ETV Bharat / sports

37ನೇ ವಸಂತಕ್ಕೆ ಕಾಲಿಟ್ಟ 'ಹಿಟ್​ಮ್ಯಾನ್' ರೋಹಿತ್​ ಶರ್ಮಾ​: ಟೀಮ್​ ಇಂಡಿಯಾ ನಾಯಕನ ದಾಖಲೆಗಳ ಒಂದು ನೋಟ - Rohit Sharma turns 37

author img

By ETV Bharat Karnataka Team

Published : Apr 30, 2024, 9:45 AM IST

37ನೇ ವಸಂತಕ್ಕೆ ಕಾಲಿಟ್ಟ 'ಹಿಟ್​ಮ್ಯಾನ್' ರೋಹಿತ್​ ಶರ್ಮಾ
37ನೇ ವಸಂತಕ್ಕೆ ಕಾಲಿಟ್ಟ 'ಹಿಟ್​ಮ್ಯಾನ್' ರೋಹಿತ್​ ಶರ್ಮಾ

ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲೆಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಹಿಟ್​ಮ್ಯಾನ್ ಭಾರತ ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಇಡೀ ವಿಶ್ವವೇ ಅವರ ನಾಯಕತ್ವವನ್ನು ಕೊಂಡಾಡುತ್ತಿದೆ. ಎಲ್ಲ ಮೂರು ಸ್ವರೂಪದ ಕ್ರಿಕೆಟ್​ಗಳಲ್ಲಿ ರೋಹಿತ್ ಶರ್ಮಾ ಅವರು ನೀಡಿರುವ ಕೊಡುಗೆ ಮೌಲ್ಯಯುತವಾಗಿದೆ. ತಮ್ಮ ಕ್ರಿಕೆಟ್​ ಜರ್ನಿಯಲ್ಲಿ ಹಲವಾರು ದಾಖಲೆಗಳನ್ನೂ ರೋಹಿತ್ ಶರ್ಮಾ ಬರೆದಿದ್ದಾರೆ ಅದರಲ್ಲಿ ಕೆಲ ದಾಖಲೆಗಳು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

ಕ್ರಿಕೆಟ್​ ಜರ್ನಿ: 2007ರಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷ ನಡೆದ ಐಸಿಸಿ T20 ವಿಶ್ವಕಪ್​ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ಅವರು 88 ರನ್ ಗಳಿಸಿದ್ದರು. ಐರ್ಲೆಂಡ್ ವಿರುದ್ಧ ಅರ್ಧಶತಕ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ 30 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆರು ವರ್ಷಗಳ ಕಾಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಶಿಖರ್ ಧವನ್ ಅವರೊಂದಿಗೆ ಓಪನರ್​ ಆಗಿ ಆಡುವ ಅವಕಾಶವನ್ನು ಪಡೆದಿದ್ದರು. ಇದೇ ರೋಹಿತ್​ ವೃತ್ತಿ ಜೀವನಕ್ಕೆ ತಿರುವನ್ನು ನೀಡಿತು. ಈ ಟೂರ್ನಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 35.40 ಸರಾಸರಿಯಲ್ಲಿ ಎರಡು ಅರ್ಧ ಶತಕಗಳನ್ನು ಒಳಗೊಂಡಂತೆ 177 ರನ್ ಕಲೆಹಾಕಿದ್ದರು.

ಅಂದಿನಿಂದ ಓಪನರ್​ ಆಗಿ ಇನ್ನಿಂಗ್ಸ್​ ಆರಂಭಿಸಿದ ರೋಹಿತ್​ 262 ODIಗಳಲ್ಲಿ 49.12ರ ಸರಾಸರಿಯಲ್ಲಿ 10709 ರನ್ ಗಳಿಸಿದ್ದಾರೆ. ಇದರಲ್ಲಿ 31 ಶತಕಗಳು ಮತ್ತು 55 ಅರ್ಧಶತಕಗಳನ್ನು ಸೇರಿವೆ, 264 ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದ್ದು, ಇದು ODI ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟರೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಈ ದಾಖಲೆಯನ್ನು ಇದೂವರೆಗೂ ಯಾರೊಬ್ಬರಿಗೆ ಮುರಿಯಲು ಸಾಧ್ಯವಾಗಿಲ್ಲ.

