ETV Bharat / international

ಇರಾನ್​​ನ ಚಬಹಾರ್ ಬಂದರು ನಿರ್ವಹಣೆಗಾಗಿ 10 ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ - Chabahar Port Contract

author img

By IANS

Published : May 14, 2024, 4:28 PM IST

ಇರಾನ್​ನ ಚಬಹಾರ್ ಬಂದರು ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಭಾರತವು ಇರಾನ್​ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಚಬಹಾರ್ ಬಂದರು ನಿರ್ವಹಣೆಗಾಗಿ ಇರಾನ್​ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಭಾರತ ಸಹಿ
ಚಬಹಾರ್ ಬಂದರು ನಿರ್ವಹಣೆಗಾಗಿ ಇರಾನ್​ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಭಾರತ ಸಹಿ (ians)

ನವದೆಹಲಿ: ಇರಾನ್​​ನ ಆಗ್ನೇಯ ಕರಾವಳಿಯ ಚಬಹಾರ್ ಬಂದರಿನಲ್ಲಿರುವ ಶಾಹಿದ್ ಬೆಹೆಷ್ಟಿ ಟರ್ಮಿನಲ್​​ನ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಭಾರತವು ಸೋಮವಾರ ಇರಾನ್​ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರ ಉಪಸ್ಥಿತಿಯಲ್ಲಿ ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಮತ್ತು ಇರಾನ್​ನ ಬಂದರು ಮತ್ತು ಕಡಲ ಸಂಸ್ಥೆ ಟೆಹ್ರಾನ್​ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.

ಒಪ್ಪಂದದ ಪ್ರಕಾರ, ಸರ್ಕಾರಿ ಸ್ವಾಮ್ಯದ ಐಪಿಜಿಎಲ್ ಸುಮಾರು 120 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಹೆಚ್ಚುವರಿಯಾಗಿ 250 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಮೂಲಕ ಒಪ್ಪಂದದ ಮೌಲ್ಯವು 370 ಮಿಲಿಯನ್ ಡಾಲರ್​ಗೆ ತಲುಪಲಿದೆ ಎಂದು ಇರಾನ್ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಮೆಹರ್ ದಾದ್ ಬಜರ್​ಪ್ರಾಶ್ ಟೆಹ್ರಾನ್​ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಚಬಹಾರ್​ನಲ್ಲಿ ಭಾರತದ ದೀರ್ಘಕಾಲೀನ ಪಾಲ್ಗೊಳ್ಳುವಿಕೆಗೆ ಉಭಯ ದೇಶಗಳು ಅಡಿಪಾಯ ಹಾಕಿವೆ ಎಂದು ಸೋನೊವಾಲ್ ಹೇಳಿದರು.

2016 ರಲ್ಲಿ ಸಹಿ ಹಾಕಿದ ಹಿಂದಿನ ಒಪ್ಪಂದದ ಬದಲಾಗಿ ಹೊಸ ಒಪ್ಪಂದ ಜಾರಿಗೆ ಬರಲಿದೆ. ಇದು ಚಬಹಾರ್ ಬಂದರಿನಲ್ಲಿ ಶಾಹಿದ್ ಬೆಹೆಷ್ಟಿ ಟರ್ಮಿನಲ್ ಅನ್ನು ನಿರ್ವಹಿಸಲು ಭಾರತಕ್ಕೆ ಅವಕಾಶ ನೀಡಲಿದೆ. ಹಳೆಯ ಒಪ್ಪಂದವು ತಾತ್ಕಾಲಿಕ ಸ್ವರೂಪದ್ದಾಗಿತ್ತು ಮತ್ತು ಪ್ರತಿವರ್ಷ ನವೀಕರಿಸಬೇಕಾಗಿತ್ತು.

ನೇರವಾಗಿ ಭೂಸಂಪರ್ಕ ಲಭ್ಯವಿರದ ಇರಾನ್ ಮತ್ತು ಅಫ್ಘಾನಿಸ್ತಾನ, ಕಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನದ ಪ್ರದೇಶಗಳಿಗೆ ಸರಕುಗಳನ್ನು ಸಾಗಿಸಲು ಭಾರತವು ಚಬಹಾರ್ ಬಂದರಿನಲ್ಲಿ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇರಾನ್​​ನೊಂದಿಗಿನ ಹೊಸ ಒಪ್ಪಂದವು ಕರಾಚಿ ಮತ್ತು ಪಾಕಿಸ್ತಾನದ ಗ್ವಾದರ್ ಬಂದರನ್ನು ಬೈಪಾಸ್ ಮಾಡಿ ಇರಾನ್ ಮೂಲಕ ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾದ ನಡುವೆ ವ್ಯಾಪಾರ ಮಾರ್ಗವನ್ನು ತೆರೆಯುತ್ತದೆ.

ಭವಿಷ್ಯದಲ್ಲಿ ಚಬಹಾರ್ ಬಂದರನ್ನು ಇರಾನ್ ಮೂಲಕ ರಷ್ಯಾದೊಂದಿಗೆ ಸಂಪರ್ಕಿಸುವ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್ಎಸ್​ಟಿಸಿ) ನೊಂದಿಗೆ ಸಂಪರ್ಕಿಸುವ ಯೋಜನೆಗಳಿವೆ. ಇದು ಈಗಾಗಲೇ ವಿಪರೀತ ಸಂಚಾರ ದಟ್ಟಣೆಯಿಂದ ಕೂಡಿರುವ ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯನ್ನು ಬೈಪಾಸ್ ಮಾಡುವ ಪರ್ಯಾಯ ಮಾರ್ಗವಾಗಲಿದೆ. ಇರಾನ್​ನಲ್ಲಿ ಬಂದರುಗಳು ಮತ್ತು ಇತರ ಕರಾವಳಿ ಮೂಲಸೌಕರ್ಯಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಲು ಚೀನಾ ಪ್ರಯತ್ನಿಸುತ್ತಿರುವ ಮಧ್ಯದಲ್ಲೇ ಭಾರತ ಇರಾನ್​ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಗಮನಾರ್ಹ.

ಇದನ್ನೂ ಓದಿ: ಅನಿಶ್ಚಿತ ರಾಜಕೀಯ ಪರಿಸ್ಥಿತಿ: ಸೌದಿ ರಾಜಕುಮಾರ ಎಂಬಿಎಸ್​ ಪಾಕಿಸ್ತಾನ ಭೇಟಿ ಮತ್ತೆ ಮುಂದೂಡಿಕೆ - SAUDI CROWN PRINCE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.