ETV Bharat / international

ಪ್ರಧಾನಿ ಮೋದಿ ಆರ್ಥಿಕ ಮಾದರಿ ಕಾರ್ಯಕ್ರಮಗಳ ಜಾರಿಗೆ ಮರಿಯಮ್ ನವಾಜ್ ನಿರ್ಧಾರ: ಮಿರ್ಜಾ ಹೇಳಿಕೆ

author img

By ANI

Published : Feb 27, 2024, 8:57 AM IST

Etv Bharat
Etv Bharat

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ ನವಾಜ್ ಅವರು ಪ್ರಧಾನಿ ಮೋದಿಯ ಆರ್ಥಿಕ ಮಾದರಿಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ ಎಂದು ಗಡಿಪಾರಾದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಹಕ್ಕುಗಳ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.

ಗ್ಲಾಸ್ಗೋ (ಸ್ಕಾಟ್ಲೆಂಡ್): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನೂತನ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರ ಅಭಿವೃದ್ಧಿ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಮಾದರಿಯನ್ನೇ ಹೋಲುತ್ತವೆ ಎಂದು ಗಡಿಪಾರಾದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಹಕ್ಕುಗಳ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.

ಸ್ಮಾರ್ಟ್ ಸಿಟಿಗಳು, ಆರ್ಥಿಕ ಚಟುವಟಿಕೆಗಳು, ಮಾರುಕಟ್ಟೆಗಳು ಮತ್ತು ರೈತರಿಗಾಗಿ ರಸ್ತೆ ಸಂಪರ್ಕ, ಆರೋಗ್ಯ ಸೌಲಭ್ಯದ ವ್ಯವಸ್ಥೆಗಳ ಯೋಜನೆಗಳನ್ನು ಮರಿಯಮ್ ತನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಅವರ ಈ ಎಲ್ಲ ಕಾರ್ಯಕ್ರಮಗಳು ಮೋದಿ ಆರ್ಥಿಕತೆಯ ಮಾದರಿಯಾಗಿದೆ ಎಂದು ಮಿರ್ಜಾ ತಿಳಿಸಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ ನವಾಜ್ ಅವರು ಸೋಮವಾರ, ದೇಶದ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ತಮ್ಮ ಗೆಲುವಿನ ನಂತರದ ಭಾಷಣದಲ್ಲಿ ಗಮನಾರ್ಹ ಭರವಸೆಗಳನ್ನು ನೀಡಿದ್ದಾರೆ. ಪಂಜಾಬ್ ಪ್ರಾಂತ್ಯಕ್ಕಾಗಿ ತಮ್ಮ ಪಕ್ಷದ ಸಮಗ್ರ ಕಾರ್ಯಸೂಚಿ ಪ್ರಸ್ತುತಪಡಿಸಿದ್ದಾರೆ. ತಮ್ಮ ಪ್ರಾಂತ್ಯವನ್ನು ಆರ್ಥಿಕ ಕೇಂದ್ರವಾಗಿ ಪರಿವರ್ತಿಸಲು ನೀತಿಗಳನ್ನು ಮಾಡುವುದಾಗಿ ಮರಿಯಮ್ ನವಾಜ್ ತಿಳಿಸಿದ್ದಾರೆ.

ಮರಿಯಮ್ ನವಾಜ್​ ನೀತಿಗಳ ಅನುಷ್ಠಾನದ ಕುರಿತಾದ ಪ್ರಶ್ನೆಗೆ ಅಮ್ಜದ್ ಅಯೂಬ್ ಮಿರ್ಜಾ ಅವರು ಉತ್ತರಿಸಿದ್ದಾರೆ. ಪಾಕಿಸ್ತಾನದಲ್ಲಿ ಸಶಸ್ತ್ರ ಪಡೆಗಳು ಹಲವಾರು ವಾಣಿಜ್ಯ ಘಟಕಗಳನ್ನು ಹೊಂದಿವೆ. ಸೇನೆ ಹಲವಾರು ಫೌಂಡೇಶನ್‌ಗಳು ಮತ್ತು ಟ್ರಸ್ಟ್‌ಗಳ ಹೆಸರಿನಲ್ಲಿ ತಮ್ಮ ವ್ಯವಹಾರಗಳನ್ನು ನಡೆಸುತ್ತಿದೆ. ಪಾಕಿಸ್ತಾನದ ಮಿಲಿಟರಿ ಆಡಳಿತಗಾರರು ದೇಶದಲ್ಲಿ ವ್ಯಾಪಾರ ಸಾಮ್ರಾಜ್ಯ ಸೃಷ್ಟಿಸಿದ್ದಾರೆ. ಆದ್ದರಿಂದ, ಮರಿಯಮ್ ನವಾಜ್ ಅವರ ಯಶಸ್ಸಿನ ಸಾಧ್ಯತೆಗಳು ತುಂಬಾ ಕಷ್ಟವಿದೆ. ಮರಿಯಮ್ ಅವರು ಮಿಲಿಟರಿ - ಕೈಗಾರಿಕಾ ಸಂಕೀರ್ಣ, ಮಿಲಿಟರಿ ವ್ಯವಹಾರಗಳೊಂದಿಗೆ ಹೇಗೆ ಸ್ಪರ್ಧೆ ಮಾಡುತ್ತಾರೆ? ಖಾಸಗಿ ವಲಯದ ಪ್ರವರ್ಧಮಾನದಿಂದ ಸೇನೆ ಹೆಚ್ಚು ಸಂತೋಷಪಡುವುದಿಲ್ಲ. ಅತ್ಯಂತ ಬಲಿಷ್ಠ ಸೇನಾ ಆರ್ಥಿಕತೆಯು ಪಂಜಾಬ್‌ನ ಪ್ರತಿಯೊಂದು ವಲಯದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಎಂದು ಮಿರ್ಜಾ ಹೇಳಿದ್ದಾರೆ.

ಮರಿಯಮ್ ನವಾಜ್ ಪಾಕ್​ ಪಂಜಾಬ್‌ನ ಮೊದಲ ಮಹಿಳಾ ಸಿಎಂ: ಪಾಕಿಸ್ತಾನದ ಅತ್ಯಂತ ದೊಡ್ಡ ಮತ್ತು ರಾಜಕೀಯವಾಗಿ ಮಹತ್ವದ ರಾಜ್ಯವಾದ ಪಂಜಾಬ್‌ನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮರ್ಯಮ್ ನವಾಜ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನವಾಜ್ ಷರೀಫ್ ಅವರ ಪುತ್ರಿ. 50 ವರ್ಷದ ಮರ್ಯಮ್ ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್-ಎನ್) ಹಿರಿಯ ಉಪಾಧ್ಯಕ್ಷರೂ ಆಗಿದ್ದಾರೆ.

ಪಂಜಾಬ್‌ನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಹೆಮ್ಮೆಯ ವಿಷಯವಾಗಿದೆ. ಮಹಿಳಾ ನಾಯಕತ್ವದ ಸಂಪ್ರದಾಯವು ಭವಿಷ್ಯದಲ್ಲಿ ಮುಂದುವರಿಯುತ್ತದೆ ಎಂದು ಮರಿಯಮ್ ಹೇಳಿದ್ದಾರೆ.

327 ಸ್ಥಾನಗಳ ಪಂಜಾಬ್ ಅಸೆಂಬ್ಲಿಯಲ್ಲಿ ಬಹುಮತ ಸಾಧಿಸಲು 187 ಸದಸ್ಯರ ಬೆಂಬಲ ಅಗತ್ಯವಿತ್ತು. ಮರಿಯಮ್ ನವಾಜ್ 220 ಮತಗಳನ್ನು ಪಡೆದರು. ಅವರ ಪ್ರತಿಸ್ಪರ್ಧಿ ಸುನ್ನಿ ಇತ್ತೆಹಾದ್ ಕೌನ್ಸಿಲ್ (SIC) ಈ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಎಸ್‌ಐಸಿಯನ್ನು ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐ ಬೆಂಬಲಿಸಿದೆ. ಪಿಎಂಎಲ್​ - ಎನ್​ನ 137 ಸದಸ್ಯರು ಮತ್ತು 20ಕ್ಕೂ ಹೆಚ್ಚು ಸ್ವತಂತ್ರರು ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಮರಿಯಮ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಪಂಜಾಬ್ ಅಸೆಂಬ್ಲಿ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 371 ಸದಸ್ಯರಲ್ಲಿ 321 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: 454 ಮಿಲಿಯನ್ ಡಾಲರ್​ ದಂಡದ ತೀರ್ಪು ಪ್ರಶ್ನಿಸಿ ನ್ಯಾಯಾಲಯಕ್ಕೆ ಡೊನಾಲ್ಡ್​ ಟ್ರಂಪ್​ ಮೇಲ್ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.