ETV Bharat / bharat

ಭೋಪಾಲ್: ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ - Minor Girl Raped

author img

By PTI

Published : May 1, 2024, 5:56 PM IST

ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ
ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ

ಮಧ್ಯಪ್ರದೇಶದ ಭೋಪಾಲ್​ನಲ್ಲಿನ ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆ.

ಭೋಪಾಲ್(ಮಧ್ಯಪ್ರದೇಶ): ಕರ್ನಾಟಕದಲ್ಲಿ ಸಂಸದರೊಬ್ಬರ ವಿರುದ್ಧ ಕೇಳಿಬಂದ ಅತ್ಯಾಚಾರ ಕರ್ಮಕಾಂಡ ಆರೋಪ ಪ್ರಕರಣವು ದೇಶದಲ್ಲಿ ಭಾರೀ ಸಂಚಲನ ಉಂಟುಮಾಡಿದೆ. ಹೈ ಪ್ರೊಫೈಲ್​ ಪ್ರಕರಣದ ತನಿಖೆಗಾಗಿ ಈಗಾಗಲೇ ರಾಜ್ಯ ಸರ್ಕಾರ ಎಸ್​ಐಟಿ ರಚಿಸಿದೆ. ಇನ್ನೊಂದೆಡೆ, ಮಧ್ಯಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಹಾಸ್ಟೆಲ್​ನಲ್ಲಿ ಅತ್ಯಾಚಾರ​ ನಡೆಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆಗಾಗಿ ಅಲ್ಲಿನ ಸರ್ಕಾರ ತಕ್ಷಣವೇ ವಿಶೇಷ ತನಿಖಾ ತಂಡ (ಎಸ್​​ಐಟಿ) ರಚಿಸಿದೆ. ಇದರ ಬೆನ್ನಲ್ಲೇ ಮೂವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಕೇಸ್​: "ಪ್ರಕರಣದಲ್ಲಿ ಶಂಕಿತ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರು ನಮೂದಿಸಿದ್ದರೂ, ಅವರ ಗುರುತು ಪತ್ತೆ ಮಾಡಲಾಗುತ್ತಿದೆ. ಕೃತ್ಯಕ್ಕೂ ಮೊದಲು ಬಾಲಕಿಗೆ ಮಾದಕ ದ್ರವ್ಯ ನೀಡಲಾಗಿತ್ತು ಎಂಬ ಆರೋಪವಿದೆ. ತನಿಖೆಯ ನಂತರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ" ಎಂದು ಮಿಸ್ರೋಡ್ ಪೊಲೀಸ್ ಠಾಣೆ ಅಧಿಕಾರಿ ಮನೀಶ್ ರಾಜ್ ಭಡೋರಿಯಾ ತಿಳಿಸಿದ್ದಾರೆ.

"ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆಕೆಯ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಕ್ಲಿನಿಕಲ್ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ವರದಿ ಬಂದ ಬಳಿಕವೇ ತಿಳಿದುಬರಲಿದೆ" ಎಂದು ಅವರು ಹೇಳಿದರು.

"ಬಾಲಕಿ ದೇಹದ ಖಾಸಗಿ ಭಾಗದಲ್ಲಿ ಗಾಯಗಳು ಮತ್ತು ಊತ ಕಂಡುಬಂದಿದೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಇದೆಲ್ಲವೂ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗೊತ್ತಾಗಲಿದೆ. ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಸ್ಟೆಲ್‌ನ ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಗುರುತು ಪತ್ತೆಯಾದ ನಂತರ ಅವರನ್ನು ಬಂಧಿಸಲಾಗುವುದು" ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು. ಪ್ರಕರಣದ ಸೂಕ್ಷ್ಮತೆಯನ್ನು ಅರಿತುಕೊಂಡು ರಾಜ್ಯ ಸರ್ಕಾರ ತನಿಖೆಯನ್ನು ಎಸ್‌ಐಟಿಗೆ ವಹಿಸಿ ಆದೇಶಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 'ಸತ್ಯ ಆದಷ್ಟು ಬೇಗ ಹೊರಬರಲಿದೆ': ಎಸ್ಐಟಿ ಎದುರು ಹಾಜರಾಗಲು ಕಾಲಾವಕಾಶ ಕೇಳಿದ ಪ್ರಜ್ವಲ್ ರೇವಣ್ಣ - Prajwal Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.