ETV Bharat / sports

ಮಾವ ಸುನಿಲ್​ ಶೆಟ್ಟಿ ಜೊತೆ ಟೀಂ ಇಂಡಿಯಾಗೆ ಚಿಯರ್​ ಮಾಡುವೆ: ಕೆಎಲ್​ ರಾಹುಲ್​ ಹೀಗೆ ಹೇಳಿದ್ದೇಕೆ? - KL Rahul

author img

By ETV Bharat Karnataka Team

Published : May 18, 2024, 4:14 PM IST

ಐಪಿಎಲ್​ ಟೂರ್ನಿ ಮುಕ್ತಾಯದ ಬಳಿಕ ಟಿ20 ವಿಶ್ವಕಪ್​ ಆರಂಭವಾಗಲಿದೆ. ತಂಡದಲ್ಲಿ ಸ್ಥಾನ ಪಡೆಯದ ಕೆಎಲ್​ ರಾಹುಲ್​ ತಂಡದ ಬಗ್ಗೆ ನೀಡಿದ ಹೇಳಿಕೆ ಹೀಗಿದೆ.

ಕೆಎಲ್​ ರಾಹುಲ್
ಕೆಎಲ್​ ರಾಹುಲ್ (File Photo ETV Bharat)

ಹೈದರಾಬಾದ್: ಐಪಿಎಲ್​ನಲ್ಲಿ ಪ್ಲೇಆಫ್​ಗೇರಲು ಕೆಎಲ್​ ರಾಹುಲ್​ ನೇತೃತ್ವದ ಲಖನೌ ಸೂಪರ್​ಜೈಂಟ್ಸ್​ ತಂಡ ವಿಫಲವಾಗಿದೆ. ಲೀಗ್​ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೂರ್ನಿಗೆ ಗುಡ್​ಬೈ ಹೇಳಿತು.

17ನೇ ಆವೃತ್ತಿಯಲ್ಲಿ ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾಯಕ ಕೆಎಲ್​ ರಾಹುಲ್​ ಕೂಡ ಗಮನಾರ್ಹ ಆಟವಾಡಿಲ್ಲ. ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು, ಸೋಲು ಕಂಡು 14 ಪಾಯಿಂಟ್ಸ್​ನೊಂದಿಗೆ ಟೂರ್ನಿಯಿಂದ ಹೊರಬಿತ್ತು. ರನ್​ರೇಟ್​ ತೀರಾ ಕಡಿಮೆ ಇರುವ ಕಾರಣ ಟಾಪ್​ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ.

ಐಪಿಎಲ್​ ಟೂರ್ನಿ ಮುಗಿದ ಬಳಿಕ ಟಿ-20 ವಿಶ್ವಕಪ್​ ಆರಂಭವಾಗಲಿದ್ದು, ಭಾರತ ತಂಡದಲ್ಲಿ ರಾಹುಲ್​ ಸ್ಥಾನ ಪಡೆದಿಲ್ಲ. ಕಳೆದ ಬಾರಿ ಉಪ ನಾಯಕನ ಸ್ಥಾನ ಪಡೆದಿದ್ದ ಆಟಗಾರ, ಈ ಬಾರಿ ಕನಿಷ್ಠ ತಂಡದಲ್ಲೂ ಕಾಣಿಸಿಕೊಂಡಿಲ್ಲ. ಮುಂಬೈ ಎದುರಿನ ಪಂದ್ಯ ಮುಗಿದ ಬಳಿಕ ಪ್ರಸಾರಕರ ಜೊತೆ ಮಾತನಾಡುತ್ತಿದ್ದಾಗ, "ಟೂರ್ನಿ ಮುಗಿದ ಬಳಿಕ ಏನು ಮಾಡುತ್ತೀರಾ" ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ತಮಾಷೆಯಾಗಿತ್ತು.