ಎಂಎಸ್ ಧೋನಿ (10599), ರಾಹುಲ್ ದ್ರಾವಿಡ್ (10,768), ಸೌರವ್ ಗಂಗೂಲಿ (11,221), ವಿರಾಟ್ ಕೊಹ್ಲಿ (13848) ಮತ್ತು ಸಚಿನ್ ತೆಂಡೂಲ್ಕರ್ (18426) ನಂತರ ಆರನೇ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಾಗಿದ್ದಾರೆ. ವಿರಾಟ್ (50) ಮತ್ತು ಸಚಿನ್ (49) ನಂತರ 31 ಶತಗಳನ್ನು ಸಿಡಿಸಿ ಮೂರನೇ ಅತಿ ಹೆಚ್ಚು ODI ಶತಕಗಳನ್ನು ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.

ಟೆಸ್ಟ್​ ದಾಖಲೆ: ವಿಶ್ವಾಸಾರ್ಹ ಟೆಸ್ಟ್ ಓಪನರ್ ಆಗಿರುವ ರೋಹಿತ್​ ಇದೂವರೆಗೂ 59 ಪಂದ್ಯಗಳು ಮತ್ತು 101 ಇನ್ನಿಂಗ್ಸ್‌ಗಳನ್ನು ಆಡಿದ್ದು 45.46ರ ಸರಾಸರಿಯಲ್ಲಿ 4137 ರನ್ ಗಳಿಸಿದ್ದಾರೆ ಮತ್ತು 57.05 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಯಶಸ್ವಿ ನಾಯಕ: ರೋಹಿತ್ ತಮ್ಮ ನಾಯಕತ್ವದ ಕೌಶಲ್ಯದಿಂದ ಟಿ20 ಕ್ರಿಕೆಟ್‌ನಲ್ಲಿ ಪ್ರಭಾವ ಬೀರಿದ್ದಾರೆ. ರೋಹಿತ್​ ನಾಯಕತ್ವದಲ್ಲಿ ಮುಂಬೈ ಇದೂವರೆಗೂ 5 ಐಪಿಎಲ್ ಪ್ರಶಸ್ತಿ (2013, 2015, 2017, 2019 ಮತ್ತು 2020) ಗೆದ್ದಿದೆ. ರೋಹಿತ್​ 252 ಪಂದ್ಯಗಳನ್ನು ಆಡಿ 29.92ರ ಸರಾಸರಿಯಲ್ಲಿ ಒಟ್ಟು 6522 ರನ್‌ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು 42 ಅರ್ಧ ಶತಕಗಳು ಸೇರಿವೆ. 109 ಹೈಸ್ಕೋರ್​ ಆಗಿದ್ದು ಲೀಗ್‌ನ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ODI ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ 597 ರನ್‌ಗಳನ್ನು ಕಲೆಹಾಕಿ ಎರಡನೇ ಸ್ಥಾನದಲ್ಲಿದ್ದರು. ಪ್ರಸ್ತುತ 'ಹಿಟ್‌ಮ್ಯಾನ್' ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ.

ಇಂತಹ ದಿಗ್ಗಜ ಆಟಗಾರ ಕ್ರಿಕೆಟ್​ನಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂಬುದು ಈಟಿವಿ ಭಾರತದ ಆಶಯವಾಗಿದ್ದು ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಹಿಟ್​ಮ್ಯಾನ್​.

ಇದನ್ನೂ ಓದಿ: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದ ಗ್ಯಾರಿ ಕರ್ಸ್ಟನ್​​ ಪಾಕಿಸ್ತಾನ ತಂಡದ ಕೋಚ್​ ಆಗಿ ನೇಮಕ - Gary Kirsten

ETV Bharat Logo

Copyright © 2024 Ushodaya Enterprises Pvt. Ltd., All Rights Reserved.