ETV Bharat / bharat

ದೆಹಲಿ ಮದ್ಯ ನೀತಿ ಹಗರಣ: ಕವಿತಾ ನ್ಯಾಯಾಂಗ ಬಂಧನ 9 ದಿನ ವಿಸ್ತರಣೆ, ಸಿಬಿಐ ವಿಚಾರಣೆ ಚುರುಕು - kavitha judicial custody extend

author img

By ANI

Published : Apr 15, 2024, 1:28 PM IST

ಕವಿತಾ ನ್ಯಾಯಾಂಗ ಬಂಧನ 9 ದಿನ ವಿಸ್ತರಣೆ
ಕವಿತಾ ನ್ಯಾಯಾಂಗ ಬಂಧನ 9 ದಿನ ವಿಸ್ತರಣೆ

ದೆಹಲಿ ಮದ್ಯ ನೀತಿ ಹಗರಣದ ಆರೋಪಿಯಾಗಿರುವ ಬಿಆರ್​ಎಸ್​ ಎಂಎಲ್​ಸಿ ಕವಿತಾ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಎಂಎಲ್​ಸಿ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್​ 23ರ ವರೆಗೆ ವಿಸ್ತರಿಸಲಾಗಿದೆ.

ಜಾರಿ ನಿರ್ದೇಶನಾಲಯದ (ಇಡಿ) ಬಂಧನದಲ್ಲಿದ್ದ ಕವಿತಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಶಕ್ಕೆ ಪಡೆದಿದ್ದು, ಭ್ರಷ್ಟಾಚಾರದ ಬಗ್ಗೆ ವಿಚಾರಣೆ ನಡೆಸುತ್ತಿದೆ. ಸೋಮವಾರ ನ್ಯಾಯಾಂಗ ಬಂಧನದ ಅವಧಿ ಮುಗಿದ ಕಾರಣ, ಅವರನ್ನು ಇಲ್ಲಿನ ರೋಸ್​ ಅವೆನ್ಯೂ ಕೋರ್ಟ್​ಗೆ ಹಾಜರುಪಡಿಸಲಾಯಿತು. ಪ್ರಕರಣದಲ್ಲಿ ವಿಚಾರಣೆಯ ಅಗತ್ಯವಿದೆ. ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂದು ಸಿಬಿಐ ಮನವಿ ಮಾಡಿತು. ಇದನ್ನು ಪುರಸ್ಕರಿಸಿದ ಕೋರ್ಟ್​ 9 ದಿನ (ಏಪ್ರಿಲ್​ 23) ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿತು.

ಕವಿತಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿತ್ತು. ಆದರೆ, ರೋಸ್ ಅವೆನ್ಯೂ ಸಿಬಿಐ ವಿಶೇಷ ನ್ಯಾಯಾಲಯವು 9 ದಿನಗಳ ನ್ಯಾಯಾಂಗ ಬಂಧನಕ್ಕೆ ಅನುಮತಿ ನೀಡಿದೆ. ಈ ತಿಂಗಳ 23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಕವಿತಾ ಅವರನ್ನು ಮತ್ತೆ ತಿಹಾರ್​ ಜೈಲಿಗೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.

ಇದು ಸಿಬಿಐ ಅಲ್ಲ, ಬಿಜೆಪಿ ಕಸ್ಟಡಿ: ಕೋರ್ಟ್‌ಗೆ ಹೋಗುವ ಮುನ್ನ ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್​ರಾವ್​ ಅವರ ಪುತ್ರಿ ಕವಿತಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. "ಇದು ಸಿಬಿಐ ಕಸ್ಟಡಿ ಅಲ್ಲ, ಬಿಜೆಪಿ ಕಸ್ಟಡಿಯಾಗಿದೆ. ಹೊರಗೆ ಕಮಲ ಪಕ್ಷದ ನಾಯಕರು ಏನು ಮಾತನಾಡುತ್ತಾರೋ, ಅದನ್ನು ಅಧಿಕಾರಿಗಳು ನನಗೆ ವಿಚಾರಣೆ ನೆಪದಲ್ಲಿ ಪ್ರಶ್ನಿಸುತ್ತಿದ್ದಾರೆ. ಇದು ಕಳೆದ 2 ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಕವಿತಾ ವಿರುದ್ಧ ಸಿಬಿಐ ತನಿಖೆ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಕವಿತಾ ಅವರ ಪಾತ್ರವಿದೆ ಎಂದು ಆರೋಪಿಸಿರುವ ಸಿಬಿಐ ವಿಚಾರಣೆಗಾಗಿ ಕಸ್ಟಡಿಗೆ ನೀಡಲು ಕೋರ್ಟ್​ ಅನುಮತಿ ಪಡೆದಿತ್ತು. ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ಕೋರ್ಟ್​,ಇದೀಗ ಮತ್ತೆ ಅವಧಿ ವಿಸ್ತರಣೆ ಪಡೆದಿದೆ. ದೆಹಲಿಯ ಮದ್ಯ ನೀತಿ ರಚನೆಯಲ್ಲಿ ಕವಿತಾ ಮಾಸ್ಟರ್‌ಮೈಂಡ್ ಮತ್ತು ಪ್ರಮುಖ ಪಾತ್ರಧಾರಿ. ಇದಕ್ಕೆ ಇತರ ಆರೋಪಿಗಳು ನೀಡಿದ ಹೇಳಿಕೆಗಳು ಸಾಕ್ಷಿಯಾಗಿವೆ ಎಂದು ಸಿಬಿಐ ಹೇಳಿದೆ.

ಇದನ್ನೂ ಓದಿ: ಆಪ್​ಗೆ ₹25 ಕೋಟಿ ನೀಡುವಂತೆ ಉದ್ಯಮಿ ರೆಡ್ಡಿಗೆ ಬೆದರಿಕೆ ಹಾಕಿದ್ದ ಕವಿತಾ: ಕೋರ್ಟ್​ಗೆ ಸಿಬಿಐ ಮಾಹಿತಿ - EXCISE scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.