ETV Bharat / bharat

ಸರನಿಯಾ ನಾಮಪತ್ರ ರದ್ದು; ಸತತ ಮೂರನೇ ಬಾರಿಗೆ ಸಂಸದರಾಗುವ ಕನಸು ಭಗ್ನ - Nomination Cancelled

author img

By PTI

Published : Apr 21, 2024, 5:22 PM IST

KOKRAJHAR MP  NABA SARANIA  ASSAM
ಸರನಿಯಾ ನಾಮಪತ್ರ ರದ್ದು

ಸತತ ಮೂರನೇ ಬಾರಿಗೆ ಸಂಸದರಾಗುವ ಕನಸು ಕಂಡಿದ್ದ ನಬ ಕುಮಾರ್ ಸರನಿಯಾ ಅವರ ನಾಮಪತ್ರವನ್ನು ಭಾನುವಾರ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಕ್ರಜಾರ್ (ಅಸ್ಸೋಂ): ಇತ್ತೀಚಿಗೆ ಜಾತಿ ಪ್ರಮಾಣ ಪತ್ರದ ವಿವಾದಕ್ಕೆ ಸಿಲುಕಿರುವ ಕೊಕ್ರಜಾರ್ ಸಂಸದ ನಬ ಕುಮಾರ್ ಸರನಿಯಾ ಅವರಿಗೆ ಮತ್ತೊಂದು ನಿರಾಶದಾಯಕ ಸುದ್ದಿ ಬಂದಿದೆ. ಮೂರನೇ ಬಾರಿಗೆ ಸಂಸದರಾಗುವ ನಬ ಕುಮಾರ್ ಸರನಿಯಾ ಕನಸು ಭಗ್ನವಾಗಿದೆ. ನಬ ಕುಮಾರ್ ಸರನಿಯಾ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಭಾನುವಾರ ತಿರಸ್ಕರಿಸಿದ್ದಾರೆ.

ಈ ಕುರಿತು ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ದ್ವಿವೇದಿ ಸುದ್ದಿಗಾರರೊಂದಿಗೆ ಮಾತನಾಡಿ, ಸರನಿಯಾ ಅವರ ನಾಮಪತ್ರಗಳು ಅಮಾನ್ಯವಾಗಿದ್ದರಿಂದ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಏಪ್ರಿಲ್ 19ರ ಕೊನೆಯ ದಿನದವರೆಗೆ ಸಲ್ಲಿಕೆಯಾಗಿರುವ 16 ನಾಮಪತ್ರಗಳಲ್ಲಿ 15 ಸಿಂಧುವಾಗಿದ್ದು, ನಾಮಪತ್ರ ಹಿಂಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿದೆ ಎಂದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕೊಕ್ರಜಾರ್ ಕ್ಷೇತ್ರಕ್ಕೆ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಶನಿವಾರ ನಿಗದಿಯಾಗಿದ್ದ ಈ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯನ್ನು ಪ್ರಾಧಿಕಾರ ಮುಂದೂಡಿತ್ತು. ಕೊಕ್ರಜಾರ್ ಅಲ್ಲದೆ ಗುವಾಹಟಿ, ಬಾರ್ಪೇಟಾ ಮತ್ತು ಧುಬ್ರಿಯಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ಮೂರು ಸ್ಥಾನಗಳಿಗೆ ಶನಿವಾರ ಪರಿಶೀಲನೆ ನಡೆಸಲಾಗಿದ್ದು, ಒಟ್ಟು 37 ನಾಮಪತ್ರಗಳು ಸಿಂಧುವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

