕಾರ್ಯಕ್ರಮದಲ್ಲಿ ಕಳ್ಳತನ: ಓರ್ವನ ಬಂಧನ, ₹61 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ - Dharwad Theft Case

author img

By ETV Bharat Karnataka Team

Published : Mar 26, 2024, 10:13 AM IST

Updated : Mar 26, 2024, 12:10 PM IST

ವಶಪಡಿಸಿಕೊಂಡ ಚಿನ್ನದೊಂದಿಗೆ ವಿದ್ಯಾಗಿರಿ ಪೊಲೀಸರು
ವಶಪಡಿಸಿಕೊಂಡ ಚಿನ್ನದೊಂದಿಗೆ ವಿದ್ಯಾಗಿರಿ ಪೊಲೀಸರು

ಧಾರವಾಡದ ಓಶಿಯನ್​​ ಪರ್ಲ್​ ಹೋಟೆಲ್​ನಲ್ಲಿ ಮದುವೆ ಕಾರ್ಯಕ್ರಮದ ವೇಳೆ ನಡೆದ ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿಕೆ

ಧಾರವಾಡ: ಜಿಲ್ಲೆಯ ಹೊರವಲಯದಲ್ಲಿರುವ ಹೋಟೆಲ್​ ಓಶಿಯನ್​​ ಪರ್ಲ್​ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ನಡೆದಿದ್ದ ಕಳ್ಳತನ ಪ್ರಕರಣವನ್ನು ಜಿಲ್ಲೆಯ ವಿದ್ಯಾಗಿರಿ ಪೊಲೀಸರು ಬಗೆಹರಿಸಿದ್ದಾರೆ. ವಜ್ರಮಿಶ್ರಿತ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಈ ಪ್ರಕರಣದಲ್ಲಿ ಸದ್ಯ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, 61,14,000 ರೂ ಮೌಲ್ಯದ 964 ಗ್ರಾಂ ತೂಕದ ಚಿನ್ನಾಭರಣ ಹಾಗು ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಮಾರ್ಚ್ 6ರಂದು ಹುಬ್ಬಳ್ಳಿ ನಗರ ನಿವಾಸಿ ಅರುಣಕುಮಾರ್​ ಗಿರಿಯಾಪೂರ ಎಂಬವರ ಮಗಳ ಮದುವೆಯಲ್ಲಿ ಬ್ಯಾಂಡ್​ ಟೀಂನ ಸದಸ್ಯರಾಗಿ ಬಂದು ಮನೆಯವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿತ್ತು. ಮದುವೆ ವೇದಿಕೆಯ ಪಕ್ಕದಲ್ಲಿಟ್ಟಿದ್ದ ಬಂಗಾರದ ಚೀಲವನ್ನು ಕಳ್ಳರ ತಂಡದ ಓರ್ವ ಬಾಲಕ ತೆಗೆದುಕೊಂಡು ಹೋಗಿದ್ದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಈ ಜಾಡು ಹಿಡಿದು ಹಲವು ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕೊನೆಗೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ಬಾಲಕನನ್ನು ಸೆರೆ ಹಿಡಿದಿದ್ದಾರೆ.

ಸಿನಿಮಾದಷ್ಟೇ ಸಸ್ಪೆನ್ಸ್​​ ಈ ಪ್ರಕರಣ-ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್​: "ಕಳ್ಳತನ ನಡೆದ ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದಾಗ ಸಿಸಿಟಿವಿ ವಿಡಿಯೋ ಬಿಟ್ಟರೆ ಬೇರೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ, ಪ್ರಕರಣ ಭೇದಿಸುವುದು ಸವಾಲಾಗಿತ್ತು. ಇದಕ್ಕಾಗಿ ವಿಶೇಷ ತಂಡ ರಚಿಸಲಾಯಿತು. ಆರೋಪಿಗಳ ದೈಹಿಕ ಕುರುಹುಗಳು ಸಿಗದೇ ಇದ್ದಾಗ, ವೈಜ್ಞಾನಿಕವಾಗಿ ತನಿಖೆ ನಡೆಯುತ್ತದೆ. ಈ ಮೂಲಕ ಕೆಲವು ವಾಹನಗಳನ್ನು ಪತ್ತೆ ಹಚ್ಚಿದೆವು. ಆಗ ಒಂದು ವಾಹನದ ಟ್ಯಾಗ್​ ಅನುಮಾನಾಸ್ಪದ ರೀತಿಯಲ್ಲಿ ಕಂಡಿದ್ದು, ವಿಸ್ತೃತ ತನಿಖೆ ಮಾಡಲಾಯಿತು. ಗುಜರಾತ್, ಅಹಮದಾಬಾದ್​, ಮುಂಬೈ, ಉಜ್ಜಯಿನಿ ಇತ್ಯಾದಿ ಕಡೆಗಳಲ್ಲಿ ಪ್ರಯಾಣಿಸಿ ಕಾರ್ಯಾಚರಣೆ ನಡೆಸಿದೆವು. ಅಲ್ಲಿ ಸಿಕ್ಕ ಸಣ್ಣಪುಟ್ಟ ಸುಳಿವು ಆಧರಿಸಿ ಮಧ್ಯಪ್ರದೇಶದ ರಾಜ್​ಗಢ್ ಜಿಲ್ಲೆಯ ಪ್ರಚೋರ ತಾಲೂಕಿನಲ್ಲಿ ಕಳ್ಳತನ ಎಸಗಿರುವ ತಂಡ ಇರಬಹುದೆಂದು ಮತ್ತೊಂದು ಮಾಹಿತಿ ಸಿಕ್ಕಿತು".

