ETV Bharat / international

ತೆರಿಗೆ ಪಾವತಿಸದ 5 ಲಕ್ಷ ಜನರ ಮೊಬೈಲ್​ ಸಿಮ್​ ನಿರ್ಬಂಧಿಸಲು ಮುಂದಾದ ಪಾಕಿಸ್ತಾನ ಸರ್ಕಾರ - Tax Evasion In Pakistan

author img

By PTI

Published : May 1, 2024, 5:28 PM IST

ಪಾಕಿಸ್ತಾನ ಸರ್ಕಾರ
ಪಾಕಿಸ್ತಾನ ಸರ್ಕಾರ

ಪಾಕಿಸ್ತಾನದಲ್ಲಿ ತೆರಿಗೆ ವಂಚನೆ ಹೆಚ್ಚಾಗಿದೆ. ಹೀಗಾಗಿ ಅಲ್ಲಿನ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ತೆರಿಗೆದಾರರನ್ನು ಹದ್ದುಬಸ್ತಿನಲ್ಲಿಡಲು ವಿಚಿತ್ರ ತಂತ್ರದ ಮೊರೆ ಹೋಗಿದೆ.

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತೆರಿಗೆ ವಂಚಕರ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ಸರ್ಕಾರ ಅಂಥವರ ವಿರುದ್ಧ ದಿಟ್ಟ ಕ್ರಮಕ್ಕೆ ಮುಂದಾಗಿದೆ. 2023ರಲ್ಲಿ ತೆರಿಗೆ ಉಳಿಸಿಕೊಂಡ ಅರ್ಧ ಮಿಲಿಯನ್​ (5 ಲಕ್ಷಕ್ಕೂ ಅಧಿಕ) ಜನರ ಮೊಬೈಲ್​ ಸಿಮ್​ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ.

ಕೇಂದ್ರೀಯ ಕಂದಾಯ ಮಂಡಳಿ (ಎಫ್‌ಬಿಆರ್) ಆದಾಯ ತೆರಿಗೆ ಇಲಾಖೆ (ಐಟಿಜಿಒ)ಗೆ ಕಳೆದ ವರ್ಷ ತೆರಿಗೆ ಕಟ್ಟದ 5,06,671 ವ್ಯಕ್ತಿಗಳ ಮೊಬೈಲ್ ಸಿಮ್‌ಗಳ ಬಳಕೆಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಈ ಬಗ್ಗೆ ಪಾಕಿಸ್ತಾನ ಟೆಲಿಕಮ್ಯುನಿಕೇಶನ್ ಅಥಾರಿಟಿ (ಪಿಟಿಎ) ಮತ್ತು ಎಲ್ಲಾ ಟೆಲಿಕಾಂ ಪೂರೈಕೆದಾರರಿಗೆ ನಿರ್ದೇಶನ ನೀಡಿದ್ದು, ತಮ್ಮ ಕಂಪನಿಯ ಸಿಮ್‌ಗಳನ್ನು ನಿರ್ಬಂಧಿಸಿದ ವರದಿಯನ್ನು ಮೇ 15ರೊಳಗೆ ಸಲ್ಲಿಸಲು ಸೂಚಿಸಿದ್ದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

ತೆರಿಗೆ ವ್ಯಾಪ್ತಿಯಲ್ಲಿ ಬರುವ 2.4 ಮಿಲಿಯನ್​ (20.40 ಲಕ್ಷಕ್ಕೂ ಅಧಿಕ) ಜನರು ತೆರಿಗೆದಾರರ ಪಟ್ಟಿಯಿಂದ ನುಣುಚಿಕೊಂಡಿದ್ದಾರೆ. ಅವರನ್ನು ಗುರುತಿಸಿರುವ ಕೇಂದ್ರೀಯ ಕಂದಾಯ ಮಂಡಳಿ ಕ್ರಮ ಎದುರಿಸಲು ನೋಟಿಸ್​ ಜಾರಿ ಮಾಡಿದ್ದಾಗಿ ತಿಳಿದುಬಂದಿದೆ.

ಎಫ್​ಬಿಆರ್​ ಮಾನದಂಡದ ಪ್ರಕಾರ, ತೆರಿಗೆ ವಂಚನೆ ಪಟ್ಟಿಯಲ್ಲಿನ 2.4 ಮಿಲಿಯನ್​ ಜನರ ಪೈಕಿ 0.5 ಮಿಲಿಯನ್​ ಮಾತ್ರ ದಂಡನೆಗೆ ಗುರಿ ಮಾಡಲು ಸರ್ಕಾರ ಮುಂದಾಗಿದೆ. ಉಳಿದವರಿಗೆ ಸದ್ಯಕ್ಕೆ ನೋಟಿಸ್​ ಜಾರಿ ಮಾಡಲಾಗಿದೆ. ಇವರೆಲ್ಲರೂ ಕಳೆದ ಮೂರು ವರ್ಷಗಳಲ್ಲಿ ತೆರಿಗೆ ವ್ಯಾಪ್ತಿಗೆ ಬರುವ ಆದಾಯವನ್ನು ಘೋಷಿಸಿಕೊಂಡಿದ್ದರು. ಎಲ್ಲರೂ 2023ರವರೆಗೂ ಟ್ಯಾಕ್ಸ್​ ರಿಟರ್ನ್​ ಫೈಲಿಂಗ್​ ಸಲ್ಲಿಕೆ ಮಾಡಿಲ್ಲ ಎಂಬುದು ಈಗಿರುವ ಆರೋಪ.

ಸಕ್ರಿಯ ತೆರಿಗೆದಾರರ ಪಟ್ಟಿಯ ಪ್ರಕಾರ, ಮಾರ್ಚ್ 1, 2024ರವರೆಗೆ 4.2 ಮಿಲಿಯನ್ (40 ಲಕ್ಷಕ್ಕೂ ಅಧಿಕ) ತೆರಿಗೆದಾರರಿಂದ ಐಟಿಆರ್​ ಸಲ್ಲಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 3.8 ಮಿಲಿಯನ್ ಜನರಿಂದ ಮಾತ್ರ ರಿಟರ್ನ್ಸ್ ಸಲ್ಲಿಕೆಯಾಗುತ್ತಿತ್ತು. 2022ರಲ್ಲಿ 5.9 ಮಿಲಿಯನ್​ (60 ಲಕ್ಷ ಸನಿಹ) ಜನರು ತೆರಿಗೆ ಕಟ್ಟುತ್ತಿದ್ದರು. ಅದು ಕ್ರಮೇಣ ಇಳಿಕೆಯಾಗಿದೆ.

ಇದನ್ನೂ ಓದಿ: ಉಕ್ರೇನ್​ ಬಂದರು ಪ್ರದೇಶದಲ್ಲಿ ರಷ್ಯಾ ಕ್ಷಿಪಣಿ ದಾಳಿ: ಐವರು ಸಾವು, 30 ಮಂದಿಗೆ ಗಾಯ - Russian Missile Attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.