ETV Bharat / entertainment

ಬಿಗ್​ ಬಾಸ್​​ ವಿನ್ನರ್ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲು - Elvish Yadav

author img

By ETV Bharat Karnataka Team

Published : May 4, 2024, 2:51 PM IST

Elvish Yadav
ಎಲ್ವಿಶ್ ಯಾದವ್(IANS Picture)

ಬಿಗ್​ ಬಾಸ್​ ವಿಜೇತ ಎಲ್ವಿಶ್ ಯಾದವ್ ಸೇರಿದಂತೆ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಲಕ್ನೋ: ತಾವು ಆಯೋಜಿಸಿದ್ದ ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್, ಬಿಗ್​ ಬಾಸ್​ ವಿಜೇತ ಸಿದ್ಧಾರ್ಥ್ ಯಾದವ್ ಅಲಿಯಾಸ್ ಎಲ್ವಿಶ್ ಯಾದವ್ ಸೇರಿದಂತೆ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ (ನೋಯ್ಡಾ) ಪೊಲೀಸರು, ಎಲ್ವಿಶ್​​ ಮತ್ತು ಆತನೊಂದಿಗೆ ಸಂಬಂಧ ಹೊಂದಿರುವ ಕೆಲವರ ವಿರುದ್ಧ ಎಫ್‌ಐಆರ್ ಮತ್ತು ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮತ್ತೊಂದು ಆರೋಪ ಹೊರಿಸಿದೆ.

ರೇವ್ ಅಥವಾ ಮನರಂಜನಾ ಪಾರ್ಟಿಗಳನ್ನು ಆಯೋಜಿಸಲು ಅಕ್ರಮ ಹಣ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯಾದವ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಕೆಲವರನ್ನು ತನಿಖೆಯ ಭಾಗವಾಗಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಲ್ವಿಶ್​​ ಯಾದವ್ ಆಯೋಜಿಸಿದ್ದ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಮನರಂಜನೆಗಾಗಿ ಬಳಸಿರುವ ಆರೋಪ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಮಾರ್ಚ್ 17 ರಂದು ಅವರನ್ನು ಬಂಧಿಸಿದ್ದರು.

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ 2ರ ವಿಜೇತರಾಗಿರುವ 26ರ ಹರೆಯದ ಯೂಟ್ಯೂಬರ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (NDPS) ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (IPC) ವಿವಿಧ ವಿಭಾಗಗಳ ಅಡಿಯಲ್ಲಿ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ವರ್ಷ ನವೆಂಬರ್ 3ರಂದು ನೋಯ್ಡಾದ ಸೆಕ್ಟರ್ 49 ಪೊಲೀಸ್ ಠಾಣೆಯಲ್ಲಿ ​​ ಎನ್‌ಜಿಓ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ)ನ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಾಗಿದ್ದು, ಇಲ್ಲಿ ಹೆಸರಿಸಲಾದ ಆರು ಜನರ ಪೈಕಿ ಎಲ್ವಿಶ್​​ ಯಾದವ್ ಕೂಡ ಓರ್ವರು.

ಇದನ್ನೂ ಓದಿ: 'ಕಿಂಚಿತ್ತೂ ಬದಲಾಗಿಲ್ಲ, ಅದ್ಭುತ ಸ್ನೇಹಿತ': ರಜನಿ ಬಗ್ಗೆ ಅಮಿತಾಭ್​​ ಹೃದಯಸ್ಪರ್ಶಿ ಪೋಸ್ಟ್ - Rajinikanth Amitabh

ಇತರೆ ಐವರು ಆರೋಪಿಗಳಾದ ಹಾವಾಡಿಗರನ್ನು ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ನಂತರ ಸ್ಥಳೀಯ ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. 2023ರ ನವೆಂಬರ್ 3ರಂದು ನೋಯ್ಡಾದ ಬ್ಯಾಂಕ್ವೆಟ್ ಹಾಲ್‌ನಿಂದ ಈ ಐವರು ಹಾವಾಡಿಗರನ್ನು ಬಂಧಿಸಿ, ಅವರ ವಶದಲ್ಲಿದ್ದ ಐದು ನಾಗರಹಾವು ಸೇರಿ ಒಂಭತ್ತು ಹಾವುಗಳನ್ನು ರಕ್ಷಿಸಲಾಗಿತ್ತು. 20 ಎಂಎಲ್​​ ಶಂಕಿತ ಹಾವಿನ ವಿಷವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್​ ಮಾಹಿತಿ ಪ್ರಕಾರ, ಎಲ್ವಿಶ್​ ಯಾದವ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇರಲಿಲ್ಲ.

ಇದನ್ನೂ ಓದಿ: ಯಶ್​​​ ನಟನೆಯ 'ಟಾಕ್ಸಿಕ್​​'ನ ಕರೀನಾ ಕಪೂರ್ ಪಾತ್ರಕ್ಕೆ ನಯನತಾರ - Yash Toxic

ಇನ್ನು, ಏಪ್ರಿಲ್‌ನಲ್ಲಿ ನೋಯ್ಡಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದರಲ್ಲಿ ಹಾವುಗಳ ಕಳ್ಳಸಾಗಣೆ, ಸೈಕೋಟ್ರೋಪಿಕ್ ವಸ್ತುಗಳ ಬಳಕೆ ಮತ್ತು ರೇವ್ ಪಾರ್ಟಿಗಳನ್ನು ಆಯೋಜಿಸುವ ಆರೋಪಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.