ETV Bharat / bharat

ಕೇಂದ್ರ ಬಜೆಟ್ 2024-25: ಹೈನು ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ ಘೋಷಣೆ

author img

By PTI

Published : Feb 1, 2024, 4:06 PM IST

budget-2023-new-scheme-to-increase-dairy-production
budget-2023-new-scheme-to-increase-dairy-production

ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆ ಹೆಚ್ಚಿಸಲು ಹೊಸ ಯೋಜನೆಗಳನ್ನು ಘೋಷಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ನವದೆಹಲಿ: ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆ ಹೆಚ್ಚಿಸುವ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದ್ದಾರೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಆದರೆ, ದೇಶದಲ್ಲಿ ಕಡಿಮೆ ಉತ್ಪಾದಕತೆ ಇದೆ ಎಂದು ಹಣಕಾಸು ಸಚಿವರು ಹೇಳಿದರು. ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಆತ್ಮನಿರ್ಭರಕ್ಕಾಗಿ ಕಾರ್ಯತಂತ್ರ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಸಚಿವರು ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್​ನಲ್ಲಿ ರಸಗೊಬ್ಬರ ಸಬ್ಸಿಡಿಯ ಅನುದಾನವನ್ನು 2024-25ನೇ ಸಾಲಿಗೆ ಶೇಕಡಾ 13 ರಷ್ಟು ಕಡಿಮೆ ಮಾಡಿ 1.64 ಲಕ್ಷ ಕೋಟಿ ರೂ.ಗೆ ಇಳಿಸಿದ್ದಾರೆ. 2024ರ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಗೆ 1.75 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.

ಪ್ರಧಾನಿ ಕಿಸಾನ್ ಸಂಪದ (ಕೃಷಿ - ಸಾಗರ ಸಂಸ್ಕರಣೆ ಮತ್ತು ಕೃಷಿ ಸಂಸ್ಕರಣಾ ಕ್ಲಸ್ಟರ್​ ಗಳ ಅಭಿವೃದ್ಧಿ ಯೋಜನೆ) ಯೋಜನೆಯು 38 ಲಕ್ಷ ರೈತರಿಗೆ ಪ್ರಯೋಜನ ನೀಡಿದೆ ಮತ್ತು 2.4 ಲಕ್ಷ ಸ್ವಸಹಾಯ ಗುಂಪುಗಳಿಗೆ (ಎಸ್ಎಚ್​ಜಿ) ಸಹಾಯ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಈ ಯೋಜನೆಯು ರೈತರಿಂದ ಚಿಲ್ಲರೆ ಮಳಿಗೆಗಳಿಗೆ ಕೃಷಿ ಸರಕುಗಳ ವರ್ಗಾವಣೆಯನ್ನು ಸುಲಭಗೊಳಿಸಲು ಆಧುನಿಕ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿ ನಿರ್ವಹಣೆ ನೆರವಿಗೆ ಬರಲಿದೆ ಎಂದಿದ್ದಾರೆ.

ಸಂಗ್ರಹಣೆ, ಸಂಸ್ಕರಣೆ ಸೇರಿದಂತೆ ಸುಗ್ಗಿಯ ನಂತರದ ಚಟುವಟಿಕೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಯನ್ನು ಸರ್ಕಾರ ಉತ್ತೇಜಿಸುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ಬೆಳೆಗಳ ಮೇಲೆ ನ್ಯಾನೊ ಡೈಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರಗಳ ಬಳಕೆಯನ್ನು ಎಲ್ಲಾ ಕೃಷಿ - ಹವಾಮಾನ ವಲಯಗಳಿಗೆ ವಿಸ್ತರಿಸಲಾಗುವುದು. ಅಧಿಕ ಇಳುವರಿ ನೀಡುವ ತಳಿಗಳ ಸಂಶೋಧನೆ, ಸಂಗ್ರಹಣೆ, ಮೌಲ್ಯವರ್ಧನೆ ಮತ್ತು ಬೆಳೆ ವಿಮೆಯನ್ನು ಒಳಗೊಂಡ ಎಣ್ಣೆಕಾಳುಗಳ ಮೇಲೆ ಕೇಂದ್ರೀಕರಿಸುವ ಕಾರ್ಯತಂತ್ರವನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದು ಅವರು ತಿಳಿಸಿದರು. ಇದಲ್ಲದೇ, ಹೈನುಗಾರರನ್ನು ಬೆಂಬಲಿಸಲು, ಜಾನುವಾರುಗಳ ಕಾಲು ಮತ್ತು ಬಾಯಿ ರೋಗ ನಿಯಂತ್ರಣಕ್ಕಾಗಿ ಸಮಗ್ರ ಕಾರ್ಯಕ್ರಮವನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ.

11.8 ಕೋಟಿ ರೈತರಿಗೆ ಸರ್ಕಾರದ ನೆರವು ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಕೋಟ್ಯಂತರ ರೈತರಿಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತಿದೆ. ದೇಶಾದ್ಯಂತ ಅನ್ನದಾತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ಲದೆ, ಪಿಎಂ ಫಸಲ್ ಯೋಜನೆಯ ಲಾಭವನ್ನು ನಾಲ್ಕು ಕೋಟಿ ರೈತರಿಗೆ ನೀಡಲಾಗುತ್ತಿದೆ ಎಂದು ಸಚಿವೆ ನುಡಿದರು.

ಇದನ್ನೂ ಓದಿ : ನೇರ, ಪರೋಕ್ಷ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಕೇಂದ್ರ ಬಜೆಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.