ETV Bharat / health

ಕ್ಷಯ ರೋಗ ನಿರ್ಮೂಲನೆಗೆ ಪಣ; ಅಂತಿಮ ಹಂತ ತಲುಪಿದ 11 ಟಿಬಿ ಲಸಿಕೆ ಅಭಿವೃದ್ಧಿ ಕಾರ್ಯ - TB Vaccine

author img

By ETV Bharat Karnataka Team

Published : Mar 22, 2024, 12:43 PM IST

ಪ್ರಪಂಚದಾದ್ಯಂತ 1.8 ಬಿಲಿಯನ್​ ಜನರು ಕ್ಷಯ ರೋಗದ ಪರಿಣಾಮಕ್ಕೆ ಒಳಗಾಗಿದ್ದಾರೆ.

11 TB vaccines are currently in phase II and III stages of development
11 TB vaccines are currently in phase II and III stages of development

ನವದೆಹಲಿ: ಕ್ಷಯ ರೋಗ (ಟಿಬಿ) ಹೊರೆ ಜಾಗತಿಕವಾಗಿ ಹೆಚ್ಚುತ್ತಿದೆ. ಈ ರೋಗವನ್ನು ಶೀಘ್ರದಲ್ಲೇ ಉಪಶಮನ ಮಾಡುವ ನಿಟ್ಟಿನಲ್ಲಿ 11 ಹೊಸ ಟಿಬಿ ಲಸಿಕೆಗಳು ಎರಡು ಮತ್ತು ಮೂರನೇ ಹಂತದ ಅಭಿವೃದ್ಧಿಯಲ್ಲಿವೆ ಎಂದು ವರದಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ 1.8 ಬಿಲಿಯನ್​ ಜನರು ಕ್ಷಯ ರೋಗದ ಪರಿಣಾಮಕ್ಕೆ ಒಳಗಾಗಿದ್ದು, ಜಾಗತಿಕ ಸಾವಿನ ಕಾರಣದಲ್ಲೂ ಇದು ಪ್ರಮುಖವಾಗಿದೆ.

ಗ್ಲೋಬಲ್​ ಡೇಟಾ ವರದಿ ಅನುಸಾರ, ಟಿಬಿ ವಿರುದ್ಧ 11 ಲಸಿಕೆಗಳು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್​ ಪರೀಕ್ಷೆಯಲ್ಲಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ಫಲಿತಾಂಶ ನೀಡಿವೆ. ಈ ಕ್ಷೇತ್ರದಲ್ಲಿನ ಪ್ರಗತಿಯಿಂದ ಅನೇಕ ಜೀವಗಳು ಉಳಿಯಲಿವೆ. ಇದರ ಜತೆಗೆ ಇದು ಆರೋಗ್ಯ ಮತ್ತು ಸಾಮಾಜಿಕ ಆರ್ಥಿಕ ಹೊರೆಯನ್ನೂ ಕಡಿಮೆ ಮಾಡುತ್ತದೆ.

ದೀರ್ಘಾವಧಿಯ ಕೆಮ್ಮು ಮತ್ತು ರಕ್ತದ ವಾಂತಿ ಕ್ಷಯ ರೋಗದ ಪ್ರಮುಖ ಲಕ್ಷಣಗಳು. ಕೆಲವು ಕ್ಷಯರೋಗ ಪ್ರಕರಣದಲ್ಲಿ ಈ ಲಕ್ಷಣಗಳು ಕಾಣದೇ ಹೋಗುತ್ತದೆ. ಈ ರೋಗದ ಆರಂಭಿಕ ಪತ್ತೆ ಪ್ರಮುಖವಾಗಿದೆ. ರೋಗ ಪತ್ತೆಯಾದ ಆರು ತಿಂಗಳೊಳಗೆ ಸರಿಯಾದ ಪೋಷಣೆಯೊಂದಿಗೆ ಪ್ರತಿಜೀವಕಗಳ ಕೋರ್ಸ್ ಪ್ರಾರಂಭಿಸಲು ಇದು ಸಹಾಯ ಮಾಡುತ್ತದೆ.

ಕ್ಷಯ ರೋಗದ ಆರಂಭಿಕ ಪತ್ತೆ ಮತ್ತು ತಡೆ ರೋಗ ಹರಡದಂತೆ ತಡೆಯಲು ಇರುವ ಎರಡು ಪ್ರಮುಖ ಅಸ್ತ್ರವಾಗಿದೆ. ಸದ್ಯ ಈ ರೋಗದ ವಿರುದ್ಧ ಮಾರುಕಟ್ಟೆಯಲ್ಲಿರುವ ಲಸಿಕೆ ಎಂದರೆ ಬಿಸಿಜಿ. ಟಿಬಿ ಸಾಮಾನ್ಯವಾಗಿರುವ ದೇಶದಲ್ಲಿ ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ. ಟಿಬಿ ಕಡಿಮೆ ಇರುವ ಪ್ರದೇಶದಲ್ಲಿ ಬ್ಯಾಕ್ಟೀರಿಯಾಗೆ ಒಡ್ಡಿಕೊಳ್ಳುವ ಅಪಾಯ ಇರುವ ಪ್ರದೇಶದಲ್ಲಿಯೂ ಇದನ್ನು ನೀಡಲಾಗುವುದು ಎಂದು ಟ್ಯಾನೆನ್​ ತಿಳಿಸಿದ್ದಾರೆ.

100 ವರ್ಷದ ಇತಿಹಾಸ ಹೊಂದಿರುವ ಬಿಸಿಜಿ ಲಸಿಕೆಯು ಟಿಬಿ ಸೋಂಕನ್ನು 15 ವರ್ಷದವರೆಗೆ ತಡೆಯುವಲ್ಲಿ ಶೇ 80ರಷ್ಟು ಪರಿಣಾಮಕಾರಿಯಾಗಿದೆ. ಆದಾಗ್ಯೂ ಹದಿಹರೆಯದವರು ಮತ್ತು ವಯಸ್ಕರಲ್ಲಿ ಶ್ವಾಸಕೋಶದ ಟಿಬಿ ವಿರುದ್ಧ ಅದರ ರಕ್ಷಣೆ ಕ್ಷೀಣಿಸುತ್ತದೆ. ಈ ಹಿನ್ನೆಲೆಯಲ್ಲಿ ನವೀಕೃತ ಮತ್ತು ಸುಧಾರಿತ ರೋಗನಿರೋಧಕ ಲಸಿಕೆಗಳ ತುರ್ತು ಅವಶ್ಯಕತೆಯಿದೆ.

ಪ್ರಪಂಚದಾದ್ಯಂತ ಸರ್ಕಾರಗಳು ಒಟ್ಟಾಗಿ ಈ ಮಾರಣಾಂತಿಕ ರೋಗ ಹೋಗಲಾಡಿಸಲು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ. ಹೂಡಿಕೆ ಹೆಚ್ಚಳ, ಜಾಗೃತಿ ಸುಧಾರಣೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಅಳವಡಿಕೆಯು ಟಿಬಿ ಹೊರೆ ಇಳಿಕೆ ಮಾಡುವಲ್ಲಿ ಅಗತ್ಯವಾಗಿದೆ ಎಂದು ಟ್ಯಾನೆನ್​ ಹೇಳಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: 2015 ರಿಂದ ಭಾರತದಲ್ಲಿ ಶೇ 16ರಷ್ಟು ಕುಸಿದ ಟಿಬಿ ಪ್ರಕರಣ: ಕೇಂದ್ರ ಆರೋಗ್ಯ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.