2014 ರಿಂದ ಕ್ಷೇತ್ರವನ್ನು ಸ್ವತಂತ್ರವಾಗಿ ಪ್ರತಿನಿಧಿಸುತ್ತಿರುವ ಗಣ ಸುರಕ್ಷಾ ಪಾರ್ಟಿಯ (ಜಿಎಸ್‌ಪಿ) ಮುಖ್ಯಸ್ಥ ಸರನಿಯಾ, ರಾಜ್ಯ ಮಟ್ಟದ ತಮ್ಮ ಎಸ್‌ಟಿ (ಬಯಲು) ಸ್ಥಾನಮಾನವನ್ನು ರದ್ದು ಮಾಡಿದ್ದನ್ನು ಪ್ರಶ್ನಿಸಿ ಗುವಾಹಟಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪರಿಶೀಲನಾ ಸಮಿತಿ ಅದನ್ನು ಗುರುವಾರ ವಜಾಗೊಳಿಸಿತು. ಇದರ ನಂತರ, ಸಂಸದರು ನವೆಂಬರ್ 18, 1986 ರಂದು ನೀಡಲಾದ ಆಲ್ ಅಸ್ಸೋಂ ಬುಡಕಟ್ಟು ಸಂಘದ ಪ್ರಮಾಣಪತ್ರವನ್ನು ಸಲ್ಲಿಸುವ ಮೂಲಕ ಉಮೇದುವಾರಿಕೆ ಸಲ್ಲಿಸಿದ್ದರು.

ಪ್ರಮಾಣಪತ್ರವು ಅತ್ಯಂತ ಅನುಮಾನಾಸ್ಪದವಾಗಿದೆ ಎಂದು ಗುರುತಿಸಿದ ದ್ವಿವೇದಿ, ಅದರ ನೈಜತೆಯ ಬಗ್ಗೆ ಅನುಮಾನ ಮೂಡಿದೆ. ಒಬ್ಬ ವ್ಯಕ್ತಿಯು ಎರಡು ವಿಭಿನ್ನ ಸಮುದಾಯಗಳಿಗೆ ಸೇರುವಂತಿಲ್ಲ ಮತ್ತು ವಿವಿಧ ಸಮುದಾಯಗಳ ಎರಡು ST ಪ್ರಮಾಣಪತ್ರಗಳನ್ನು ಹೊಂದುವಂತಿಲ್ಲ ಎಂದು ಹೇಳಿದರು.

ನಬ ಕುಮಾರ್ ಸರನಿಯಾ ಅವರ ಜಾತಿ ಪ್ರಮಾಣಪತ್ರ ನಕಲಿ ಎಂದು ಗುವಾಹಟಿ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಅವರು ಬೋರೋ-ಕಚಾರಿ ಸಮುದಾಯದವರು ಅಲ್ಲ ಎಂದು ಸಾಬೀತಾಯಿತು. ಅಸ್ಸೋಂ ಸರ್ಕಾರ ರಚಿಸಿದ್ದ ರಾಜ್ಯ ಮಟ್ಟದ ಜಾತಿ ಮೇಲ್ವಿಚಾರಣಾ ಸಮಿತಿ ವರದಿ ನೀಡಿತ್ತು. ಅಸ್ಸೋಂ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನಬ ಕುಮಾರ್ ಸರನಿಯಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಾಲಯದ ತೀರ್ಪಿನ ನಂತರ, ನಬ ಕುಮಾರ್ ಸರನಿಯಾ ಅವರು ತಮ್ಮ ನಾಮನಿರ್ದೇಶನದ ಜೊತೆಗೆ ತಮ್ಮ ಎಸ್‌ಸಿ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಆದರೆ ಅಂತಿಮವಾಗಿ ಪರಿಶೀಲನೆಯ ನಂತರ ನಬ ಕುಮಾರ್ ಸರನಿಯಾ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು. ಕೊಕ್ರಜಾರ್ ಲೋಕಸಭಾ ಕ್ಷೇತ್ರವು ಬುಡಕಟ್ಟು ಜನಾಂಗದವರಿಗೆ ಮೀಸಲಾಗಿತ್ತು ಮತ್ತು ನಬ ಕುಮಾರ್ ಸರನಿಯಾ ಅವರು ಬುಡಕಟ್ಟು ಪ್ರಮಾಣಪತ್ರದ ಆಧಾರದ ಮೇಲೆ 2014 ಮತ್ತು 2019 ರಲ್ಲಿ ಎರಡು ಬಾರಿ ಗೆದ್ದಿದ್ದರು.

ಓದಿ: ರಾಜ್ಯವನ್ನು ಮತಾಂಧರ ಯುದ್ಧಭೂಮಿಯಾಗಿ ಪರಿವರ್ತಿಸಿದ ಕಾಂಗ್ರೆಸ್: ಬಿ.ಎಸ್.ಯಡಿಯೂರಪ್ಪ - Yediyurappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.