ETV Bharat / bharat

ನಿಶಸ್ತ್ರೀಕರಣ ಮತ್ತು ಪ್ರಸರಣರಹಿತ ಜಾಗೃತಿ ದಿನ: ಗುರಿ, ಇತಿಹಾಸ, ಇಂದಿನ ಅಗತ್ಯತೆ

author img

By ETV Bharat Karnataka Team

Published : Mar 5, 2024, 6:56 AM IST

the-international-day-for-disarmament-and-non-proliferation-awareness-2024
ನಿಶಸ್ತ್ರೀಕರಣ ಮತ್ತು ಪ್ರಸರಣ ರಹಿತ ಜಾಗೃತಿ ದಿನ: ಈ ದಿನದ ಮಹತ್ವ ಏನು?

ಜನರಲ್ಲಿ ನಿಶ್ಯಸ್ತ್ರೀಕರಣದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್​ 5ರಂದು ಅಂತಾರಾಷ್ಟ್ರೀಯ ನಿಶ್ಯಸ್ತ್ರೀಕರಣ ಮತ್ತು ಪ್ರಸರಣ ರಹಿತ ಜಾಗೃತಿ ದಿನ ಆಚರಿಸಲಾಗುತ್ತದೆ.

ಹೈದರಾಬಾದ್: ಇಂದು ಅಂತಾರಾಷ್ಟ್ರೀಯ ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ಜಾಗೃತಿ ದಿನ. ನಿಶ್ಯಸ್ತ್ರೀಕರಣವೆಂದರೆ, ಎಲ್ಲಾ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು (ಡಬ್ಲ್ಯೂಎಂಡಿ) ನಿರ್ಮೂಲನೆ ಮಾಡುವುದು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ವ್ಯಾಖ್ಯಾನಿಸಿದೆ. ಅಣ್ವಸ್ತ್ರ ಪ್ರಸರಣ ನಿಷೇಧ ಎಂದರೆ ಪರಮಾಣು ಅಥವಾ ರಾಸಾಯನಿಕ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಪ್ರಸರಣೆಯನ್ನು ಯುದ್ಧದಾಹಿ ರಾಷ್ಟ್ರಗಳ ಕೈಗೆ ಸಿಗದಂತೆ ಮಾಡುವುದಾಗಿದೆ.

ದಿನದ ಇತಿಹಾಸ: ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ನಿಶ್ಯಸ್ತ್ರೀಕರಣದ ಬಗ್ಗೆ ಜಾಗೃತಿ ಮತ್ತು ತಿಳಿವಳಿಕೆ ಮೂಡಿಸಲು ವಿಶ್ವಸಂಸ್ಥೆ ಮೊದಲ ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ಜಾಗೃತಿಯನ್ನು ಮಾರ್ಚ್ 5, 2023ರಂದು ಆಚರಿಸಿತು. ಡಿಸೆಂಬರ್ 7, 2022ರಂದು ಯುಎನ್‌ಜಿಎ ಈ ಕುರಿತ ನಿರ್ಣಯ ಅಂಗೀಕರಿಸಿತು. ಈ ಮೂಲಕ ಪ್ರತೀ ವರ್ಷ ಮಾರ್ಚ್ 5 ಅನ್ನು 'ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ಅಂತಾರಾಷ್ಟ್ರೀಯ ದಿನ' ಎಂದು ಘೋಷಿಸಿತು.

ಗುರಿಗಳೇನು?:

  • ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಅಪಾಯಗಳು ಮತ್ತು ನಿಶ್ಯಸ್ತ್ರೀಕರಣ ಮತ್ತು ಪ್ರಸರಣ ರಹಿತತೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು.
  • ನಿಶ್ಯಸ್ತ್ರೀಕರಣ ಮತ್ತು ಪ್ರಸರಣರಹಿತ ವಿಷಯಗಳ ಬಗ್ಗೆ ಶಿಕ್ಷಣವನ್ನು ಉತ್ತೇಜಿಸುವುದು.
  • ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ಕಡಿಮೆ ಮಾಡಲು ಮತ್ತು ಶಾಂತಿ, ಭದ್ರತೆಯನ್ನು ಉತ್ತೇಜಿಸುವ ಕ್ರಮವನ್ನು ಪ್ರೋತ್ಸಾಹಿಸುವುದು.

21ನೇ ಶತಮಾನದಲ್ಲಿ ನಿಶ್ಯಸ್ತ್ರೀಕರಣದ ಅಗತ್ಯ: ನಿಶ್ಯಸ್ತ್ರೀಕರಣವು ಸಶಸ್ತ್ರ ಸಂಘರ್ಷಗಳನ್ನು ತಡೆಗಟ್ಟಲು ಮತ್ತು ಅವುಗಳ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುವ ಸಾಧನ. ಶೀತಲ ಸಮರದ ಉದ್ವಿಗ್ನತೆಗಳು ಹಿಂತಿರುಗಿವೆ. ಜಗತ್ತು ಹೆಚ್ಚು ಸಂಕೀರ್ಣ ಮತ್ತು ಅಪಾಯಕಾರಿ ವಾತಾವರಣದ ಎದುರಿಸುತ್ತಿದೆ. ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯಿಂದಾಗಿ ಸಶಸ್ತ್ರ ಸಂಘರ್ಷಗಳು ನಾಗರಿಕರಿಗೆ ಮಾರಕವಾಗಿವೆ. ಇದನ್ನು ಸಿರಿಯಾ, ಯೆಮೆನ್, ಇರಾಕ್, ಅಫ್ಘಾನಿಸ್ತಾನ ಮತ್ತು ಪ್ಯಾಲೆಸ್ಟೈನ್‌ನಲ್ಲಿನ ಅಂತರ್ಯುದ್ಧಗಳು, ಭಯೋತ್ಪಾದಕರ ಮೂಲಕ ಕಾಣಬಹುದು.

