ETV Bharat / bharat

ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಶಾಕ್!

author img

By ETV Bharat Karnataka Team

Published : Mar 3, 2024, 2:04 PM IST

ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದ 195 ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ.

BJP List of Candidates for LS Polls
BJP List of Candidates for LS Polls

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಶನಿವಾರ ಬಿಡುಗಡೆ ಮಾಡಿರುವ 195 ಅಭ್ಯರ್ಥಿಗಳ ಮೊದಲ ಪಟ್ಟಿಯು ಹಲವಾರು ಅಚ್ಚರಿಗಳನ್ನು ಒಳಗೊಂಡಿದ್ದು, ಪಕ್ಷದ ಅನೇಕ ಘಟಾನುಘಟಿಗಳು ಟಿಕೆಟ್ ವಂಚಿತರಾಗಿದ್ದಾರೆ. ಹಳೆಯ ಮುಖಗಳಿಗಿಂತ ಹೊಸ ಮುಖಗಳಿಗೆ ಬಿಜೆಪಿ ಈ ಬಾರಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್ ಸಿಕ್ಕಿಲ್ಲ. ಈ ಬಾರಿ 400ರ ಗಡಿ ದಾಟುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಟಿಕೆಟ್ ಹಂಚಿಕೆಯ ಸಮಯದಲ್ಲಿ ಇದನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಿದಂತಿದೆ.

ಪ್ರಥಮ ಪಟ್ಟಿಯಲ್ಲಿ ಅಸ್ಸಾಂನ 11 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ, ಉಳಿದ ಐವರು ಹೊಸ ಮುಖಗಳು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ ದೀಪ್ ರಾಯ್ ಗೆದ್ದ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಪರಿಮಲ್ ಸುಕ್ಲಾಬೈದ್ಯ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಪ್ರಸ್ತುತ ಬಿಜೆಪಿ ಸಂಸದ ಹೊರೆನ್ ಸಿಂಗ್ ಬೇ ಪ್ರತಿನಿಧಿಸುತ್ತಿರುವ ಸ್ವಾಯತ್ತ ಜಿಲ್ಲೆ (ಎಸ್​ಟಿ) ಸ್ಥಾನದಿಂದ ಪಕ್ಷದ ಅಭ್ಯರ್ಥಿ ಅಮರ್ ಸಿಂಗ್ ಟಿಸ್ಸೊ ಸ್ಪರ್ಧಿಸಲಿದ್ದಾರೆ.

ಕ್ವೀನ್ ಓಜಾ ಪ್ರತಿನಿಧಿಸುವ ಗುವಾಹಟಿ ಲೋಕಸಭಾ ಕ್ಷೇತ್ರದಿಂದ ಬಿಜುಲಿ ಕಲಿತಾ ಮೇಧಿ ಸ್ಪರ್ಧಿಸಲಿದ್ದಾರೆ. ಇನ್ನು 2019 ರಲ್ಲಿ ಪಲ್ಲಬ್ ಲೋಚನ್ ದಾಸ್ ಗೆದ್ದ ತೇಜ್ ಪುರ್ ಲೋಕಸಭಾ ಕ್ಷೇತ್ರದಿಂದ ರಂಜಿತ್ ದತ್ತಾ ಸ್ಪರ್ಧಿಸಲಿದ್ದಾರೆ. ದಿಬ್ರುಘರ್ ಕ್ಷೇತ್ರದಿಂದ ಹಾಲಿ ಸಂಸದ ರಾಮೇಶ್ವರ್ ತೆಲಿ ಅವರನ್ನು ಕೈಬಿಟ್ಟು ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಛತ್ತೀಸ್ ಗಢ ರಾಜ್ಯದ ಬಗ್ಗೆ ನೋಡುವುದಾದರೆ- 11 ಸ್ಥಾನಗಳ ಪೈಕಿ ಬಿಜೆಪಿ ನಾಲ್ವರು ಹೊಸಬರಿಗೆ ಅವಕಾಶ ನೀಡಿದೆ. ಜಂಜ್​ಗಿರ್ ಚಂಪಾ (ಎಸ್​ಸಿ) ಕ್ಷೇತ್ರದಿಂದ ಹಾಲಿ ಸಂಸದ ಗುಹರಾಮ್ ಅಜಗಲ್ಲಿ ಬದಲಿಗೆ ಕಮಲೇಶ್ ಜಂಗ್ಡೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ರಾಯ್​ಪುರದಿಂದ ಹಿರಿಯ ಬಿಜೆಪಿ ನಾಯಕ ಬ್ರಿಜ್ ಮೋಹನ್ ಅಗರ್ವಾಲ್ ಕಣಕ್ಕಿಳಿಯಲಿದ್ದಾರೆ. 2019 ರಲ್ಲಿ ಈ ಸ್ಥಾನವನ್ನು ಗೆದ್ದ ಸುನಿಲ್ ಕುಮಾರ್ ಸೋನಿಗೆ ಟಿಕೆಟ್ ಕೈತಪ್ಪಿದೆ.

