ETV Bharat / bharat

ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ: ಪ್ರಧಾನಿ ಮೋದಿ ಅಭಿನಂದನೆ

author img

By ETV Bharat Karnataka Team

Published : Feb 3, 2024, 11:49 AM IST

Updated : Feb 3, 2024, 12:59 PM IST

ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರದಿಂದ ಭಾರತ ರತ್ನ ಘೋಷಿಸಲಾಗಿದೆ.

Etv Bharat
Etv Bharat

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರದಿಂದ ಭಾರತ ರತ್ನ ಘೋಷಣೆ ಮಾಡಲಾಗಿದೆ.

''ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಕೂಡ ಅವರೊಂದಿಗೆ ಮಾತನಾಡಿದ್ದೇನೆ. ಈ ಗೌರವ ಸಂದಿರುವುದಕ್ಕೆ ಅಭಿನಂದಿಸಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

''ಶ್ರೀ ಎಲ್. ಕೆ. ಅಡ್ವಾಣಿ ಜೀ ಅವರಿಗೆ ಭಾರತ ರತ್ನ ನೀಡಲಾಗುವುದು ಎಂಬ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತಸವಾಗಿದೆ. ನಾನು ಕೂಡ ಅವರೊಂದಿಗೆ ಮಾತನಾಡಿ ಈ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಅಡ್ವಾಣಿ ಜೀ ಅವರು ಒಬ್ಬರು, ಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾಗಿದೆ. ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪಪ್ರಧಾನಿಯಾಗಿ ದೇಶ ಸೇವೆ ಮಾಡುವವರೆಗಿನ ಅವರ ಸೇವೆ ಅನನ್ಯವಾದದು. ಅವರು ನಮ್ಮ ಗೃಹ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಸಂಸದೀಯ ನಡೆ ಯಾವಾಗಲೂ ಆದರ್ಶಪ್ರಾಯವಾಗಿವೆ ಹಾಗೂ ಶ್ರೀಮಂತ ಒಳನೋಟಗಳಿಂದ ತುಂಬಿವೆ'' ಎಂದು ಟ್ವೀಟ್​ ಮಾಡಿ ಗುಣಗಾನ ಮಾಡಿದ್ದಾರೆ.

''ಸಾರ್ವಜನಿಕ ಜೀವನದಲ್ಲಿ ಅಡ್ವಾಣಿ ಜೀ ಅವರ ದಶಕಗಳ ಸುದೀರ್ಘ ಸೇವೆಯು ಪಾರದರ್ಶಕತೆ ಮತ್ತು ಸಮಗ್ರತೆಗೆ ಅವರ ಅಚಲವಾದ ಬದ್ಧತೆಗೆ ಹೆಸರುವಾಸಿಯಾಗಿದೆ. ಇದು ರಾಜಕೀಯ ನೀತಿಶಾಸ್ತ್ರದಲ್ಲಿ ಅನುಕರಣೀಯ ಮಾನದಂಡವಾಗಿದೆ. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುಜ್ಜೀವನವನ್ನು ಹೆಚ್ಚಿಸಲು ಅವರು ಹೆಚ್ಚಿನ ಪ್ರಯತ್ನಗಳನ್ನು ಮಾಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಯಾವಾಗಲೂ ಪರಿಗಣಿಸುತ್ತೇನೆ'' ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುದೀರ್ಘ ಅವಧಿಯವರೆಗೆ ಬಿಜೆಪಿ ಅಧ್ಯಕ್ಷ: 1980 ರಲ್ಲಿ ಭಾರತೀಯ ಜನತಾ ಪಕ್ಷ ರಚನೆಯಾದಾಗಿನಿಂದ ಸುದೀರ್ಘ ಅವಧಿಯವರೆಗೆ ಪಕ್ಷದ ಅಧ್ಯಕ್ಷರಾಗಿ ಉಳಿದಿರುವ ಏಕೈಕ ನಾಯಕ ಎಂದರೆ, ಅದು ಲಾಲ್ ಕೃಷ್ಣ ಅಡ್ವಾಣಿ ಅವರು. ಮೊದಲ ಬಾರಿಗೆ ಅವರು 1986 ರಿಂದ 1990 ರವರೆಗೆ ಮತ್ತು ನಂತರ 1993 ರಿಂದ ಅಧ್ಯಕ್ಷರಾಗಿದ್ದರು. 1998 ಮತ್ತು ಬಳಿಕ ಅವರು 2004 ರಿಂದ 2005 ರವರೆಗೆ ಪಕ್ಷದ ಅಧ್ಯಕ್ಷರಾಗಿದ್ದರು. 3 ದಶಕಗಳ ಕಾಲ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅಡ್ವಾಣಿ ಮೊದಲು ಗೃಹ ಸಚಿವರಾದರು ಮತ್ತು ನಂತರ ಅಟಲ್ ಜೀ ಅವರ ಸಂಪುಟದಲ್ಲಿ (1999-2004) ಉಪಪ್ರಧಾನಿಯಾಗಿದ್ದರು.

