ETV Bharat / international

454 ಮಿಲಿಯನ್ ಡಾಲರ್​ ದಂಡದ ತೀರ್ಪು ಪ್ರಶ್ನಿಸಿ ನ್ಯಾಯಾಲಯಕ್ಕೆ ಡೊನಾಲ್ಡ್​ ಟ್ರಂಪ್​ ಮೇಲ್ಮನವಿ

author img

By ANI

Published : Feb 27, 2024, 7:46 AM IST

ಸಿವಿಲ್​ ವಂಚನೆ ಪ್ರಕರಣದಲ್ಲಿ ದಂಡ ಪಾವತಿ ತೀರ್ಪಿನ ವಿರುದ್ಧ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ​ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

Donald Trump
ಡೊನಾಲ್ಡ್​ ಟ್ರಂಪ್

ವಾಷಿಂಗ್ಟನ್​(ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರುದ್ಧದ ಸಿವಿಲ್​ ಪ್ರಕರಣದಲ್ಲಿ ದಂಡ ವಿಧಿಸಿ ನೀಡಿದ್ದ ಆದೇಶಕ್ಕೆ ತಡೆ ಕೋರಿ ನ್ಯೂಯಾರ್ಕ್​ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೌದು ಟ್ರಂಪ್​ ಹಾಗೂ ಅವರ ಇಬ್ಬರು ಮಕ್ಕಳು ಮತ್ತು ಮಾಜಿ ಟ್ರಂಪ್​ ಸಂಘಟನೆಯ ಇಬ್ಬರು ಅಧಿಕಾರಿಗಳು ಸೋಮವಾರ ಸಿವಿಲ್ ವಂಚನೆ ಪ್ರಕರಣದಲ್ಲಿ ತಮ್ಮ ವಿರುದ್ಧದ 454 ಮಿಲಿಯನ್ ಅಮೆರಿಕನ್​ ಡಾಲರ್ ದಂಡದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್​ ಕೋರ್ಟ್​ನ ನ್ಯಾಯಾಧೀಶ ಆರ್ಥರ್ ಎಂಗೊರಾನ್ ಫೆಬ್ರವರಿ 16 ರಂದು ದಂಡದ ಜತೆಗೆ ಟ್ರಂಪ್ ಮೂರು ವರ್ಷಗಳ ಕಾಲ ಕಂಪನಿಯ ನಿರ್ದೇಶಕರಾಗುವಂತಿಲ್ಲ ಎಂಬ ನಿರ್ಬಂಧವನ್ನೂ ಹೇರಿ ಅಂತಿಮ ತೀರ್ಪು ಪ್ರಕಟಿಸಿದ್ದರು. ಈ ತೀರ್ಪನ್ನ ಪ್ರಶ್ನಿಸಿ ಡೊನಾಲ್ಡ್​ ಟ್ರಂಪ್ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಒಟ್ಟು ಟ್ರಂಪ್​ಗೆ ಬಡ್ಡಿ ಪಾವತಿ ಸೇರಿಸಿ 454 ಮಿಲಿಯನ್‌ ಅಮೆರಿಕ ಡಾಲರ್( ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 3,762ಕೋಟಿ) ದಂಡ ಕಟ್ಟಬೇಕಾಗಿದೆ.

ಈಗ ಕೋರ್ಟ್​ನಲ್ಲಿ ಸಲ್ಲಿಸಿರುವ ಮೇಲ್ಮನವಿಗಾಗಿ ಟ್ರಂಪ್​ ಎಲ್ಲಿಂದ ಹಣ ಹೊಂದಿಸಿದ್ದಾರೆ ಎಂಬ ಮಾಹಿತಿ ಇಲ್ಲ. ವಿಧಿಸಿರುವ 355 ಮಿಲಿಯನ್​​ ಡಾಲರ್​ ಹಣಕ್ಕೆ 100 ಮಿಲಿಯನ್ ನ​ಷ್ಟು ಹೆಚ್ಚುವರಿ ಬಡ್ಡಿ ಪಾವತಿಸಲು ನಗದು ಅಥವಾ ಪೋಸ್ಟ್-ಬಾಂಡ್ ಹಾಕಬೇಕಾಗುತ್ತದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಇನ್ನು ಅವರ ಪುತ್ರ ಈ ಪ್ರಕರಣದಲ್ಲಿ ಲಾಭ ಪಡೆದಿರುವುದಕ್ಕಾಗಿ ಆತನಿಗೂ 4 ಮಿಲಿಯನ್​ ಡಾಲರ್​ ದಂಡ ಕಟ್ಟಲು ಆದೇಶಿಸಲಾಗಿತ್ತು.

ಉಳಿದ ಮಾಹಿತಿ ಪ್ರಕಾರ, ವಿಧಿಸಿರುವ ದಂಡವನ್ನು ಸಂಪೂರ್ಣ ಪಾವತಿಸುವವರೆಗೆ ವಾರ್ಷಿಕ ಶೇಕಡಾ 9 ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ ಎಂದು ಪ್ರಕರಣದ ವಕೀಲರು ಹೇಳಿದ್ದಾರೆ.

ಏನಿದು ಪ್ರಕರಣ: ಟ್ರಂಪ್​ ಮತ್ತು ಕುಟುಂಬಸ್ಥರು ನಡೆಸುತ್ತಿರುವ ಕಂಪನಿಯಲ್ಲಿ ಆದಾಯಕ್ಕಿಂತಲೂ ಅಧಿಕವಾಗಿ ಲಾಭವನ್ನು ತೋರಿಸಿ ಬ್ಯಾಂಕ್​ಗಳಿಂದ ಸಾಲ, ವಿಮೆ ಪಡೆದುಕೊಂಡಿದ್ದರು. ಬಳಿಕ ಮರುಪಾವತಿಯಲ್ಲಿ ನಷ್ಟ ತೋರಿಸಿದ್ದರು. ಇದರಿಂದ ಸಿಬ್ಬಂದಿ ಸೇರಿ ಬ್ಯಾಂಕ್​, ವಿಮಾ ಕಂಪನಿ ನಷ್ಟವಾಗುವಂತೆ ಮಾಡಿದ್ದರು. ಇದರ ವಿರುದ್ಧ ದಾಖಲಾದ ಪ್ರಕರಣದಲ್ಲಿ ನ್ಯೂಯಾರ್ಕ್​ ಕೋರ್ಟ್​ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಭಾರೀ ಪ್ರಮಾಣದ ದಂಡ ವಿಧಿಸಿತ್ತು.

ಇದನ್ನೂ ಓದಿ: ಸಿವಿಲ್ ವಂಚನೆ ಕೇಸ್​: ಡೊನಾಲ್ಡ್ ಟ್ರಂಪ್​ಗೆ 355 ಮಿಲಿಯನ್​ ಡಾಲರ್​ ದಂಡ ವಿಧಿಸಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.