ETV Bharat / bharat

2ನೇ ಹಂತದ ಲೋಕಸಭಾ ಚುನಾವಣೆಗೆ ದೇಶ ಸಜ್ಜು; ಪ್ರತಿಷ್ಠಿತ ಕ್ಷೇತ್ರ, ಘಟಾನುಘಟಿಗಳ ಮಾಹಿತಿ ಸೇರಿ ಸಂಪೂರ್ಣ ವಿವರ - Lok Sabha Election 2024 Phase 2

author img

By ETV Bharat Karnataka Team

Published : Apr 24, 2024, 9:56 PM IST

Updated : Apr 25, 2024, 9:30 AM IST

2024ರ ಲೋಕಸಭಾ ಚುನಾವಣೆಗೆ ನಿಗದಿಯಾದ ಏಳು ಹಂತಗಳ ಮತದಾನದ ಪೈಕಿ ಏಪ್ರಿಲ್​ 26ರಂದು ಕರ್ನಾಟಕ ಸೇರಿ ವಿವಿಧ ರಾಜ್ಯಗಳ 88 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.

Lok sabha election 2ND PHASE
2ನೇ ಹಂತದ ಲೋಕ ಸಮರಕ್ಕೆ ದೇಶ ಸಜ್ಜು

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಕರ್ನಾಟಕ ಸೇರಿ 13 ರಾಜ್ಯಗಳ 88 ಸಂಸದೀಯ ಕ್ಷೇತ್ರಗಳಿಗೆ ಮತದಾನ ಜರುಗಲಿದೆ. ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮನೆ-ಮನೆ ಪ್ರಚಾರಕ್ಕೆ ಅಭ್ಯರ್ಥಿಗಳು ಅಣಿಯಾಗಿದ್ದಾರೆ.

ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಏಪ್ರಿಲ್​ 19ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಚುನಾವಣೆ ಮುಗಿದಿದೆ. ಶುಕ್ರವಾರ ಒಟ್ಟು 89 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಮಧ್ಯಪ್ರದೇಶದ ಬೇತುಲ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಅಭ್ಯರ್ಥಿ ಅಶೋಕ್ ಭಾಲವಿ ಏಪ್ರಿಲ್ 9ರಂದು ನಿಧನ ಹೊಂದಿದ್ದಾರೆ. ಆದ್ದರಿಂದ ಚುನಾವಣಾ ಆಯೋಗವು ಈ ಕ್ಷೇತ್ರದ ಚುನಾವಣೆಯನ್ನು ಮೇ 7ಕ್ಕೆ (ಮೂರನೇ ಹಂತ) ಮುಂದೂಡಿದೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ಯಾವ ರಾಜ್ಯ, ಎಷ್ಟು ಕ್ಷೇತ್ರ?: ಎರಡನೇ ಹಂತದಲ್ಲಿ ಕರ್ನಾಟಕದ ಹಳೆ ಮೈಸೂರು, ಬೆಂಗಳೂರು ಭಾಗದ 14 ಲೋಕಸಭೆ ಕ್ಷೇತ್ರಗಳು ಸೇರಿ ದೇಶದ ವಿವಿಧೆಡೆಯ ಒಟ್ಟು 88 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕರ್ನಾಟಕ ಹೊರತುಪಡಿಸಿ ಅಸ್ಸಾಂ-5, ಬಿಹಾರ-5, ಛತ್ತೀಸ್‌ಗಢ-3, ಕೇರಳ-20, ಮಧ್ಯಪ್ರದೇಶ-6, ಮಹಾರಾಷ್ಟ್ರ-8, ಮಣಿಪುರ-1, ರಾಜಸ್ಥಾನ-13, ತ್ರಿಪುರಾ-1, ಉತ್ತರ ಪ್ರದೇಶ-8, ಪಶ್ಚಿಮ ಬಂಗಾಳ-3 ಮತ್ತು ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರಕ್ಕೆ ಮತದಾನ ನಿಗದಿಯಾಗಿದೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ಪ್ರತಿಷ್ಠಿತ ಕ್ಷೇತ್ರಗಳು ಯಾವುವು?: ದೇಶದ ಗಮನ ಸೆಳೆದ ಪ್ರತಿಷ್ಠಿತ ಮತ್ತು ಪ್ರಮುಖ ಕ್ಷೇತ್ರಗಳು ಈ 2ನೇ ಹಂತದಲ್ಲಿ ಮತದಾನಕ್ಕೆ ಅಣಿಯಾಗಿವೆ. ಇದರಲ್ಲಿ ಕರ್ನಾಟಕದ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಗ್ರಾಮಾಂತರ, ಬಿಹಾರದ ಕಿಶನ್‌ಗಂಜ್, ಅಸ್ಸಾಂನ ಸಿಲ್ಚಾರ್; ಛತ್ತೀಸ್‌ಗಢದಲ್ಲಿ ಕಂಕೇರ್, ಕೇರಳದ ವಯನಾಡ್, ಕೋಝಿಕ್ಕೋಡ್, ತಿರುವನಂತಪುರಂ, ಮಧ್ಯಪ್ರದೇಶದಲ್ಲಿ ದಾಮೋಹ್ ಮತ್ತು ರೇವಾ; ಮಹಾರಾಷ್ಟ್ರದ ಅಕೋಲಾ, ಅಮರಾವತಿ, ಮಣಿಪುರದ ಹೊರವಲಯ ಮಣಿಪುರ; ರಾಜಸ್ಥಾನದ ಬಾರ್ಮೆರ್, ಕೋಟಾ, ಜಲೋರ್, ಅಜ್ಮೀರ್; ಉತ್ತರ ಪ್ರದೇಶದ ಮಥುರಾ ಮತ್ತು ಅಲಿಗಢ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಬಲೂರ್‌ಘಾಟ್, ಜಮ್ಮು ಮತ್ತು ಕಾಶ್ಮೀರದಲ್ಲಿ ಜಮ್ಮು ಕ್ಷೇತ್ರ ಸೇರಿದೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ಘಟಾನುಘಟಿ ಅಭ್ಯರ್ಥಿಗಳು-ಹೇಮಾ ಮಾಲಿನಿ(ಮಥುರಾ): ಖ್ಯಾತ ನಟಿ ಮತ್ತು ರಾಜಕಾರಣಿ ಹೇಮಾಮಾಲಿನಿ ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. 2014ರಿಂದ ಬಿಜೆಪಿಯಿಂದ ಗೆಲುವು ಕಂಡಿರುವ ಇವರು ಹ್ಯಾಟ್ರಿಕ್​ ಜಯದ ನಿರೀಕ್ಷೆಯಲ್ಲಿದ್ದಾರೆ. 2019ರ ಚುನಾವಣೆಯಲ್ಲಿ 5.30 ಲಕ್ಷ ಮತಗಳನ್ನು ಪಡೆದು, ಸಮೀಪದ ಪ್ರತಿಸ್ಪರ್ಧಿ ರಾಷ್ಟ್ರೀಯ ಲೋಕದಳದ ಕುನ್ವರ್ ನರೇಂದ್ರ ಸಿಂಗ್ ವಿರುದ್ಧ 2.93 ಲಕ್ಷ ಮತಗಳ ಭಾರೀ ಅಂತರದಿಂದ ಗೆದ್ದಿದ್ದರು. ಈ ಬಾರಿ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಧಂಗರ್ ಅವರು ಹೇಮಾ ಮಾಲಿನಿ ಅವರಿಗೆ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ರಾಮಾಯಣ ನಟ ಅರುಣ್ ಗೋವಿಲ್(ಮೀರತ್): ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರದಿಂದ ಹೆಸರುವಾಸಿಯಾಗಿರುವ ಕಿರುತೆರೆ ನಟ ಅರುಣ್ ಗೋವಿಲ್ ಈ ಬಾರಿ ಮೀರತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿಯ ರಾಜೇಂದ್ರ ಅಗರ್ವಾಲ್ ಅವರು ಬಿಎಸ್‌ಪಿಯ ಹಾಜಿ ಮೊಹಮ್ಮದ್ ಯಾಕೂಬ್ ವಿರುದ್ಧ ಗೆದ್ದಿದ್ದರು. ಈಗ ಗೋವಿಲ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಬಿಎಸ್‌ಪಿಯ ದೇವವ್ರತ್ ಕುಮಾರ್ ತ್ಯಾಗಿ ಮತ್ತು ಸಮಾಜವಾದಿ ಪಕ್ಷ ಸುನೀತಾ ವರ್ಮಾ ಅಖಾಡದಲ್ಲಿದ್ದಾರೆ.

