ETV Bharat / business

ರೈಲಿನಲ್ಲಿ ಪ್ರಯಾಣಿಸುತ್ತಿರುವವರಿಗೂ 'ಫುಡ್ ಡೆಲಿವರಿ' ಮಾಡಲಿದೆ ಸ್ವಿಗ್ಗಿ: ಆರ್ಡರ್ ಮಾಡುವುದು ಹೇಗೆ ಗೊತ್ತಾ?

author img

By ETV Bharat Karnataka Team

Published : Mar 5, 2024, 5:01 PM IST

Swiggy partners with IRCTC to provide food delivery service on trains
Swiggy partners with IRCTC to provide food delivery service on trains

ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಐಆರ್​ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನವದೆಹಲಿ: ರೈಲಿನಲ್ಲಿ ಪ್ರಯಾಣಿಸುತ್ತಿರುವ ಗ್ರಾಹಕರಿಗೆ ಆಹಾರ ಸರಬರಾಜು ಮಾಡಲು ಆನ್ ಲೈನ್ ಫುಡ್ ಡೆಲಿವರಿ ಪ್ಲಾಟ್ ಫಾರ್ಮ್ ಸ್ವಿಗ್ಗಿ ಮಂಗಳವಾರ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಯೊಂದಿಗೆ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.

ಒಪ್ಪಂದದ ಭಾಗವಾಗಿ ಬೆಂಗಳೂರು, ಭುವನೇಶ್ವರ, ವಿಶಾಖಪಟ್ಟಣಂ ಮತ್ತು ವಿಜಯವಾಡ ಮಾರ್ಗದಲ್ಲಿ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಸ್ವಿಗ್ಗಿ ರೈಲಿನಲ್ಲಿಯೇ ಆಹಾರ ತಲುಪಿಸಲಿದೆ. ಮುಂಬರುವ ವಾರಗಳಲ್ಲಿ ಈ ಸೇವೆಯನ್ನು ದೇಶಾದ್ಯಂತ 59 ಹೆಚ್ಚುವರಿ ನಗರಗಳ ನಿಲ್ದಾಣಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ.

"ಹಲವಾರು ರಾಜ್ಯಗಳು ಮತ್ತು ಜಿಲ್ಲೆಗಳ ಮೂಲಕ ಹಾದುಹೋಗುವ ರೈಲು ಪ್ರಯಾಣದ ಸಮಯದಲ್ಲಿ ಭಾರತದ ವೈವಿಧ್ಯಮಯ ಆಹಾರ ಸವಿಯುವ ಅವಕಾಶ ಸಿಕ್ಕಾಗ ಅದು ಪ್ರಯಾಣವನ್ನು ಮತ್ತಷ್ಟು ಅನುಕೂಲಕರ ಮತ್ತು ಆನಂದದಾಯಕವಾಗಿಸುತ್ತದೆ." ಎಂದು ಸ್ವಿಗ್ಗಿಯ ಆಹಾರ ಮಾರುಕಟ್ಟೆ ವಿಭಾಗದ ಸಿಇಒ ರೋಹಿತ್ ಕಪೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಸ್ವಿಗ್ಗಿಯೊಂದಿಗಿನ ಈ ಸಹಭಾಗಿತ್ವವು ನಮ್ಮ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮತ್ತು ಆಹಾರದ ಆಯ್ಕೆಗಳನ್ನು ನೀಡಲಿದೆ. ಹೀಗಾಗಿ ಇದು ಅವರ ಪ್ರಯಾಣವನ್ನು ಹೆಚ್ಚು ಸ್ಮರಣೀಯವಾಗಿಸುತ್ತದೆ" ಎಂದು ಐಆರ್​ಸಿಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕುಮಾರ್ ಜೈನ್ ಹೇಳಿದರು.

ಪ್ರಯಾಣಿಕರಿಗೆ ತಲುಪಿಸಲಾಗುವ ಊಟವು ಬಿಸಿಯಾಗಿ ಮತ್ತು ತಾಜಾ ಆಗಿರುವಂತೆ ಇನ್ಸುಲೇಟೆಡ್ ಸ್ವಿಗ್ಗಿ ಬ್ಯಾಗ್​ಗಳಲ್ಲಿ ಆಹಾರವನ್ನು ಪ್ಯಾಕ್ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಸ್ವಿಗ್ಗಿಯ ಡೆಲಿವರಿ ಪಾರ್ಟನರ್​ಗಳು ವಿತರಣೆಗೆ ಕೆಲ ನಿಮಿಷಗಳ ಮೊದಲು ಆಯ್ದ ಪ್ಲಾಟ್ ಫಾರ್ಮ್ ಅನ್ನು ತಲುಪಿ ಗ್ರಾಹಕರಿಗೆ ಆಹಾರ ಹಸ್ತಾಂತರಿಸುತ್ತಾರೆ ಮತ್ತು ಆಹಾರ ಗ್ರಾಹಕರಿಗೆ ತಲುಪಿರುವುದನ್ನು ಕಂಪನಿಗೆ ಖಚಿತಪಡಿಸುತ್ತಾರೆ.

ಸ್ವಿಗ್ಗಿ ಭಾರತದ ಅತಿದೊಡ್ಡ ಆನ್ ಲೈನ್ ಆಹಾರ ಪದಾರ್ಥ ಆರ್ಡರ್ ಮತ್ತು ವಿತರಣಾ ಸರಪಳಿಯಾಗಿದ್ದು, ಇದು ಭಾರತದ ಯುನಿಕಾರ್ನ್ ಸ್ಟಾರ್ಟ್ಅಪ್ ಪಟ್ಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಆಗಿದ್ದು, 2014 ರಲ್ಲಿ ಪ್ರಾರಂಭವಾಯಿತು ಮತ್ತು ಪ್ರಸ್ತುತ 100 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ವ್ಯಾಪಿಸಿದೆ.

ರೈಲಿನಲ್ಲಿ ಪ್ರಯಾಣಿಸುವಾಗ ಸ್ವಿಗ್ಗಿಯಲ್ಲಿ ಆರ್ಡರ್ ಮಾಡುವುದು ಹೇಗೆ?: ರೈಲಿನಲ್ಲಿಯೇ ಫುಡ್ ಡೆಲಿವರಿ ಪಡೆಯಬೇಕಾದರೆ ನಿಮ್ಮ ಮೊಬೈಲ್​ನಲ್ಲಿ ಐಆರ್​ಸಿಟಿಸಿ ಆ್ಯಪ್ ಇನ್​ಸ್ಟಾಲ್ ಆಗಿರುವುದು ಅತ್ಯಗತ್ಯ. ಈ ಆ್ಯಪ್​ನಲ್ಲಿ ಪ್ರಯಾಣಿಕರು ತಮ್ಮ ಪಿಎನ್​ಆರ್​ ನಮೂದಿಸಿದ ನಂತರ ಯಾವ ನಿಲ್ದಾಣದಲ್ಲಿ ಆಹಾರ ಡೆಲಿವರಿ ಬೇಕು ಮತ್ತು ಯಾವ ಹೋಟೆಲ್​ನ ಯಾವ ಆಹಾರ ಬೇಕೆಂಬುದನ್ನು ಆಯ್ಕೆ ಮಾಡಿ ಆಹಾರ ಬುಕ್ ಮಾಡಬಹುದು.

ಇದನ್ನೂ ಓದಿ : ಲಾವಾ 'ಬ್ಲೇಜ್ ಕರ್ವ್ 5ಜಿ' ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.