"ಇದರ ಆಧಾರದಲ್ಲಿ 10 ದಿನ ಪೊಲೀಸರ ತಂಡ ಅಲ್ಲಿಯೇ ವಾಸ್ತವ್ಯ ಹೂಡಿ ಅನುಮಾನವಿದ್ದ ಗ್ರಾಮದೊಳಗೆ ಹೋಗಿದೆ. ಆ ಸಂದರ್ಭದಲ್ಲಿ ಇಡೀ ಊರೇ ಪೊಲೀಸರು ವಿರುದ್ಧ ಪ್ರತಿಕ್ರಿಯಿಸಿದರು. ನಮ್ಮ ಸಿಬ್ಬಂದಿ ವಿರುದ್ಧ ಕಲ್ಲು, ಬಡಿಗೆಗಳನ್ನು ತೆಗೆದುಕೊಂಡು ದಾಳಿ ಮಾಡಲು ಮುಂದಾದರು. ಇದರಿಂದ ಹಿಂದೆ ಸರಿದ ತಂಡ ಮತ್ತೆ ಉಜ್ಜಯಿನಿಗೆ ಹೋಗಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿತು. ಆರೋಪಿಗಳಿಗೆ ಸಂಬಂಧಪಟ್ಟ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದೇ ತಂಡ ಧಾರವಾಡದಲ್ಲಿ ಕಳ್ಳತನ ನಡೆಸಿರುವುದು ಗೊತ್ತಾಯಿತು".

"ಕೂಡಲೇ ಸ್ಥಳೀಯ ಪೊಲೀಸರ ಸಹಾಯದಿಂದ ಚಿನ್ನದ ಬ್ಯಾಗ್​ ಕದ್ದಿದ್ದ ಬಾಲಕ ಮತ್ತು ಕಳ್ಳತನವಾಗಿದ್ದ ಸಂಪೂರ್ಣ 964 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ ಕಾರನ್ನು ನಾವು ವಶಕ್ಕೆ ಪಡೆದೆವು. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು ಅವರ ಗುರುತು ಸಿಕ್ಕಿದೆ. ಸದ್ಯದಲ್ಲೇ ಅವರನ್ನೂ ಬಂಧಿಸಲಾಗುವುದು".

"ಆ ಗ್ರಾಮದಲ್ಲಿ ಸಿಸೋಡಿಯಾ ಎಂಬ ಸಮುದಾಯವಿದ್ದು, ಅವರು ಊರಿನಿಂದ ಹೊರಗಿದ್ದು ಇಂಥ ಅಪರಾಧ ಎಸಗುತ್ತಾರೆ. ಇವರು ಬೇರೆ ಕಡೆಯಿಂದ ಮಕ್ಕಳನ್ನು ನೇಮಿಸಿಕೊಂಡು ಒಂದೇ ಬಾರಿಗೆ 10 ಕಡೆಗಳಲ್ಲಿ ಕಳ್ಳತನ ಮಾಡಿದ ಬಳಿಕವೇ ಆ ಮಕ್ಕಳ ಪೋಷಕರಿಗೆ ಹಣ ನೀಡುತ್ತಾರೆ. ಈ ತಂಡ ತಮ್ಮನ್ನು ಬ್ಯಾಂಡ್​ ಬಜಾ ಭಾರತ್ ಎಂದು ಕರೆದುಕೊಳ್ಳುತ್ತದೆ. ಮದುವೆ ಮನೆಗಳೇ ಇವರ ಟಾರ್ಗೆಟ್‌. ದೇಶಾದ್ಯಂತ ಕ್ರಿಮಿನಲ್​ ಚಟುವಟಿಕೆಗಳಲ್ಲಿ ಇವರು ಭಾಗಿಯಾಗುತ್ತಿದ್ದಾರೆ" ಎಂದು ವಿವರವಾದ ಮಾಹಿತಿ ನೀಡಿದರು.

ಇದನ್ನೂ ಓದಿ: ನೀರಾವರಿ ಇಲಾಖೆಯ ಇಂಜಿನಿಯರ್​​​​ ಮಗನ ಮದುವೆಯಲ್ಲಿ ಕಳ್ಳತನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

Last Updated :Mar 26, 2024, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.