ರಾಹುಲ್ ಗಾಂಧಿ(ವಯನಾಡ್): ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಕೇರಳದ ವಯನಾಡ್‌ನಲ್ಲಿ ಎರಡನೇ ಬಾರಿಗೆ ಗೆಲುವಿನ ವಿಶ್ವಾಸದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ವಯನಾಡ್​ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ 55,120 ಮತಗಳ ಗಮನಾರ್ಹ ಅಂತರದಿಂದ ಸೋತಿದ್ದರು. ವಯನಾಡ್‌ನಲ್ಲಿ ಸಿಪಿಐನ ಪಿ.ಪಿ.ಸುನೀರ್ ವಿರುದ್ಧ ರಾಹುಲ್​ 7,06,367 ಮತಗಳಿಂದ ಗೆಲುವು ದಾಖಲಿಸಿದ್ದರು. ಈ ಬಾರಿ ವಯನಾಡ್‌ನಲ್ಲಿ ರಾಹುಲ್​ ವಿರುದ್ಧ ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಆಡಳಿತಾರೂಢ ಎಡಪಕ್ಷಗಳ ಅಭ್ಯರ್ಥಿ ಆನಿ ರಾಜಾ ಸವಾಲೊಡ್ಡಿದ್ದಾರೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ಓಂ ಬಿರ್ಲಾ(ಕೋಟಾ): ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಾಜಸ್ಥಾನದ ಕೋಟಾದಿಂದ ಸ್ಪರ್ಧಿಸಿದ್ದಾರೆ. 2014 ಮತ್ತು 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಇಲ್ಯಾರಾಜ್ ಸಿಂಗ್ ಮತ್ತು ರಾಮ್​ನಾರಾಯಣ್ ಮೀನಾ ಅವರನ್ನು ಸೋಲಿಸಿ ಭಾರೀ ಅಂತರದಿಂದ ಓಂ ಬಿರ್ಲಾ ಗೆದ್ದಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಸೇರಿರುವ ಗುಜ್ಜರ್ ಸಮುದಾಯದ ಪ್ರಹ್ಲಾದ್ ಗುಂಜಾಲ್ ಪ್ರಬಲ ಎದುರಾಳಿಯಾಗಿದ್ದಾರೆ.

ಶಶಿ ತರೂರ್(ತಿರುವನಂತಪುರ): ಕೇರಳದ ರಾಜಧಾನಿ ತಿರುವನಂತಪುರ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಮತ್ತು ಹಾಲಿ ಸಂಸದ ಶಶಿ ತರೂರ್ ಸತತ ನಾಲ್ಕನೇ ಗೆಲುವಿನ ತವಕದಲ್ಲಿದ್ದಾರೆ. ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಚುನಾವಣಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದರಿಂದ ಈ ಕ್ಷೇತ್ರ ಗಮನ ಸೆಳೆದಿದೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ಹೆಚ್.ಡಿ.ಕುಮಾರಸ್ವಾಮಿ(ಮಂಡ್ಯ): ಜೆಡಿಎಸ್​ ನಾಯಕ, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಯಿಂದಾಗಿ ಮಂಡ್ಯ ಕ್ಷೇತ್ರ ಗಮನ ಸೆಳೆದಿದೆ. 2019ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಟಿ ಸುಮಲತಾ ಅಂಬರೀಶ್ ಗೆದ್ದಿದ್ದರು. 7 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿ ವಿಜಯಶಾಲಿಯಾಗಿದ್ದರು. ಆಗ ಎದುರಾಳಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಭೂಪೇಶ್ ಬಾಘೇಲ್(ರಾಜನಂದಗಾಂವ್): ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜನಂದಗಾಂವ್ ಕ್ಷೇತ್ರದಿಂದ ಲೋಕಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. ಆದ್ದರಿಂದ ಕಳೆದ 17 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ರಾಜನಂದಗಾಂವ್‌ ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪಟ್ಟಿದೆ. ಬಿಜೆಪಿಯ ಹಾಲಿ ಸಂಸದ ಸಂತೋಷ್ ಪಾಂಡೆ ಸತತ ಎರಡನೇ ಬಾರಿಗೆ ಗೆಲುವಿನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ
2ನೇ ಹಂತದ ಲೋಕಸಭಾ ಚುನಾವಣೆ ಮಾಹಿತಿ

ಪ್ರಕಾಶ್ ಅಂಬೇಡ್ಕರ್(ಅಕೋಲಾ): ವಂಚಿತ್ ಬಹುಜನ ಅಗಾಧಿ (ವಿಬಿಎ) ಮುಖ್ಯಸ್ಥ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರದ ಅಕೋಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಪ್ರಕಾಶ್ 12 ಮತ್ತು 13ನೇ ಲೋಕಸಭೆಯ ಸದಸ್ಯರಾಗಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ಬಿಜೆಪಿಯಿಂದ ಹಾಲಿ ಸಂಸದ ಸಂಜಯ್ ಧೋತ್ರೆ ಅವರ ಪುತ್ರ ಅನುಪ್ ಸಂಜಯ್ ಧೋತ್ರೆ, ಕಾಂಗ್ರೆಸ್​ನಿಂದ ಮರಾಠಾ ಸಮುದಾಯದ ಡಾ.ಅಭಯ್ ಪಾಟೀಲ್ ಸ್ಪರ್ಧೆಯಿಂದ ತ್ರಿಕೋನ ಹೋರಾಟ ನಿರ್ಮಾಣವಾಗಿದೆ.

ಇದನ್ನೂ ಓದಿ: ಬೆಂ.ಗ್ರಾಮಾಂತರ ಕ್ಷೇತ್ರದ ಮೇಲೆ ತೀವ್ರ ನಿಗಾ, ಹೆಚ್ಚುವರಿ ಅರೆಸೇನಾ ಪಡೆ ನಿಯೋಜನೆ: ಚುನಾವಣಾಧಿಕಾರಿ

Last Updated :Apr 25, 2024, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.