ETV Bharat / state

ಆರ್​ಎಸ್​ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: 4 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

author img

By ETV Bharat Karnataka Team

Published : Mar 5, 2024, 3:39 PM IST

Bangalore
ಬೆಂಗಳೂರು

ಆರ್​ಎಸ್​ಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಸಿಎಎ ಹಾಗೂ ಎನ್ಆರ್‌ಸಿ ಪರ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್​​​ ಆಗುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ವರುಣ್ ಎಂಬ ಆರ್​​ಎಸ್​​​ಎಸ್​ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದ ಆರೋಪಿ ಅಜರ್​ನನ್ನ ಬಂಗಾರಪೇಟೆಯಲ್ಲಿ ಬಂಧಿಸಲಾಗಿದೆ.

2019ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಹಾಗೂ ಎನ್ಆರ್‌ಸಿ ನಾಗರಿಕ ಕಾನೂನು ವಿಧೇಯಕದ ಪರ ಹಾಗೂ ವಿರೋಧಗಳು ವ್ಯಕ್ತವಾಗಿದ್ದವು. 2019ರ ಡಿಸೆಂಬರ್ 22 ರಂದು ನಗರದ ಟೌನ್ ಹಾಲ್ ಬಳಿ ನಡೆಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮತ್ತಿತರ ಮುಖಂಡರು ಸಿಎಎ ಹಾಗೂ ಎನ್ಆರ್‌ಸಿ ಪರ ಮಾತನಾಡಿದ್ದರು.

ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್​ಎಸ್ಎಸ್ ಕಾರ್ಯಕರ್ತ ವರುಣ್, ಕಾರ್ಯಕ್ರಮ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಜೆಸಿ ರಸ್ತೆಗೆ ಒಂದು ಕಿಲೋ ಮೀಟರ್‌ ಅಂತರದಲ್ಲಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಅವರನ್ನ ತಡೆದು, ಚಾಕು ರೀತಿಯ ಅಸ್ತ್ರದಿಂದ ಹಲ್ಲೆ ನಡೆಸಿದ್ದರು. ತಲೆ ಹಾಗೂ ಬೆನ್ನಿನ ಭಾಗಕ್ಕೆ ಇರಿತಕ್ಕೊಳಗಾಗಿದ್ದ ವರುಣ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಚೇತರಿಸಿಕೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಕಲಾಸಿಪಾಳ್ಯ ಠಾಣಾ ಪೊಲೀಸರು ಬೆಂಗಳೂರು ಆರ್‌ಟಿನಗರ ನಿವಾಸಿಗಳಾದ ಇರ್ಫಾನ್ ಅಲಿಯಾಸ್ ಮಹಮ್ಮದ್ ಇರ್ಫಾನ್, ಸೈಯದ್ ಅಕ್ಬರ್ ಅಲಿಯಾಸ್ ಮೆಕ್ಯಾನಿಕ್ ಅಕ್ಬರ್, ಸನಾ, ಲಿಂಗರಾಜಪುರಂನ ಸೈಯ್ಯದ್ ಸಿದ್ದಿಕಿ, ಕೆ. ಜಿ ಹಳ್ಳಿಯ ಅಕ್ಬರ್ ಅನ್ವರ್ ಬಾಷಾ, ಶಿವಾಜಿನಗರ ಸಾದಿಕ್ ಅಮೀನ್ ಅಲಿಯಾಸ್ ಸೌಂಡ್ ಅಮೀನ್ ಎಂಬಾತನನ್ನ ಬಂಧಿಸಿದ್ದರು.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಅಜರ್ ಕೃತ್ಯದ ಬಳಿಕ ಸೌದಿ ಅರೇಬಿಯಾಗೆ ತೆರಳಿ, ಪತ್ನಿಯ ಸಹೋದರರ ನೆರವಿನಿಂದ ತಲೆಮರೆಸಿಕೊಂಡಿದ್ದ. ಐದು ತಿಂಗಳ ಬಳಿಕ ಕೋಲಾರದ ಬಂಗಾರಪೇಟೆಯಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದ ಅಜರ್, ಅಲ್ಲಿಯೇ ವಾಸವಿದ್ದ. ಕಳೆದ ನಾಲ್ಕು ವರ್ಷಗಳಿಂದ ಪತ್ನಿಯ ಮನೆಯಲ್ಲಿ ಇದ್ದುಕೊಂಡು ಕಾರು ವ್ಯಾಪಾರ ಮಾಡಿಕೊಂಡಿದ್ದ.

ಅಜರ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರು ಸದ್ಯ ಆತನನ್ನ ಬಂಧಿಸಿದ್ದಾರೆ. ಆರೋಪಿಯನ್ನ ಹೆಚ್ಚಿನ‌ ವಿಚಾರಣೆಗಾಗಿ 14 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ : ಹಣ ನೀಡಲು ಬೆದರಿಕೆ ಆರೋಪ: ಆರ್‌ಎಸ್‌ಎಸ್ ಕಾರ್ಯಕರ್ತನ ವಿರುದ್ಧದ ಪ್ರಕರಣ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.