ETV Bharat / state

ಶಿರಸಿಯಲ್ಲಿ ಅನುಷ್ಠಾನಗೊಳ್ಳದ ಸಂಚಾರ ಪೊಲೀಸ್ ಠಾಣೆ; ತಪ್ಪದ ವಾಹನ ದಟ್ಟಣೆ ಕಿರಿಕಿರಿ

author img

By ETV Bharat Karnataka Team

Published : Sep 8, 2023, 1:19 PM IST

ಶಿರಸಿ
ಶಿರಸಿ

ಉತ್ತರಕನ್ನಡದ ