ETV Bharat / bharat

ದೇಶದ ಅತ್ಯಂತ ಕಿರಿಯ ಉಪನ್ಯಾಸಕ; ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಪಾಠ ಮಾಡುವ 7ರ ಪೋರ!

author img

By ETV Bharat Karnataka Team

Published : Mar 19, 2024, 4:59 PM IST

Meet Seven-Year-Old Whizkid Guru Upadhyay, Who Teaches UPSC Aspirants, B Tech Students
ದೇಶದ ಅತ್ಯಂತ ಕಿರಿಯ ಉಪನ್ಯಾಸಕ; ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಪಾಠ ಮಾಡುವ 7ರ ಪೋರ!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗುರು ಉಪಾಧ್ಯಾಯ ಎಂಬ 7 ವರ್ಷದ ಬಾಲಕ, ಕೇಂದ್ರ ಲೋಕಸೇವಾ ಆಯೋಗದ ಆಕಾಂಕ್ಷಿಗಳು, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅಸಾಧಾರಣ ಪ್ರತಿಭೆಯಾಗಿ ಹೊರ ಹೊಮ್ಮಿದ್ದಾನೆ.

ಹೈದರಾಬಾದ್: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಗಳು ಎಂದರೆ ಕಬ್ಬಿಣದ ಕಡಲೆ. ಅನೇಕರು ಈ ಕಠಿಣ ಪರೀಕ್ಷೆಗಳನ್ನು ಎದುರಿಸಲು ಕೂಡ ಹಿಂದೇಟು ಹಾಕ್ತಾರೆ. ಮತ್ತೆ ಅನೇಕರು ಪರೀಕ್ಷೆಗಳನ್ನು ಬರೆದರೂ ಒಂದೇ ಪ್ರಯತ್ನದಲ್ಲಿ ತೇರ್ಗಡೆ ಆಗೋದು ಕಡಿಮೆ. ಇಂತಹ ಪರೀಕ್ಷೆಗಳಿಗೆ ಏಳು ವರ್ಷದ ಬಾಲಕನೊಬ್ಬ ಪಾಠ ಮಾಡುತ್ತಾನೆ ಎಂದರೆ ನೀವು ನಂಬಲೇಬೇಕು.

ಹೌದು, ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗುರು ಉಪಾಧ್ಯಾಯ ಎಂಬ ಪೋರ, ಯುಪಿಎಸ್‌ಸಿ ಆಕಾಂಕ್ಷಿಗಳು ಮತ್ತು ಬಿಟೆಕ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾನೆ. ಈ ಅಪರೂಪದ ಸಾಧನೆಯಿಂದ ಈ ಬಾಲಕ 'ಗೂಗಲ್ ಗುರು' ಎಂದೇ ಹೆಸರು ಮಾಡಿದ್ದಾನೆ. ಯುಪಿಎಸ್​ಸಿ ಆಕಾಂಕ್ಷಿಗಳು, ಬಿಟೆಕ್ ವಿದ್ಯಾರ್ಥಿಗಳಿಗೆ ಈತ ಕೇವಲ ಒಂದಲ್ಲ, ಎರಡಲ್ಲ... 14 ವಿಷಯಗಳಿಗೆ ಪಾಠ ಮಾಡುತ್ತಾನೆ.

ಗುರು ಉಪಾಧ್ಯಾಯ ಐದು ವರ್ಷದವರಾಗಿದ್ದಾಗಿನಿಂದಲೂ ಪಾಠ ಮಾಡುತ್ತಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​​ನಲ್ಲೂ ಸ್ಥಾನ ಪಡೆದುಕೊಂಡಿದ್ದಾನೆ. ಅಲ್ಲದೇ, ದೇಶದ ಅತ್ಯಂತ ಕಿರಿಯ ಉಪನ್ಯಾಸಕ ಎಂಬ ದಾಖಲೆಯನ್ನು ಹೊಂದಿದ್ದಾನೆ. ವಿದ್ಯಾರ್ಥಿಗಳಿಗೆ ಆಫ್‌ಲೈನ್‌ನಲ್ಲಿ ಮಾತ್ರವಲ್ಲದೇ, ಆನ್‌ಲೈನ್‌ನಲ್ಲಿಯೂ ಪಾಠ ಮಾಡುತ್ತಾನೆ. ಇದಕ್ಕಾಗಿ ವಿಶೇಷವಾಗಿ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾನೆ.

