ETV Bharat / state

ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಲಿ: ಆರ್‌.ಅಶೋಕ್ ಆಗ್ರಹ - phone tapping allegations

author img

By ETV Bharat Karnataka Team

Published : May 21, 2024, 9:20 PM IST

ವಿರೋಧ ಪಕ್ಷಗಳ ನಾಯಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.

ಆರ್‌.ಅಶೋಕ್
ಆರ್‌.ಅಶೋಕ್ (ETV Bharat)

ಬೆಂಗಳೂರು: ಫೋನ್‌ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್‌ ಟ್ಯಾಪಿಂಗ್‌ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್‌ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು. ಫೋನ್‌ ಟ್ಯಾಪ್‌ ಮಾಡುವುದು ಅಕ್ರಮವಾಗಿದ್ದು, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ, ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿರೋಧ ಪಕ್ಷಗಳ ನಾಯಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.

ಫೋನ್‌ ಟ್ಯಾಪ್‌ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್‌ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಭಯೋತ್ಪಾದಕರೇ : ಡಿಸಿಎಂ ಡಿ ಕೆ ಶಿವಕುಮಾರ್ - DCM DK Shivakumar

ನಮ್ಮ ಫೋನ್​ಗಳನ್ನು ಟಾಪ್ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಈ ಆರೋಪವನ್ನು ಗೃಹ ಸಚಿವ ಜಿ.ಪರಮೇಶ್ವರ ಅವರು ತಳ್ಳಿಹಾಕಿದ್ದಾರೆ. 'ಸರ್ಕಾರ ಯಾರ ಫೋನ್ ಟ್ಯಾಪ್ ಮಾಡಿಲ್ಲ ಅಂತ ನಿನ್ನೆಯೇ ಹೇಳಿದ್ದೇನೆ. ಟ್ಯಾಪಿಂಗ್ ಬಗ್ಗೆ ಹೆಚ್​​ಡಿಕೆ ಬಳಿ ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ' ಎಂದು ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಫೋನ್ ಟ್ಯಾಪ್ ಬಗ್ಗೆ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದ ಬಳಿ ಸೋಮವಾರ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದಕರ ಫೋನ್​​ ಅನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು. ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಲು ಎಸ್ಐಟಿ ಪತ್ರ ಬರೆದಿದೆ: ಸಚಿವ ಪರಮೇಶ್ವರ - Prajwal Revanna Passport

ETV Bharat Logo

Copyright © 2024 Ushodaya Enterprises Pvt. Ltd., All Rights Reserved.