ರಾಜ್ಯದ ಮಹಾಸಮುಂದ್ ಕ್ಷೇತ್ರದಿಂದ ಹಾಲಿ ಸಂಸದ ಚುನ್ನಿ ಲಾಲ್ ಸಾಹು ಬದಲಿಗೆ ರೂಪ್ ಕುಮಾರಿ ಚೌಧರಿ ಸ್ಪರ್ಧಿಸಲಿದ್ದಾರೆ. ಕಂಕೇರ್ (ಎಸ್​ಟಿ) ಕ್ಷೇತ್ರದಲ್ಲಿ ಹಾಲಿ ಸಂಸದ ಮೋಹನ್ ಮಾಂಡವಿ ಬದಲಿಗೆ ಬಿಜೆಪಿ ಭೋಜರಾಜ್ ನಾಗ್ ಅವರನ್ನು ಕಣಕ್ಕಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಬಗ್ಗೆ ನೋಡುವುದಾದರೆ- ದೆಹಲಿಯ ಐದು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ನಾಲ್ವರು ಹೊಸಬರಾಗಿರುವುದು ವಿಶೇಷ. ಎರಡು ಬಾರಿ ಸಂಸದರಾಗಿದ್ದ ಮಾಜಿ ಕೇಂದ್ರ ಸಚಿವ ಹರ್ಷವರ್ಧನ್ ಅವರನ್ನು ಕೈಬಿಟ್ಟು ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಪ್ರವೀಣ್ ಖಂಡೇಲ್ವಾಲ್ ಅವರನ್ನು ಪಕ್ಷವು ತನ್ನ ಅಭ್ಯರ್ಥಿಯಾಗಿ ಹೆಸರಿಸಿದೆ.

ಪಶ್ಚಿಮ ದೆಹಲಿ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿದ್ದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಬದಲಿಗೆ ಕಮಲ್ ಜೀತ್ ಸೆಹ್ರಾವತ್ ಅವರನ್ನು ಕಣಕ್ಕಿಳಿಸಲಾಗಿದೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಪ್ರತಿನಿಧಿಸುವ ನವದೆಹಲಿ ಲೋಕಸಭಾ ಕ್ಷೇತ್ರದಿಂದ ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಕ್ಕಿದೆ. ದಕ್ಷಿಣ ದೆಹಲಿಯಿಂದ ರಮೇಶ್ ಬಿಧುರಿ ಅವರನ್ನು ಕೈಬಿಟ್ಟು ಬಿಜೆಪಿ ತನ್ನ ಅಭ್ಯರ್ಥಿಯಾಗಿ ರಾಮ್ವೀರ್ ಸಿಂಗ್ ಬಿಧುರಿ ಅವರನ್ನು ಘೋಷಿಸಿದೆ.

ಗುಜರಾತ್ ಟಿಕೆಟ್​ ಹಂಚಿಕೆಯನ್ನು ನೋಡುವುದಾದರೆ- ರಾಜ್ಯದ 15 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಐವರು ಹಾಲಿ ಸಂಸದರನ್ನು ಕೈಬಿಟ್ಟಿದೆ. ಬನಸ್​ಕಾಂತ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಭಾತ್ ಭಾಯ್ ಸಾವಭಾಯ್ ಪಟೇಲ್ ಬದಲಿಗೆ ಪಕ್ಷದ ಅಭ್ಯರ್ಥಿಯಾಗಿ ರೇಖಾಬೆನ್ ಹಿತೇಶ್ ಭಾಯ್ ಚೌಧರಿ ಸ್ಪರ್ಧಿಸಲಿದ್ದಾರೆ. ಅಹಮದಾಬಾದ್ ಪಶ್ಚಿಮ (ಎಸ್​ಸಿ) ಕ್ಷೇತ್ರದಲ್ಲಿ ದಿನೇಶ್ ಭಾಯ್ ಕಿದರ್ ಭಾಯ್ ಮಕ್ವಾನಾ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದ ಕಿರಿತ್ ಸೋಲಂಕಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.

ರಾಜ್ ಕೋಟ್ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದ್ದು, ಹಾಲಿ ಸಂಸದ ಮೋಹನ್ ಭಾಯ್ ಕಲ್ಯಾಣ್ ಜಿ ಕುಂದರಿಯಾ ಅವರನ್ನು ಕೈಬಿಟ್ಟಿದೆ. ಪ್ರಸ್ತುತ ಪಕ್ಷದ ಸಂಸದ ರಮೇಶ್ ಭಾಯ್ ಲವ್ ಜಿ ಭಾಯ್ ಧಡುಕ್ ಪ್ರತಿನಿಧಿಸುತ್ತಿರುವ ಪೋರ್ ಬಂದರ್ ಕ್ಷೇತ್ರದ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಪಕ್ಷ ಹೆಸರಿಸಿದೆ. ಗುಜರಾತ್ ನ ಪಂಚಮಹಲ್ ಕ್ಷೇತ್ರದಿಂದ ಹಾಲಿ ಸಂಸದ ರತನ್ ಸಿನ್ಹ ಮಗನ್ ಸಿನ್ಹ ರಾಥೋಡ್ ಬದಲಿಗೆ ರಾಜ್ ಪಾಲ್ ಸಿನ್ಹ ಮಹೇಂದ್ರಸಿನ್ಹ ಜಾಧವ್ ಕಣಕ್ಕಿಳಿಯಲಿದ್ದಾರೆ.

