ETV Bharat / bharat

EXCLUSIVE: ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ; ಈಟಿವಿ ಭಾರತದೊಂದಿಗಿನ ಸಂವಾದದ ವೇಳೆ ಶಾ ಅಚಲ ವಿಶ್ವಾಸ - Amit Shah To ETV Bharat

author img

By ETV Bharat Karnataka Team

Published : Apr 30, 2024, 6:49 AM IST

EXCLUSIVE | Amit Shah To ETV Bharat: 'BJP Winning Over 400 Seats
EXCLUSIVE: ಬಿಜೆಪಿ ಈ ಬಾರಿ 400 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ; ಈಟಿವಿ ಭಾರತದೊಂದಿಗಿನ ಸಂವಾದದ ವೇಳೆ ಶಾ ಅಚಲ ವಿಶ್ವಾಸ

ಸೋಲಿನ ಚಿಂತೆಯಲ್ಲಿರುವ ಪ್ರತಿಪಕ್ಷಗಳು ನಕಲಿ ಮತ್ತು ಮಾರ್ಪಿಂಗ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವ ಅಗ್ಗದ ತಂತ್ರಗಳನ್ನು ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಆರೋಪಿಸಿದ್ದಾರೆ. ಪ್ರತಿಪಕ್ಷಗಳು ಎಷ್ಟೇ ಅಗ್ಗದ ತಂತ್ರಗಳನ್ನು ಮಾಡಿದರೂ ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗುವಾಹಟಿಯಲ್ಲಿ ಸೋಮವಾರ ಈಟಿವಿ ಭಾರತ್‌ನ ಅನಾಮಿಕಾ ರತ್ನದೊಂದಿಗೆ ವಿಶೇಷ ಸಂವಾದದಲ್ಲಿ ಶಾ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಗುವಾಹಟಿ (ಅಸ್ಸಾಂ): ಬಿಜೆಪಿಯ ಜನಪ್ರಿಯತೆಯಿಂದ ಕಂಗೆಟ್ಟಿರುವ ಪ್ರತಿಪಕ್ಷಗಳು ನಕಲಿ ವಿಡಿಯೋಗಳನ್ನು ಆಶ್ರಯಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ. ಗುವಾಹಟಿಯಲ್ಲಿ ಈಟಿವಿ ಭಾರತ್‌ನ ಅನಾಮಿಕಾ ರತ್ನ ಅವರೊಂದಿಗೆ ನಡೆದ ವಿಶೇಷ ಸಂವಾದದಲ್ಲಿ ಶಾ ಈ ಆರೋಪ ಮಾಡಿದ್ದಾರೆ.

ಗೃಹಸಚಿವರು ತಮ್ಮ ರೋಡ್ ಶೋ ವೇಳೆ ಈ ಟಿವಿ ಭಾರತದ ಜೊತೆ ಮಾತನಾಡಿ, ಎಲ್ಲೆಡೆ ಬಿಜೆಪಿ ಅಲೆ ಇದೆ ಎಂದು ಹೇಳಿಕೊಂಡರು. "ಈಶಾನ್ಯದಿಂದ ದಕ್ಷಿಣದವರೆಗೆ, ಪ್ರತಿಪಕ್ಷಗಳು ಎಷ್ಟೇ ಗೊಂದಲಗಳನ್ನು ಸೃಷ್ಟಿ ಮಾಡಿದರೂ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಸ್ತುತ ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಹೀನಾಯ ಸೋಲು ಎದುರಾಗಲಿದೆ. ಅವರಿಗೆ ಗೊತ್ತಿದೆ ಮತ್ತು ಅದಕ್ಕಾಗಿಯೇ ಅವರು ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಈ ಮೂಲಕ ಅಗ್ಗದ ತಂತ್ರಗಳನ್ನು ಆಶ್ರಯಿಸಿದ್ದಾರೆ ಎಂದು ಶಾ ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣಾ ಪ್ರಕ್ರಿಯೆಗಳನ್ನು ಹಳಿತಪ್ಪಿಸಲು, ನಕಲಿ ಮತ್ತು ಮಾರ್ಫ್ ಮಾಡಿದ ವಿಡಿಯೋಗಳನ್ನು ಪ್ರತಿಪಕ್ಷಗಳ ನಾಯಕರು ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸೋಮವಾರ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೂಡಾ ನೀಡಿದ್ದು, ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಬಿಜೆಪಿಯ ಗುವಾಹಟಿ ಲೋಕಸಭಾ ಅಭ್ಯರ್ಥಿ ಪರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭರ್ಜರಿ ರೋಡ್ ಶೋ ನಡೆಸಿದರು. ತಿನ್ಸುಕಿಯಾ ಮತ್ತು ಸಿಲ್ಚಾರ್ ನಂತರ ಅಮಿತ್​ ಶಾ ನಡೆಸುತ್ತಿರುವ ಮೂರನೇ ರೋಡ್​​​​​ ಶೋ ಇದಾಗಿದೆ.