ಜಾಗತಿಕವಾಗಿ ಮಿಲಿಟರಿ ವೆಚ್ಚ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯವಾಗಿ ಒಪ್ಪಿಕೊಂಡಿರುವ ಕಟ್ಟುಪಾಡುಗಳ ಆಯುಷ್ಯ ಮುಗಿಯುತ್ತಿದೆ. ವ್ಯೂಹಾತ್ಮಕ ಶಸ್ತ್ರಾಸ್ತ್ರ ನಿಯಂತ್ರಣದ ಮಾತುಕತೆಗಳು ಸ್ಥಗಿತಗೊಂಡಿವೆ ಮತ್ತು ಅಸ್ತಿತ್ವದಲ್ಲಿರುವ ಉಪಕರಣಗಳು ಹೆಚ್ಚು ಅಪಾಯಕ್ಕೊಳಗಾಗಿವೆ. 12,700 ಪರಮಾಣು ಶಸ್ತ್ರಾಸ್ತ್ರಗಳು ಇಂದಿಗೂ ಮಾನವರ ಅಸ್ತಿತ್ವಕ್ಕೆ ಬೆದರಿಕೆಯೊಡ್ಡುತ್ತಿವೆ.

ಪರಮಾಣು ಹತ್ಯಾಕಾಂಡಕ್ಕೆ ಜಗತ್ತು ಸಾಕ್ಷಿಯಾಗಿ 79 ವರ್ಷಗಳು ಕಳೆದರೂ, ಹಲವಾರು ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ತಮ್ಮ ರಾಷ್ಟ್ರೀಯ ಭದ್ರತಾ ನೀತಿಗಳನ್ನು ಅನುಸರಿಸುತ್ತಿವೆ. 1968ರಲ್ಲಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದದ (ಎನ್​ಪಿಟಿ) ತಾರತಮ್ಯ ನಿಯಮಗಳು ಪರಮಾಣು ಮುಕ್ತ ಜಗತ್ತಿಗೆ ಪ್ರಮುಖ ಅಡಚಣೆಯಾಗಿದೆ.

ಈ ಒಪ್ಪಂದವು ಅಣ್ವಸ್ತ್ರವಲ್ಲದ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ನಿಷೇಧಿಸುತ್ತದೆ. ಅಣ್ವಸ್ತ್ರ ಪ್ರಸರಣ ನಿಷೇಧದಿಂದ ಫ್ರಾನ್ಸ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ರಷ್ಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್(ಯುಎಸ್‌ಎ) ವಿನಾಯಿತಿ ನೀಡುತ್ತದೆ. ಇದು ತಾರಮತ್ಯ ನೀತಿ ಎಂದು ಇತರೆ ರಾಷ್ಟ್ರಗಳು ದೂರುತ್ತವೆ. ಎಲ್ಲಾ ಪರಮಾಣು ಆಯುಧಗಳಲ್ಲಿ ಸರಿಸುಮಾರು ಶೇ.91ದಷ್ಟನ್ನು ರಷ್ಯಾ ಮತ್ತು ಯುಎಸ್ಎ ಹೊಂದಿವೆ. ಎರಡು ದೇಶಗಳ ಮಿಲಿಟರಿ ಸಂಗ್ರಹದಲ್ಲಿ ತಲಾ 4,000 ಅಣ್ವಸ್ತ್ರಗಳಿವೆ.

ವಿಶ್ವ ಶಾಂತಿಗೆ ನಿಶ್ಯಸ್ತ್ರೀಕರಣ ಅವಶ್ಯಕ: ನಿಶ್ಯಸ್ತ್ರೀಕರಣ ಮತ್ತು ಶಸ್ತ್ರಾಸ್ತ್ರ ನಿಯಂತ್ರಣವು ವಿಶ್ವದ ಶಾಂತಿ ಮತ್ತು ಭದ್ರತೆಗೆ ಪ್ರಮುಖವಾಗಿದೆ. ತಮ್ಮ ಜಾಗತಿಕ ಪ್ರಾಬಲ್ಯದ ಅನ್ವೇಷಣೆಯಲ್ಲಿ, ಶಕ್ತಿಶಾಲಿ ರಾಷ್ಟ್ರಗಳು ಜಾಗತಿಕ ಶಾಂತಿಗೆ ಧಕ್ಕೆ ತರುತ್ತಿವೆ. ಶಾಂತಿಯುತ ಪರಿಹಾರದ ಮೂಲಕ ಸಂಘರ್ಷಗಳನ್ನು ಪರಿಹರಿಸುವುದು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ವಿಶ್ವದ ಬಲಿಷ್ಠ ರಾಷ್ಟ್ರಗಳ ಜವಾಬ್ದಾರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.