ಸಿಂಧ್ ಪ್ರಾಂತ್ಯದಲ್ಲಿ ಜನನ: ಅಡ್ವಾಣಿ ಅವರು ಸಿಂಧ್ ಪ್ರಾಂತ್ಯದಲ್ಲಿ (ಪಾಕಿಸ್ತಾನ) 8 ನವೆಂಬರ್ 1927 ರಂದು ಜನಿಸಿದ್ದರು. ಅವರು ಕರಾಚಿಯ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ಮತ್ತು ಅವರ ದೇಶಭಕ್ತಿಯ ಉತ್ಸಾಹವು ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡೆಗೆ ಚಲಿಸುವಂತೆ ಪ್ರೇರೇಪಿಸಿತು. ಈ ದೇಶವನ್ನು ಒಂದುಗೂಡಿಸುವ ಸಂಕಲ್ಪದೊಂದಿಗೆ ಅವರು ರಾಜಸ್ಥಾನದಲ್ಲಿ ಆರ್‌ಎಸ್‌ಎಸ್ ಪ್ರಚಾರಕರಾಗಿ ಕೆಲಸ ಮುಂದುವರೆಸಿದರು. 1957ರಲ್ಲಿ ಅಡ್ವಾಣಿ ಅವರು ಅಟಲ್ ಮತ್ತು ಹೊಸದಾಗಿ ಆಯ್ಕೆಯಾದ ಸಂಸದರಿಗೆ ಸಹಾಯ ಮಾಡಲು ರಾಜಸ್ಥಾನವನ್ನು ತೊರೆದು ದೆಹಲಿಗೆ ಬರುವಂತೆ ಕೇಳಿಕೊಂಡರು. ಸುಮಾರು 3 ವರ್ಷಗಳ ಕಾಲ ದೆಹಲಿಯ ಕಚೇರಿಯಲ್ಲಿ ಕೆಲಸ ಮಾಡಿದ ನಂತರ, ಅಡ್ವಾಣಿ ಪತ್ರಕರ್ತರಾಗಿ ತಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಿದ್ದರು. 1960 ರಲ್ಲಿ ಅವರು ಆರ್ಗನೈಸರ್ನಲ್ಲಿ ಸಹಾಯಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಬಿಜೆಪಿಗೆ ಲಭಿಸಿತ್ತು ಉತ್ತಮ ಫಲಿತಾಂಶ: 1980 ಮತ್ತು 1990ರ ನಡುವೆ, ಅಡ್ವಾಣಿ ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದ ಪಕ್ಷವನ್ನಾಗಿ ಮಾಡಲು ತಮ್ಮ ಸಮಯವನ್ನು ವಿನಿಯೋಗಿಸಿದರು. 1984ರಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದ ಪಕ್ಷವು, ಲೋಕಸಭೆ ಚುನಾವಣೆಯಲ್ಲಿ 86 ಸ್ಥಾನಗಳನ್ನು ಗಳಿಸಿದಾಗ ಅದರ ಉತ್ತಮ ಫಲಿತಾಂಶವು ಗೋಚರಿಸಿತ್ತು. ಬಿಜೆಪಿ ಪಕ್ಷದ ಸ್ಥಾನವು 1992 ರಲ್ಲಿ 121 ಮತ್ತು 1996 ರಲ್ಲಿ 161 ಸ್ಥಾನಗಳಿಗೆ ಗಳಿಸಿತ್ತು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿತ್ತು. ಮತ್ತು ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಿ ಹೊರಹೊಮ್ಮಿತ್ತು.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಗ್ಗೆ ಮೃದು ಧೋರಣೆ: ಜೈರಾಂ ರಮೇಶ್​ ವಿರುದ್ಧ ಸಿಪಿಐಎಂ ತೀವ್ರ ವಾಗ್ದಾಳಿ

Last Updated :Feb 3, 2024, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.