"ವಿಶ್ವಕಪ್​ನಲ್ಲಿ ನಾನು ಸ್ಥಾನ ಪಡೆದಿಲ್ಲ. ಹೀಗಾಗಿ, ನನ್ನ ಮಾವ ಸುನಿಲ್​ ಶೆಟ್ಟಿ ಅವರ ಜೊತೆಗೂಡಿ ಮೈದಾನದ ಹೊರಗೆ ಕುಳಿತು ರೋಹಿತ್​ ಶರ್ಮಾ ಅಂಡ್​ ಕಂಪನಿಯನ್ನು ಪ್ರೋತ್ಸಾಹಿಸುತ್ತೇವೆ" ಎಂದರು. ಐಪಿಎಲ್​ ಮುಗಿದಿದ್ದು, ನನ್ನ ಮಾವ ಸುನಿಲ್​ ಶೆಟ್ಟಿ ಅವರ ಬೆಂಬಲ ಸಿಕ್ಕಿದೆ. ಹೀಗಾಗಿ ನಾವಿಬ್ಬರೂ ಭಾರತ ತಂಡವನ್ನು ಚಿಯರ್​ ಮಾಡುತ್ತೇವೆ ಎಂದು ವಾಂಖೆಡೆ ಕ್ರೀಡಾಂಗಣದಲ್ಲಿ ಹೇಳಿದರು.

ಸುನಿಲ್​ ಶೆಟ್ಟಿ ಪ್ರಸ್ತಾಪವೇಕೆ?: ಐಪಿಎಲ್ ಆರಂಭಕ್ಕೂ ಮುನ್ನ ಆಯಾ ತಂಡಗಳು ಪ್ರಚಾರ ವಿಡಿಯೋ ಬಿಡುಗಡೆ ಮಾಡಿದ್ದವು. ಮುಂಬೈ ಇಂಡಿಯನ್ಸ್​ ತಂಡದ ವಿಡಿಯೋದಲ್ಲಿ ರೋಹಿತ್​ ಶರ್ಮಾ, ನಟ ಸುನಿಲ್​ ಶೆಟ್ಟಿ ಮತ್ತು ಕೆಎಲ್​ ರಾಹುಲ್​ ಕಾಣಿಸಿಕೊಂಡಿದ್ದರು. ಅದರಲ್ಲಿ ರೋಹಿತ್​ ಮತ್ತು ಸುನಿಲ್​ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾಗ ರಾಹುಲ್​ ಆಗಮಿಸುತ್ತಾರೆ. ಆಗ ರಾಹುಲ್​ರನ್ನು ತಡೆಯುವ ಸುನಿಲ್​ ನೀನೀಗ ಬೇರೆ ತಂಡ, ನಮ್ಮ ಮುಂಬೈ ತಂಡದ ರೋಹಿತ್​ಗೆ ನನ್ನ ಪ್ರಮುಖ ಆದ್ಯತೆ ಎನ್ನುತ್ತಾರೆ.

ಸಂಬಂಧಿಗಳಾಗಿದ್ದರೂ, ಐಪಿಎಲ್​ ಮುಗಿಯುವವರೆಗೂ ನಾವು ಬೇರೆ ಬೇರೆ. ಅಳಿಯನ ಬದಲಿಗೆ ಸ್ಥಳೀಯ ತಂಡದ ಆಟಗಾರ ಮುಖ್ಯ ಎಂದು ಸುನಿಲ್​ ಶೆಟ್ಟಿ ಅದರಲ್ಲಿ ಹೇಳುತ್ತಾರೆ. ಇದೀಗ, ಈ ಜಾಹೀರಾತನ್ನೇ ಪ್ರಸ್ತಾಪಿಸಿರುವ ಕೆಎಲ್​ ರಾಹುಲ್​ ತಮಾಷೆಯ ಹೇಳಿಕೆ ನೀಡಿದ್ದಾರೆ. ಜೂನ್​ 2 ರಿಂದ ವೆಸ್ಟ್​ ಇಂಡೀಸ್​ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್​ ಆರಂಭವಾಗಲಿವೆ. ರೋಹಿತ್​ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಸಲದ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದೆ. ಜೂನ್​ 5 ರಂದು ಐರ್ಲೆಂಡ್​ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಆಟದ ಸಮತೋಲನ ಹಾಳು ಮಾಡುತ್ತೆ: ವಿರಾಟ್​ ಕೊಹ್ಲಿ - Virat Kohli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.