ತನ್ನ ಅಸಾಧಾರಣ ಪ್ರತಿಭೆ ಮೂಲಕ ಗುರು ಉಪಾಧ್ಯಾಯ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್​ ದಾಸ್​ ಮಹಾರಾಜ್​ ಅವರ ಗಮನ ಸೆಳೆದಿದ್ದಾನೆ. ಗೋಪಾಲ್​ ದಾಸ್​ ಮಹಾರಾಜ್ ಅವರೇ ಖುದ್ದು ಬಾಲಕನ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

17 ತಿಂಗಳ ಮಗುವಾಗಿದ್ದಾಗಲೇ ಗುರು ಉಪಾಧ್ಯಾಯನಿಗೆ ಅಧ್ಯಯನದಲ್ಲಿದ್ದ ಆಸಕ್ತಿ ಮತ್ತು ಆತನ ಅಸಾಮಾನ್ಯ ಪ್ರತಿಭೆಯನ್ನು ಪೋಷಕರು ಗುರುತಿಸಿದ್ದರು. ಅಂದಿನಿಂದಲೇ ತಮ್ಮ ಮಗನಿಗೆ ಪ್ರೋತ್ಸಾಹಿಸುತ್ತಾ, ಅತ್ಯಂತ ಕಷ್ಟಕರ ಎಂದು ಪರಿಗಣಿಸಲಾದ ಸಿವಿಲ್ ಮತ್ತು ಎಂಜಿನಿಯರಿಂಗ್ ಸಂಬಂಧಿತ ವಿಷಯಗಳನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಲು ಆರಂಭಿಸಿದ್ದರು. ಇದರ ಫಲವಾಗಿ ಸದ್ಯ ಹಲವು ಯುವಕ - ಯುವತಿಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಈ ಬಾಲಕ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾನೆ.

"ಗುರು ಉಪಾಧ್ಯಾಯ ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಿಂದ ಪ್ರಮಾಣಪತ್ರ ಸ್ವೀಕರಿಸಿದ್ದಾನೆ. ತನ್ನ ಏಳನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಮತ್ತು ಎಂಜಿನಿಯರಿಂಗ್​ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ 14 ಪ್ರಮುಖ ವಿಷಯಗಳನ್ನು ಕಲಿಸುತ್ತಿದ್ದಾನೆ. ಆಫ್‌ಲೈನ್‌, ಆನ್‌ಲೈನ್‌ ಎರಡರಲ್ಲೂ ತರಗತಿಗಳನ್ನು ತೆಗೆದುಕೊಳ್ಳುತ್ತಾನೆ. ಅತ್ಯಂತ ಕಷ್ಟಕರವಾದ ಪ್ರಶ್ನೆಗಳಿಗೆ ಸೆಕೆಂಡುಗಳಲ್ಲಿ ಉತ್ತರಿಸುತ್ತಾನೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಮಹಾರಾಜ್ ಕೂಡ ನನ್ನ ಮಗನ ಪ್ರತಿಭೆಯನ್ನು ಮೆಚ್ಚಿದ್ದಾರೆ. ಇದು ಪೋಷಕರಾದ ನಮಗೆ ಹೆಮ್ಮೆಯ ಸಂಗತಿ'' ಎಂದು ತಂದೆ ಅರವಿಂದ್ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.

ಇದನ್ನೂ ಓದಿ: ನೆಚ್ಚಿನ ಶಿಕ್ಷಕಿ ಕುರಿತು 16 ಕವಿತೆಗಳ ಕೃತಿ ರಚನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ವಿದ್ಯಾರ್ಥಿನಿಯ ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.