ETV Bharat / international

ಢಾಕಾದ ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ: 43 ಜನರು ಸಾವು

author img

By PTI

Published : Mar 1, 2024, 8:23 AM IST

Updated : Mar 1, 2024, 8:50 AM IST

ರಿ ಅಗ್ನಿ ಅವಘಡ  ಬಾಂಗ್ಲಾದೇಶದ ಢಾಕಾ  Bangladesh  fire accident
ಬಾಂಗ್ಲಾದೇಶ: ಢಾಕಾದಲ್ಲಿ ಭಾರಿ ಅಗ್ನಿ ಅವಘಡ: 43 ಜನ ಸಾವು

ಬಾಂಗ್ಲಾದೇಶದ ಢಾಕಾದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 43 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಳು ಅಂತಸ್ತಿನ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ 75 ಜನರನ್ನು ರಕ್ಷಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ.

ಢಾಕಾ ಬೈಲಿ ರಸ್ತೆಯಲ್ಲಿರುವ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಗುರುವಾರ ರಾತ್ರಿ 9.50 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹಂತ-ಹಂತವಾಗಿ ಮೇಲಿನ ಮಹಡಿಗಳಿಗೂ ಆವರಿಸಿದೆ. ಎರಡು ಗಂಟೆಯೊಳಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆ ನಡೆದ ಪ್ರದೇಶದಲ್ಲಿ ಅನೇಕ ಹೋಟೆಲ್​ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಫೋನ್ ಮಾರಾಟ ಅಂಗಡಿಗಳಿವೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ 75 ಮಂದಿಯನ್ನು ಏಳು ಅಂತಸ್ತಿನ ಕಟ್ಟಡದಿಂದ ಹೊರ ತೆಗೆಯಲಾಗಿದೆ. 13 ಅಗ್ನಿಶಾಮಕ ಘಟಕಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮೊಹಮ್ಮದ್ ಶಿಹಾಬ್ ತಿಳಿಸಿದ್ದಾರೆ.

ಆರೋಗ್ಯ ಸಚಿವ ಡಾ.ಸಮಂತ ಲಾಲ್ ಸೇನ್ ಹೇಳಿಕೆ: ಬಾಂಗ್ಲಾದೇಶದ ರಾಜಧಾನಿಯ ಮಧ್ಯ ಭಾಗದಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ರಾತ್ರಿಯಿಡೀ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. ಮತ್ತು 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸಮಂತ ಲಾಲ್ ಸೇನ್ ಶುಕ್ರವಾರ ಮಾಹಿತಿ ನೀಡಿದ್ದಾರೆ.

"ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (DMCH) 33 ಜನರು ಮತ್ತು (ಸಮೀಪದ) ಶೇಖ್ ಹಸೀನಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಎರಡೂ ಆರೋಗ್ಯ ಕೇಂದ್ರಗಳಲ್ಲಿ 22 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಅವರ ಸ್ಥಿತಿಯು ಚಿಂತಾಜನಕವಾಗಿದೆ. ಬದುಕುಳಿದವರ ಉಸಿರಾಟದ ಸಮಸ್ಯೆಯಿಂದ ಬಳುತ್ತಿದ್ದಾರೆ'' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

''ನಾವು ಆರನೇ ಮಹಡಿಯಲ್ಲಿದ್ದೇವೆ. ಮೆಟ್ಟಿಲಿನಿಂದ ಹೊಗೆ ಬರುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ವೇಳೆ ಎಲ್ಲರೂ ಮೇಲೆ ಕೆಳಗೆ ಓಡಿದರು. ನಾವೆಲ್ಲರೂ ನೀರಿನ ಪೈಪ್​ಗಳ ಮೂಲಕ ಕೆಳಗೆ ತಲುಪಿದೆವು. ಕೆಲವರು ಮೇಲಿನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಹಲವರು ಕಟ್ಟಡದ ತುದಿಗೆ ತೆರಳಿದ್ದಾರೆ. ಅವರಿಗೆ ಸಹಾಯ ಮಾಡಬೇಕು'' ಎಂದು ರೆಸ್ಟೋರೆಂಟ್‌ನ ವ್ಯವಸ್ಥಾಪಕ ಸೊಹೆಲ್ ಮನವಿ ಮಾಡಿದ್ದಾರೆ.

ಕೆಲ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಂಕಿಯಿಂದ ಪಾರಾಗಲು ಕೆಲವರು ಮೇಲಿನ ಮಹಡಿಗೆ ಹತ್ತಿದ್ದು, ಅಗ್ನಿಶಾಮಕ ದಳದವರು ಏಣಿಗಳನ್ನು ಬಳಸಿ ಹಲವರನ್ನು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಬಾಂಗ್ಲಾದೇಶದ ಅಪಾರ್ಟ್‌ಮೆಂಟ್‌ಗಳು ಮತ್ತು ಫ್ಯಾಕ್ಟರಿ ಸಂಕೀರ್ಣಗಳಲ್ಲಿ ಆಗಾಗ್ಗೆ ಬೆಂಕಿ ಅವಘಡಗಳು ಸಂಭವಿಸುತ್ತವೆ. ಜುಲೈ 2021 ರಲ್ಲಿ, ಆಹಾರ ಸಂಸ್ಕರಣಾ ಉದ್ಯಮದ ಘಟಕದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹಲವು ಮಕ್ಕಳು ಸೇರಿದಂತೆ 52 ಜನರು ಸಾವನ್ನಪ್ಪಿದ್ದರು. ಫೆಬ್ರವರಿ 2019ರಲ್ಲಿ, ರಾಜಧಾನಿ ಢಾಕಾದಲ್ಲಿ ಅಪಾರ್ಟ್‌ಮೆಂಟ್ ಬ್ಲಾಕ್‌ಗಳಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 70 ಜನರು ಮೃತಪ್ಪಟಿದ್ದರು.

ಇದನ್ನೂ ಓದಿ: ಸಹಾಯಕ್ಕೆ ಕಾಯುತ್ತಿದ್ದವರ ಮೇಲೆ ಇಸ್ರೇಲ್​ ದಾಳಿ: ಗಾಜಾದಲ್ಲಿ 100ಕ್ಕೂ ಹೆಚ್ಚು ಜನರು ಸಾವು

Last Updated :Mar 1, 2024, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.