ಜಾರ್ಖಂಡ್​ ನಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ನೋಡುವುದಾದರೆ- ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ ಪ್ರಸ್ತುತ ಸಂಸದರಾಗಿರುವ ಹಜಾರಿಬಾಗ್ ಕ್ಷೇತ್ರದಿಂದ ಬಿಜೆಪಿ ಮನೀಶ್ ಜೈಸ್ವಾಲ್ ಅವರನ್ನು ಕಣಕ್ಕಿಳಿಸಿದೆ. ಲೋಹರ್ ದಗಾ (ಎಸ್​ಟಿ) ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿರುವ ಸುದರ್ಶನ್ ಭಗತ್ ಅವರ ಬದಲಿಗೆ ಸಮೀರ್ ಒರಾನ್ ಅವರನ್ನು ಕಣಕ್ಕಿಳಿಸಲಾಗಿದೆ.

ಮಧ್ಯಪ್ರದೇಶದ ಬಗ್ಗೆ ನೋಡುವುದಾರೆ- ರಾಜ್ಯದಲ್ಲಿ ಬಿಜೆಪಿ ಈ ಬಾರಿ ಏಳು ಹಾಲಿ ಸಂಸದರನ್ನು ಬದಲಿಸಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಗ್ವಾಲಿಯರ್ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ವಿವೇಕ್ ನಾರಾಯಣ್ ಶೆಜ್ವಾಲ್ಕರ್ ಬದಲಿಗೆ ಭರತ್ ಸಿಂಗ್ ಕುಶ್ವಾಹ ಅವರನ್ನು ಪಕ್ಷ ಹೆಸರಿಸಿದೆ. ಗುನಾ ಕ್ಷೇತ್ರದ ಹಾಲಿ ಸಂಸದ ಕೃಷ್ಣಪಾಲ್ ಸಿಂಗ್ ಯಾದವ್ ಅವರನ್ನು ಕೈಬಿಟ್ಟು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಣಕ್ಕಿಳಿಸಿದೆ.

ಪ್ರಸ್ತುತ ರಾಜ್ ಬಹದ್ದೂರ್ ಸಿಂಗ್ ಸಂಸದರಾಗಿರುವ ಸಾಗರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲತಾ ವಾಂಖೆಡೆ ಕಣಕ್ಕಿಳಿಯಲಿದ್ದಾರೆ. ವೀರೇಂದ್ರ ಖತಿಕ್ ಅವರು ಟಿಕಮ್ ಗರ್ (ಎಸ್​ಸಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ವಿದಿಶಾ ಸಂಸದ ರಮಾಕಾಂತ್ ಭಾರ್ಗವ ಅವರನ್ನು ಕೈಬಿಟ್ಟು ಈ ಕ್ಷೇತ್ರದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಪ್ರಸ್ತುತ ಸಾಧ್ವಿ ಪ್ರಜ್ಞಾ ಸಿಂಗ್ ಪ್ರತಿನಿಧಿಸುವ ಭೋಪಾಲ್ ಕ್ಷೇತ್ರದಿಂದ ಅಲೋಕ್ ಶರ್ಮಾ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ಪ್ರಸ್ತುತ ಬಿಜೆಪಿ ಸಂಸದ ಗುಮನ್ ಸಿಂಗ್ ದಾಮೋರ್ ಸಂಸದರಾಗಿರುವ ರತ್ಲಾಮ್ (ಎಸ್​ಟಿ) ಸ್ಥಾನದಿಂದ ಅನಿತಾ ನಗರ್ ಸಿಂಗ್ ಚೌಹಾಣ್ ಸ್ಪರ್ಧಿಸಲಿದ್ದಾರೆ.

ರಾಜಸ್ಥಾನ ಟಿಕೆಟ್ ಹಂಚಿಕೆ ನೋಡುವುದಾದರೆ- ರಾಜ್ಯದ 15 ಲೋಕಸಭಾ ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು ಚುರು, ಭರತ್ಪುರ, ಜಲೋರ್, ಉದಯಪುರ ಮತ್ತು ಬನ್ಸ್ ವಾರಾ ಈ ಐದು ಕ್ಷೇತ್ರಗಳಿಗೆ ಪಕ್ಷ ಹೊಸ ಮುಖಗಳನ್ನು ಕಣಕ್ಕಿಳಿಸಿದೆ.

ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಪಕ್ಷ ಹೆಸರಿಸಿದೆ. ಈ ಕ್ಷೇತ್ರವನ್ನು ಪ್ರಸ್ತುತ ಸಂಸದೆ ಪ್ರತಿಮಾ ಭೌಮಿಕ್ ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ : ಹೈದರಾಬಾದಿನ ರಾಮೇಶ್ವರಂ ಕೆಫೆಗೆ ಒವೈಸಿ ಭೇಟಿ: ಬೆಂಗಳೂರಿನ ಘಟನೆಗೆ ಖಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.