ETV Bharat / state

'ತೆನೆ'ಬೇನೆಗೆ ಬೇಸತ್ತು 'ಹಸ್ತ'ಲಾಘವ.. ಉಪಚುನಾವಣೆ ಫಲಿತಾಂಶದ ಮೇಲೆ ಜೆಡಿಎಸ್‌+ ಮನಗೂಳಿ‌ ಕುಟುಂಬದ ಭವಿಷ್ಯ!?

author img

By

Published : Oct 8, 2021, 3:03 PM IST

ashoka managooli
ಅಶೋಕ ಮನಗೂಳಿ

ಜೆಡಿಎಸ್​​ಗಾಗಿ ನಮ್ಮ ತಂದೆ 40 ವರ್ಷ ದುಡಿದಿದ್ದಾರೆ. ನಾನು ಕಳೆದ 20ವರ್ಷದಿಂದ ಸಾಮಾನ್ಯ ಕಾರ್ಯಕರ್ತನಾಗಿ ಯಾವುದೇ ಹುದ್ದೆಗೆ ಆಸೆಪಡದೆ ದುಡಿದರೂ ನಮ್ಮನ್ನು ಜೆಡಿಎಸ್ ಸರಿಯಾಗಿ ನೋಡಿಕೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಶೋಕ ಮನಗೂಳಿ ಅಸಮಾಧಾನ ಹೊರ ಹಾಕಿದರು..

ವಿಜಯಪುರ : ಸಿಂದಗಿ ಉಪಚುನಾವಣೆಗೆ ಈಗ ರಾಜಕೀಯ ದ್ವೇಷ ಅಂಟಿದೆ. ಮಾಜಿ ಸಚಿವ ದಿ. ಎಂ ಸಿ ಮನಗೂಳಿ ಅವರು 40 ವರ್ಷ ಜೆಡಿಎಸ್​ನಲ್ಲಿದ್ದವರು. ಕೊನೆಯ ಕಾಲದಲ್ಲಿ ಜೆಡಿಎಸ್ ವರ್ತನೆಗೆ ಬೇಸತ್ತು ಕಾಂಗ್ರೆಸ್ ಸೇರುವ ತಯಾರಿ ನಡೆಸಿದ್ದರು ಎಂದು ಅವರ ಕುಟುಂಬ ವರ್ಗ ಈಗ ಹೇಳುತ್ತಿದೆ. ಈ ಮೂಲಕ ಮನಗೂಳಿ ಅವರ ಪುತ್ರನ ಪುರಸಭೆ ಅಧ್ಯಕ್ಷ ಗಾದಿಗೆ ಅವಿಶ್ವಾಸ ಗೊತ್ತುವಳಿ ಮಂಡನೆ ಅಸ್ತ್ರ ಬಿಟ್ಟಿದ್ದ ಜೆಡಿಎಸ್​ಗೆ ತಿರುಗೇಟು ನೀಡಿದ್ದಾರೆ.

ಉಪಚುನಾವಣೆ ಫಲಿತಾಂಶದ ಮೇಲೆ ನಿಂತಿದೆಯಾ ಮನಗೂಳಿ‌ ಕುಟುಂಬದ ಭವಿಷ್ಯ!?

ಕುಟುಂಬ ರಾಜಕಾರಣದ ಆರೋಪ ಹೇರಿಕೊಂಡು ರಾಜ್ಯದಲ್ಲಿ ಅಸ್ವಿಸ್ತ ಉಳಿಸಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಮನಗೂಳಿ ಕುಟುಂಬ ಸಹ ಶಾಕ್ ನೀಡಿದೆ. ದಿ.ಎಂ ಸಿ ಮನಗೂಳಿ ಹಿರಿಯ ಪುತ್ರ ಅಶೋಕ ಮನಗೂಳಿ ತಂದೆಯ ನಿಧನದ ನಂತರ ಕಾಂಗ್ರೆಸ್ ಸೇರಿದ್ದರು. ಮನಗೂಳಿ ಕುಟುಂಬದ ಉಳಿದ ಯಾರೂ ಕೂಡ ಜೆಡಿಎಸ್ ಬಿಟ್ಟಿರಲಿಲ್ಲ.

