ETV Bharat / bharat

ಭಾಷಣ ಅಥವಾ ಮತ ಹಾಕಲು ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ವಿನಾಯಿತಿ ಇಲ್ಲ: ಸುಪ್ರೀಂ ಕೋರ್ಟ್

author img

By ETV Bharat Karnataka Team

Published : Mar 4, 2024, 1:03 PM IST

ಭಾಷಣ ಅಥವಾ ಮತಕ್ಕಾಗಿ ಲಂಚ ಪಡೆಯುವ ಜನಪ್ರತಿನಿಧಿಗಳು ಕಾನೂನಾತ್ಮಕವಾಗಿ ಶಿಕ್ಷಾರ್ಹರು. ಅವರಿಗೆ ಸಂಸದೀಯ ಸವಲತ್ತುಗಳು ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಮಹತ್ವದ ಆದೇಶ ನೀಡಿದೆ.

ಸುಪ್ರೀಂಕೋರ್ಟ್
supreme court

ನವದೆಹಲಿ: ಸಂಸತ್ತು ಅಥವಾ ವಿಧಾನಸಭೆಯಲ್ಲಿ ಮತ ಹಾಕಲು ಅಥವಾ ಭಾಷಣ ಮಾಡಲು ಲಂಚ ಪಡೆಯುವ ಶಾಸಕ ಅಥವಾ ಸಂಸದರಿಗೆ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಸೋಮವಾರ ಮಹತ್ವದ ತೀರ್ಪು ನೀಡಿತು. ಇದರ ಜೊತೆಗೆ 1998ರ ಪಿ.ವಿ.ನರಸಿಂಹರಾವ್​ ಪ್ರಕರಣದ ಆದೇಶವನ್ನು ರದ್ದು ಮಾಡಿದೆ.

ಸಂಸದರು ಅಥವಾ ಶಾಸಕರು ಭಾಷಣ ಮತ್ತು ಮತ ಹಾಕಲು ಲಂಚ ಪಡೆಯುವುದಕ್ಕೆ ಜನಪ್ರತಿನಿಧಿಗಳ ವಿಶೇಷ ಹಕ್ಕು ಅನ್ವಯಿಸುದಿಲ್ಲ. 1998ರ ಪಿ.ವಿ.ನರಸಿಂಹರಾವ್ ಪ್ರಕರಣ ತೀರ್ಪು ಸಂವಿಧಾನದ 105 ಅಥವಾ 194ನೇ ವಿಧಿಯ ವಿರುದ್ಧವಾಗಿದೆ. ಹೀಗಾಗಿ ಅಂದಿನ ತೀರ್ಪನ್ನು ಸರ್ವಾನುಮತದಿಂದ ರದ್ದು ಮಾಡಲಾಗುತ್ತಿದೆ ಎಂದು ಕೋರ್ಟ್​ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಏಳು ಸದಸ್ಯರ ಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಭ್ರಷ್ಟಾಚಾರ ಮತ್ತು ಶಾಸಕರ ಲಂಚ ಪಡೆಯುವುದು ದೇಶದ ಸಂಸದೀಯ ಪ್ರಜಾಪ್ರಭುತ್ವವನ್ನೇ ನಾಶಪಡಿಸುತ್ತದೆ. ಇದು ಸಂವಿಧಾನ ವಿರೋಧಿ ನಡೆ. ಲಂಚ ಪಡೆಯುವ ಮೂಲಕ ಸದಸ್ಯರು ಕ್ರಿಮಿನಲ್ ಅಪರಾಧದಲ್ಲಿ ತೊಡಗುತ್ತಾರೆ. ಮತ ಚಲಾಯಿಸಲು ಅಥವಾ ಶಾಸಕಾಂಗದಲ್ಲಿ ಭಾಷಣ ಮಾಡಲು ಹಣ ಪಡೆಯುವುದು ಅಪರಾಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಪ್ರಜಾಪ್ರಭುತ್ವಕ್ಕೆ ಮಾರಕ: ಲಂಚಕ್ಕೆ ಸಂಸದೀಯ ಸವಲತ್ತುಗಳಿಂದ ರಕ್ಷಣೆ ಇರಬಾರದು. ಅದು ರಾಷ್ಟ್ರದ ಸ್ವಾಸ್ಥ್ಯಕ್ಕೆ ಮಾರಕ. ಪ್ರಜಾಪ್ರಭುತ್ವದ ತಳಹದಿಯನ್ನೇ ಬುಡಮೇಲು ಮಾಡುತ್ತದೆ. ಅಂದಿನ ತೀರ್ಪಿನಲ್ಲಿ ಭಾಷಣ ಮತ್ತು ಮತ ಹಾಕಲು ಜನಪ್ರತಿನಿಧಿಗಳಿಗೆ ವಿನಾಯಿತಿ ನೀಡಿದ ಆದೇಶ ಕಾನೂನುಬಾಹಿರವಾಗಿದೆ. ಅದನ್ನು ರದ್ದು ಮಾಡಲಾಗಿದೆ ಎಂದು ಕೋರ್ಟ್​ ತೀರ್ಪಿತ್ತಿದೆ.

ತೀರ್ಪಿನ ನಂತರ ಮಾತನಾಡಿದ ವಕೀಲ ಅಶ್ವಿನಿ ಉಪಾಧ್ಯಾಯ, "ಯಾವುದೇ ಶಾಸಕರು ಪ್ರಶ್ನೆ ಕೇಳಲು ಅಥವಾ ಶಾಸಕಾಂಗದಲ್ಲಿ ಮತ ಚಲಾಯಿಸಲು ಲಂಚ ಪಡೆದರೆ ಇನ್ನು ಮುಂದೆ ಕಾನೂನು ಕ್ರಮಕ್ಕೆ ಗುರಿಯಾಗಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಆರೋಪ ಕೇಳಿಬಂದ ಶಾಸಕರಿಗೆ ಯಾವುದೇ ಸಂಸದೀಯ ಸವಲತ್ತುಗಳು ಅನ್ವಯಸುವುದಿಲ್ಲ. ಹಣ ಪಡೆದಲ್ಲಿ ಅದು ಭ್ರಷ್ಟಾಚಾರದ ಆರೋಪವಾಗಲಿದೆ. ಲಂಚ ಪಡೆದು ಮತ ಹಾಕುವುದು ಅಥವಾ ಪ್ರಶ್ನೆಗಳನ್ನು ಕೇಳುವುದು ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ನಾಶಪಡಿಸಿದಂತಾಗುತ್ತದೆ" ಎಂದು ಹೇಳಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದ್ರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ದಿವಾಲಾ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಅವರಿದ್ದ 7 ಸದಸ್ಯರ ಪೀಠವು ಕಳೆದ ಅಕ್ಟೋಬರ್​ನಲ್ಲಿ ತೀರ್ಪು ಕಾಯ್ದಿರಿಸಿತ್ತು.

ತೀರ್ಪು ಸ್ವಾಗತಿಸಿದ ಪ್ರಧಾನಿ ಮೋದಿ: ಮಹತ್ವದ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. "ಕೋರ್ಟ್‌ನ ಈ ಉತ್ತಮ ತೀರ್ಪು ರಾಜಕೀಯ ಶುದ್ಧಿಗೆ ಕಾರಣವಾಗುತ್ತದೆ ಮತ್ತು ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ತರುತ್ತದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ​ ಎನ್​ಐಎಗೆ ಹಸ್ತಾಂತರ; FIR ದಾಖಲು, ತನಿಖೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.