ETV Bharat / bharat

ಡೆಲಿವರಿ ಬಾಯ್​, ಪೋಸ್ಟ್​ಮನ್​ಗಳಂತೆ ದೆಹಲಿ ಪೊಲೀಸರ ಬಳಕೆ: ಕೇಂದ್ರದ ವಿರುದ್ಧ ಆಪ್​ ಆರೋಪ

author img

By ETV Bharat Karnataka Team

Published : Feb 4, 2024, 8:08 PM IST

ಡೆಲಿವರಿ ಬಾಯ್
ಡೆಲಿವರಿ ಬಾಯ್

ಸಿಎಂ ಅರವಿಂದ್​ ಕೇಜ್ರಿವಾಲ್​, ಸಚಿವೆಗೆ ನೋಟಿಸ್​ ನೀಡಿದ ದೆಹಲಿ ಪೊಲೀಸರನ್ನು ಡೆಲಿವರಿ ಬಾಯ್​ಗಳಿಗೆ ಹೋಲಿಸಿ ಆಪ್​ ವ್ಯಂಗ್ಯವಾಡಿದೆ.

ನವದೆಹಲಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಸಚಿವೆ ಅತಿಶಿ ಅವರಿಗೆ ನೋಟಿಸ್​ ನೀಡಿದ ಪೊಲೀಸ್​ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಡೆಲಿವರಿ ಬಾಯ್​, ಪೋಸ್ಟ್​ಮನ್​ಗಳ ರೀತಿ ಬಳಸಿಕೊಳ್ಳುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪಿಸಿದೆ.

ಆಪರೇಷನ್​ ಕಮಲ 2.0 ಆರೋಪ ಮಾಡಿದ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ಹಣಕಾಸು ಸಚಿವೆ ಅತಿಶಿ ಅವರಿಗೆ ದೆಹಲಿ ಪೊಲೀಸರು ಮಾಹಿತಿ ನೀಡುವಂತೆ ನೋಟಿಸ್​ ಕೊಟ್ಟಿದ್ದಾರೆ. ಇದನ್ನು ಟೀಕಿಸಿರುವ ಆಪ್​, ದೆಹಲಿ ಪೊಲೀಸರ ಬಗ್ಗೆ ಅನುಕಂಪವಿದೆ. ಭದ್ರತೆಯ ಕೆಲಸ ಮಾಡಬೇಕಿದ್ದ ಪೊಲೀಸರು, ಡೆಲಿವರಿ ಬಾಯ್​ಗಳಂತೆ ಮನೆಗೆ ಬಂದು ನೋಟಿಸ್​ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದೆ.

ಪೊಲೀಸರಿಂದ ಪೋಸ್ಟ್​ಮನ್​ ಕೆಲಸ: ದೆಹಲಿ ಪೊಲೀಸ್ ಅಧಿಕಾರಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಎಎಪಿ ನಾಯಕ ಜಾಸ್ಮಿನ್ ಶಾ, ದೆಹಲಿ ಪೊಲೀಸ್ ಅಪರಾಧ ವಿಭಾಗದ ತಂಡವು ಶನಿವಾರ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಬಂದಿತ್ತು. ಅವರು ತಂದಿದ್ದ ನೋಟಿಸ್​ನಲ್ಲಿ ಎಫ್ಐಆರ್ ಬಗ್ಗೆ ಮಾಹಿತಿ ಇರಲಿಲ್ಲ. ಇದು ಸಮನ್ಸೇ ಅಥವಾ ಪ್ರಾಥಮಿಕ ವಿಚಾರಣೆಗೆ ನೀಡಿದ ಎಚ್ಚರಿಕೆ ಪತ್ರವೇ? ಎಂಬುದನ್ನು ತಿಳಿಸಿಲ್ಲ. ಐಪಿಸಿಯ ಯಾವುದೇ ಸೆಕ್ಷನ್ ಅದನ್ನು ಅದರಲ್ಲಿ ಉಲ್ಲೇಖಿಸಿಲ್ಲ. ಯಾವುದೇ ಕಾನೂನು ಆಧಾರವಿಲ್ಲದೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಸಿಎಂಗೆ ನೋಟಿಸ್ ನೀಡಿದ್ದಾರೆ. 5 ಗಂಟೆ ಕಾಲ ಸಿಎಂ ನಿವಾಸದ ಮುಂದೆ ಕಾದಿದ್ದಾರೆ. ಇದು ಒಂದು ರೀತಿ ಡೆಲಿವರಿ ಬಾಯ್‌ಗಳು, ಪೋಸ್ಟ್‌ಮನ್​ಗಳ ಕೆಲಸದಂತಿದೆ ಎಂದು ಛೇಡಿಸಿದೆ.

ತಮ್ಮ ರಾಜಕೀಯ ಸೇವೆಗೆ ದೆಹಲಿ ಪೊಲೀಸರನ್ನು ಕೇಂದ್ರ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಅಪರಾಧಗಳನ್ನು ನಿಗ್ರಹಿಸುವ ಬದಲು ರಾಜಕೀಯ ಇಚ್ಛೆಗೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ ಎಂದು ಆಪ್​ ಆರೋಪಿಸಿದೆ.

ಏನಿದು ಆರೋಪ, ನೋಟಿಸ್​: ಆಪ್​ ಶಾಸಕರನ್ನು ಬಿಜೆಪಿ ಖರೀದಿಸಲು ಪ್ರಯತ್ನಿಸುತ್ತಿದೆ. ಆಪರೇಷನ್​ ಕಮಲ 2.0 ಆರಂಭಿಸಿದೆ. ಶಾಸಕರಿಗೆ ತಲಾ 25 ಕೋಟಿ ರೂಪಾಯಿ ಆಫರ್​ ನೀಡಲಾಗಿದೆ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ಸಚಿವೆ ಅತಿಶಿ ಆರೋಪಿಸಿದ್ದರು. ಇದನ್ನು ನಿರಾಕರಿಸಿರುವ ಬಿಜೆಪಿ ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ನೀಡಬೇಕು ಎಂದು ಆಗ್ರಹಿಸಿದೆ.

ಗಂಭೀರ ಆರೋಪ ಮಾಡಿರುವ ಸಿಎಂ ಮತ್ತು ಸಚಿವೆಗೆ ದೆಹಲಿ ಪೊಲೀಸರು ನಿರ್ದಿಷ್ಟ ಅವಧಿಯಲ್ಲಿ ಮಾಹಿತಿ ನೀಡುವಂತೆ ಸೂಚಿಸಿ ನೋಟಿಸ್​ ನೀಡಿದ್ದಾರೆ. ಇದಕ್ಕೆ ಎಎಪಿ ಕಿಡಿಕಾರಿದೆ. ನೋಟಿಸ್​ ನೀಡಲು ಬಂದ ದೆಹಲಿ ಪೊಲೀಸರನ್ನು ಸಿಎಂ ಅರವಿಂದ್​ ಕೇಜ್ರಿವಾಲ್​ ತಮ್ಮ ನಿವಾಸದ ಮುಂದೆ 5 ಗಂಟೆ ಕಾಯಿಸಿದ್ದರು.

ಇದನ್ನೂ ಓದಿ: 'ನಾನು ಬಿಜೆಪಿ ಸೇರಬೇಕೆಂದು ಒತ್ತಡ ಹಾಕಲಾಗುತ್ತಿದೆ'- ದೆಹಲಿ ಸಿಎಂ ಕೇಜ್ರಿವಾಲ್​; ಸಚಿವೆ ಅತಿಶಿಗೆ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.