ETV Bharat / state

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ: ಚೇತರಿಕೆಗಾಗಿ ಭಕ್ತರಿಂದ ವಿಶೇಷ ಹರಕೆ

author img

By

Published : Jan 2, 2023, 2:01 PM IST

Updated : Jan 2, 2023, 4:03 PM IST

ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಲು ಹರಿದು ಬರುತ್ತಿರುವ ಗಣ್ಯರ ದಂಡು
ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಲು ಹರಿದು ಬರುತ್ತಿರುವ ಗಣ್ಯರ ದಂಡು

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಲು ಹಲವಾರು ಗಣ್ಯರು ಬರುತ್ತಿದ್ದಾರೆ. ಇತ್ತೀಚೆಗೆ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಅವರ ಆರೋಗ್ಯ ವಿಚಾರಿಸಲು ವಿಜಯಪುರಕ್ಕೆ ಆಗಮಿಸಿದ್ದಾರೆ.

ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಲು ಹರಿದು ಬರುತ್ತಿರುವ ಗಣ್ಯರ ದಂಡು.

ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದೇಶ್ವರ ಶ್ರೀಗಳ ದರ್ಶನವನ್ನು ಮಾಜಿ ಸಚಿವ ಎಂ ಬಿ ಪಾಟೀಲ ಪಡೆದುಕೊಂಡರು. ಎಂ ಬಿ ಪಾಟೀಲರ ಜೊತೆಗೆ ಸಿದ್ದೇಶ್ವರ ಶ್ರೀಗಳು, ಮೇಲು ಧ್ವನಿ, ಸನ್ನೆಗಳ ಮೂಲಕ ಮಾತುಕತೆ ನಡೆಸಿದ್ದಾರಂತೆ.

ಕೈಗಳನ್ನು ಮೇಲೆ ಎತ್ತಿ ಸನ್ನೆಗಳ ಮೂಲಕ ಶ್ರೀಗಳು ಮಾತನಾಡಿದ್ದಾರೆ.‌ ನಿನ್ನೆಗಿಂತಲೂ ಇಂದು ಆ್ಯಕ್ಟಿವ್ ಆಗಿದ್ದಾರೆ. ಸಿದ್ದೇಶ್ವರ ಶ್ರೀಗಳ ಜೊತೆಗೆ ಎಂ ಬಿ ಪಾಟೀಲ, ವಚನಾನಂದ ಶ್ರೀ, ಕನ್ನೇರಿ ಕಾಡಸಿದ್ದೇಶ್ವರ ಶ್ರೀಗಳು ಇದ್ದಾರೆ. ವಚನಾನಂದ ಶ್ರೀಗಳೂ ಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿದ್ದಾರೆ.

ನಡಹಳ್ಳಿ ಭೇಟಿ: ಶ್ರೀಗಳನ್ನು ಭೇಟಿ ಮಾಡಿದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ, ಅರ್ಧ ಗಂಟೆಗೂ ಅಧಿಕ ಕಾಲ ಶ್ರೀಗಳ ಜೊತೆಗೆ ಕಾಲ‌ ಕಳೆದರು. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಶತಮಾನ ಕಂಡ ಮಹಾನ್ ಯೋಗಿ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸವಾದ ವಿಚಾರ ಕೇಳಿ ಆತಂಕವಾಯ್ತು. ಹಾಗಾಗಿ ಬಂದಿದ್ದೇನೆ ಎಂದು ಹೇಳಿದರು.

ಆರೋಗ್ಯ ಸ್ಥಿರವಾಗಿದೆ: ವೈದ್ಯರು ನೋಡಿ ಕೊಳ್ತಿದ್ದಾರೆ. ಸುತ್ತೂರು ಶ್ರೀಗಳು, ಎಂ ಬಿ ಪಾಟೀಲರು ಅಲ್ಲಿಯೆ ಇದ್ದಾರೆ. ವೈದ್ಯರ ತಂಡ ಶ್ರೀಗಳ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ. ಮಾನವ ರೂಪದ ದೇವರು ಸಿದ್ದೇಶ್ವರ ಶ್ರೀಗಳು, ಮತ್ತೆ ನಮ್ಮ ಬಳಿ ಬರಲಿದ್ದಾರೆ. ಮತ್ತೆ ಅವರ ಪ್ರವಚನ ಆಲಿಸುತ್ತೇವೆ ಎಂದರು. ಆರೋಗ್ಯವಾಗಿ ಬರಬೇಕು, ಅವರು ಮಾತನಾಡುವ ಸ್ಥಿತಿಯಲ್ಲಿದ್ದಾರೆ. ಆದರೆ ನಾವು ಮಾತನಾಡಿಸಬಾರದು ಕ್ಷಣಕ್ಷಣಕ್ಕೂ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗ್ತಿದೆ ಎಂದರು.