ರೋಡ್‌ಶೋ ಸಂದರ್ಭದಲ್ಲಿ ಬೃಹತ್ ಜನಸಮೂಹವನ್ನು ತೋರಿಸಿದ ಅಮಿತ್​ ಶಾ, ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕಾರಣ ಎಂದು ಬಣ್ಣಿಸಿದರು. ಈಶಾನ್ಯ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ, ಅದರ ಫಲವಾಗಿ ಇಂದು ಈ ಜನರು ಅಸ್ಸಾಂನ ಬೀದಿ ಬೀದಿಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕೆಲವು ರಾಜ್ಯಗಳಲ್ಲಿ ಕಡಿಮೆ ಮತದಾನ ಆಗಿದೆ ಎಂಬ ಬಗ್ಗೆ ಈ ಟಿವಿ ಭಾರತ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಮಿತ್​ ಶಾ, ವಿರೋಧ ಪಕ್ಷದ ಬೆಂಬಲಿಗರು ಈಗಾಗಲೇ ನಿರಾಶೆಗೊಂಡಿದ್ದಾರೆ ಮತ್ತು ಮತ ಚಲಾವಣೆಯಿಂದ ಅವರು ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರು ಮಾತ್ರ ಮತ ಚಲಾಯಿಸಲು ಮತಗಟ್ಟೆಗಳಿಗೆ ಬರುತ್ತಿದ್ದಾರೆ ಎಂದು ಹೇಳಿದರು.

ಉಳಿದ ಹಂತಗಳಲ್ಲಿಎಲ್ಲರೂ ಮತದಾನ ಮಾಡಿ- ಅಮಿತ್​ ಶಾ ಕರೆ : ಆದರೆ, ಇನ್ನುಳಿದ ಐದು ಹಂತಗಳಲ್ಲಿ ಎಲ್ಲರೂ ಮನೆಗಳಿಂದ ಹೊರಗೆ ಬಂದು ಮತದಾನ ಮಾಡುವಂತೆ ಶಾ ಇದೇ ವೇಳೆ ಮನವಿ ಮಾಡಿದರು. ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಸಂಜೆ ಗುವಾಹಟಿಗೆ ಆಗಮಿಸಿದ ಶಾ ಬಿಗಿ ಭದ್ರತೆಯ ನಡುವೆ 2.5 ಕಿಮೀ ಉದ್ದದ ರೋಡ್ ಶೋ ನಡೆಸಿದರು. ಈ ವೇಳೆ ಅವರು ಈಟಿವಿ ಭಾರತದ ಜತೆ ಮುಕ್ತವಾಗಿ ಮಾತನಾಡಿದರು. ಶಾ ಅವರೊಂದಿಗಿನ ವಿಶೇಷ ಚಾಟ್ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪಕ್ಷದ ಅಭ್ಯರ್ಥಿ ಬಿಜುಲಿ ಕಲಿತಾ ಮೇಧಿ ಅವರು ಕೂಡಾ ಇದ್ದರು.

1.5 ಲಕ್ಷಕ್ಕೂ ಹೆಚ್ಚು ಜನಸಮೂಹ ಅಮಿತ್​ ಶಾ ಮೇಲೆ ಹೂವಿನ ಸುರಿಮಳೆಯನ್ನೇ ಹರಿಸಿತು. ನೆರೆದಿದ್ದ ಜನರತ್ತ ಕೈ ಬೀಸಿದ ಅಮಿತ್​ ಶಾ ಅವರನ್ನು ಜನರು ಕೈಮುಗಿದು ಸ್ವಾಗತಿಸಿದರು. ರೋಡ್ ಶೋನಲ್ಲಿ ಬಿಹು, ಬೋಡೋ ಮತ್ತು ಇತರ ಬುಡಕಟ್ಟು ನೃತ್ಯಗಾರರು ಮತ್ತು ಡ್ರಮ್ಮರ್‌ಗಳು ಕೇಂದ್ರ ಗೃಹ ಸಚಿವರನ್ನು ಬರಮಾಡಿಕೊಂಡರು. ಪಕ್ಷದ ಬೆಂಬಲಿಗರು ಬಿಜೆಪಿ ಧ್ವಜ ಮತ್ತು ಕಮಲದ ಬೃಹತ್ ಕಟೌಟ್‌ಗಳನ್ನು ಹಿಡಿದುಕೊಂಡು 'ಮೋದಿ-ಶಾ ಜಿಂದಾಬಾದ್', 'ಬಿಜೆಪಿ ಜಿಂದಾಬಾದ್', 'ಭಾರತ್ ಮಾತಾ ಕಿ ಜೈ, 'ಜೈ ಶ್ರೀ ರಾಮ್' ಎಂಬ ಘೋಷಣೆಗಳನ್ನು ಕೂಗಿದರು.

ಇದನ್ನು ಓದಿ: ಹಾಸನ ಪ್ರಕರಣ: ಈಗಲೂ ಪ್ರಧಾನಿ ಮೌನವಹಿಸುತ್ತಾರೆಯೇ?, ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ - Priyanka Gandhi slams BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.