ಉಪ ಚುನಾವಣೆಯಲ್ಲಿ ಜೆಡಿಎಸ್ ಮನಗೂಳಿ ಕುಟುಂಬಕ್ಕೆ ಟಿಕೆಟ್ ನೀಡಬಹುದು ಎನ್ನುವ ಆಶಾ ಭಾವನೆಯನ್ನ ಅವರ ಕುಟುಂಬ, ಕಾರ್ಯಕರ್ತರು ಹೊಂದಿದ್ದರು. ಆದರೆ, ಚುನಾವಣೆ ಘೋಷಣೆ ಆದ ಮೇಲೆ ಜೆಡಿಎಸ್ ಏಕಾಏಕಿ ಅಲ್ಪಸಂಖ್ಯಾತರ ಅಭ್ಯರ್ಥಿಗೆ ಟಿಕೆಟ್ ನೀಡಿರುವುದಲ್ಲದೇ, ಶಾಂತವೀರ ಮನಗೂಳಿಯ ಪುರಸಭೆ ಅಧ್ಯಕ್ಷಗಿರಿಗೂ ಅಡ್ಡಗಾಲು ಹಾಕಿದೆ. ಇದು ಸಹಜವಾಗಿ ಮನಗೂಳಿ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ಜೆಡಿಎಸ್​​ಗಾಗಿ ನಮ್ಮ ತಂದೆ 40 ವರ್ಷ ದುಡಿದಿದ್ದಾರೆ. ನಾನು ಕಳೆದ 20ವರ್ಷದಿಂದ ಸಾಮಾನ್ಯ ಕಾರ್ಯಕರ್ತನಾಗಿ ಯಾವುದೇ ಹುದ್ದೆಗೆ ಆಸೆಪಡದೆ ದುಡಿದರೂ ನಮ್ಮನ್ನು ಜೆಡಿಎಸ್ ಸರಿಯಾಗಿ ನೋಡಿಕೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಶೋಕ ಮನಗೂಳಿ ಅಸಮಾಧಾನ ಹೊರ ಹಾಕಿದರು.

ದಿ. ಎಂ ಸಿ ಮನಗೂಳಿ ಸಹ ಜೆಡಿಎಸ್ ವರ್ತನೆಯಿಂದ ಬೇಸತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಕಾಂಗ್ರೆಸ್ ಸೇರಲು ಮಾತುಕತೆ ನಡೆಸಿದ್ದರು. ಜನವರಿಯಲ್ಲಿ ಕಾಂಗ್ರೆಸ್ ಸೇರುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹಠಾತ್ ಆಗಿ ವಿಧಿವಶರಾದರು. ಅವರ ಇಚ್ಛೆಯಂತೆ ನನ್ನ ಸಹೋದರ ಕಾಂಗ್ರೆಸ್ ಸೇರಿದ್ದಾನೆ. ನಾನು ಸಹ ಮುಖಂಡರ ಸಮ್ಮುಖದಲ್ಲಿ ನಾಳೆ ಕಾಂಗ್ರೆಸ್ ಸೇರುವುದಾಗಿ ಮನಗೂಳಿಯ ದ್ವಿಯೀಯ ಪುತ್ರ ಶಾಂತವೀರ ಮನಗೂಳಿ ಘೋಷಿಸಿದರು.

ಇದನ್ನೂ ಓದಿ: ಬೆಳಗಾವಿ ಯುವಕನ ಕೊಲೆಗೈದ 10 ಆರೋಪಿಗಳ ಬಂಧನ.. ಮಗಳನ್ನ ಪ್ರೀತಿಸಿದಕ್ಕೆ ಸುಪಾರಿ ಕೊಟ್ಟ ತಂದೆ..

ಎಂ ಸಿ ಮನಗೂಳಿ ಅವರು ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತರಾಗಿದ್ದರು. ಕಳೆದ ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸಚಿವರಾಗಲು ಮನಗೂಳಿ ಹೋರಾಟವೇ ನಡೆಸಿ, ಕೊನೆಗೂ ಗೌಡರ ಕೃಪೆಯಿಂದ ತೋಟಗಾರಿಕೆ ಸಚಿವರಾಗಿದ್ದರು. ಆದರೆ, ಸದ್ಯ ವಾತಾವರಣ ಮನಗೂಳಿ‌ ಕುಟುಂಬಕ್ಕೆ ಮತದಾರ ಒಲಿಯುವನೋ ಇಲ್ವೋ ನೋಡಬೇಕು. ಉಪಚುನಾವಣೆ ಫಲಿತಾಂಶ ಸಿಂದಗಿಯಲ್ಲಿ ಮನಗೂಳಿ‌ ಕುಟುಂಬ ಹಾಗೂ ಜೆಡಿಎಸ್ ಭವಿಷ್ಯ ನಿರ್ಧರಿಸಲಿದೆ.

ನಾಮಪತ್ರ ಸಲ್ಲಿಕೆ : ಸಿಂದಗಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದ ಹಿನ್ನೆಲೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಇನ್ನೇನು ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ : ಕಾಂಗ್ರೆಸ್ ಅಭ್ಯರ್ಥಿಯಾಗಿ ದಿ. ಎಂ ಸಿ ಮನಗೂಳಿ ಪುತ್ರ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾಧ್ಯಕ್ಷ ರಾಜು ಆಲಗೂರ ಸೇರಿ ಅನೇಕ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ.

ಬಿಜೆಪಿ ಅಭ್ಯರ್ಥಿ : ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ರಮೇಶ ಭೂಸನೂರ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಸಿ ಸಿ ಪಾಟೀಲ್​​, ವಿ. ಸೋಮಣ್ಣ, ಶಶಿಕಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಲಕ್ಷ್ಮಣ ಸವದಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿ ಹಲವು ನಾಯಕರು ಉಪಸ್ಥಿತರಿರುವರು. ನಂತರ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಇಂದಿನಿಂದಲೇ ಮತಬೇಟೆಗೆ ಎಲ್ಲ ಪಕ್ಷದ ನಾಯಕರು ಸಮಾವೇಶ ನಡೆಸಲು ಸಜ್ಜಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.