ನಿನ್ನೆ ವದಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ನಿಖರ ಮಾಹಿತಿ ಇಲ್ಲದೇ ಹಾಕಬಾರದು. ಈ ರೀತಿಯ ವದಂತಿ ಹರಡಿಸಬಾರದು. ಕಳೆದ ನನ್ನ ಹುಟ್ಟುಹಬ್ಬದಂದು ಶ್ರೀಗಳು ಮನೆಗೆ ಬಂದಿದ್ದರು.‌ ಅವರಿಗೆ ನಡೆದಾಡಲು ಸಾಕಷ್ಟು ಕಷ್ಟವಿದ್ದರು ಮನೆಗೆ ಬಂದಿದ್ದರು. ನನಗೆ ನನ್ನ ಮಗನಿಗೆ ಆಶೀರ್ವಾದ ಮಾಡಿದರು. ಅವರಿಂದಲೇ 75 ಸಾವಿರ ಪುಸ್ತಕ ಬಿಡುಗಡೆ ಮಾಡಿಸಿದ್ದೆ. ಇಂಥ ಸ್ವಾಮೀಜಿಗಳು, ಸಂತರು ಸಿಗೋದು ಕಷ್ಟ, ಮತ್ತೆ ಆರಾಮಾಗಿ ಬರಲಿದ್ದಾರೆ ಎಂದು ನಡಹಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

ನಿಜಗುಣಾನಂದ ಶ್ರೀ ಭೇಟಿ: ನಿಜಗುಣಾನಂದ ಶ್ರೀ ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಶ್ರೀಗಳನ್ನ ಭೇಟಿ ಮಾಡಿ ಬಂದ ನಿಜಗುಣಾನಂದ ಶ್ರೀಗಳು ಮಾತನಾಡಿ, ಶ್ರೀಗಳು ಆರೋಗ್ಯ ವಾಗಿದ್ದಾರೆ. ಎಲ್ಲರಿಗೂ ದರ್ಶನ ಆಶೀರ್ವಾದ ಕೊಡ್ತಿದ್ದಾರೆ. ಅವರು ನಮ್ಮ ಕೃಷಿ ಪರಂಪರೆಯ ಸಂತರು, ಸಾಧಕರನ್ನ ಪ್ರೀತಿಯಿಂದ ಬೆಳೆಸಿದವರು. ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪಾರ್ಥಿಸುತ್ತೇವೆ, ವಿಶ್ರಾಂತಿಯಲ್ಲಿದ್ದಾರೆ, ಆರೋಗ್ಯವಾಗಿದ್ದಾರೆ ಎಂದರು.‌

ದೀಡ ನಮಸ್ಕಾರ: ಸಿದ್ದೇಶ್ವರ ಶ್ರೀಗಳ ಆರೋಗ್ಯ ಸುಧಾರಿಸಲು ಭಕ್ತರು ವಿಶೇಷ ಹರಕೆ ಹೊತ್ತು, ತೀರಿಸುತ್ತಿದ್ದಾರೆ. 80 ಕಿಲೋ ಮೀಟರ್ ಧೀರ್ಘದಂಡ ನಮಸ್ಕಾರವನ್ನು ಸಿದ್ದೇಶ್ವರ ಸ್ಚಾಮೀಜಿ ಅವರ ಭಕ್ತಿಯಿಂದ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಭಕ್ತೆ ಕಸ್ತೂರಿ ಬೂಸಪ್ಪ ಬಾಲಗೊಂಡ ಎಂಬ ಮಹಿಳೆ ಕೊಲ್ಹಾರದಿಂದ ನೆರೆಯ ಬಾಗಲಕೋಟೆ ಜಿಲ್ಲೆ ಸುಕ್ಷೇತ್ರ ಬಾದಾಮಿ ಬನಶಂಕರಿದೇವಿ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ.‌

ಕಸ್ತೂರಿ ಬಾಲಗೊಂಡ: ನಡೆದಾಡುವ ದೇವರು ಸಿದ್ದೇಶ್ವರ ಪೂಜ್ಯರು ಶೀಘ್ರ ಗುಣಮುಖರಾಗಲಿ ಎಂದು ಸಂಕಲ್ಪಿಸಿ ಭಕ್ತೆಯೊಬ್ಬರು ದೀರ್ಘದಂಡ ನಮಸ್ಕಾರ ಸೇವೆ ಸಲ್ಲಿಸುತ್ತಿದ್ದಾರೆ.‌ ಸೋಮವಾರ ನಸುಕಿನ ವೇಳೆ ಸೇವೆ ಆರಂಭಿಸಿ ಸದ್ಯ ಬೀಳಗಿ ಕ್ರಾಸ್ ದಾಟಿರುವ ಭಕ್ತೆ, ದೀರ್ಘದಂಡ ಸೇವೆ ಹಾಕುತ್ತಾ ಗುರುವಾರ ಬನಶಂಕರಿದೇವಿ ದೇವಸ್ಥಾನ ತಲುಪಲಿದ್ದಾರೆ.

ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಲು ಹರಿದು ಬರುತ್ತಿರುವ ಗಣ್ಯರ ದಂಡು

ಸಿದ್ದರಾಮಯ್ಯ ಆಗಮನ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆ ಅವರ ದರ್ಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ವಿಜಯಪುರ ನಗರದ ಸೈನಿಕ ಶಾಲೆಗೆ ಬಂದಿಳಿದರು. ಸಿದ್ದರಾಮಯ್ಯಗೆ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಇತರರು ಸಾಥ್ ನೀಡಿದ್ದಾರೆ. ಫಿಲಿಪ್ ಪಾಟ್​ನಲ್ಲಿ ಸಿದ್ದರಾಮಯ್ಯಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸ್ವಾಗತ ಕೋರಿದರು.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗೆ ಮುಂದುವರಿದ ಚಿಕಿತ್ಸೆ, ಸಾವಿರಾರು ಅಭಿಮಾನಿಗಳ ಆಗಮನ; ಅನ್ನದಾಸೋಹ ವ್ಯವಸ್ಥೆ

ಮಾಜಿ ಸಿಎಂ ಸಿದ್ದರಾಮಯ್ಯ ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು.‌ ನಂತರ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ನಾಡು ಕಂಡ ಮಹಾನ ಸಂತರು. ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಸದ್ಯ ಅವರು ಆಕ್ಷಿಜನ್ ಮೂಲಕ ಉಸಿರಾಡುತ್ತಿದ್ದಾರೆ. ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಶ್ರೀಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ‌ ಪ್ರಾರ್ಥಿಸುತ್ತೇನೆ ಎಂದರು.

ಹೆಲ್ತ್ ಬುಲೆಟಿನ್ ಬಿಡುಗಡೆ: ಶ್ರೀಗಳ ಆರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಇಂದು ಎರಡನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದರು. ಬಿಪಿ ಉಸಿರಾಟದ ತೊಂದರೆ ಕಾಣಿಸುತ್ತಿದೆ.‌ ಸದ್ಯ ಅವರು ಆಕ್ಷಿಜನ್ ಮೇಲೆ ಉಸಿರಾಡುತ್ತಿದ್ದಾರೆ. ಅಗತ್ಯ ಬಿದ್ದರೆ ಎಲ್ಲ ರೀತಿ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯ ಮಲ್ಲಣ್ಣ ಮೂಲಿಮನಿ ಹೇಳಿದ್ದಾರೆ.

ಇದೇ ವೇಳೆ‌ ಮಾಜಿ ಸಚಿವ ಲಕ್ಷಣ ಸವದಿ ಶ್ರೀಗಳ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದರು. ಶ್ರೀಗಳು ಶೀಘ್ರ ಗುಣಮುಖರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated :Jan 2, 2023, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.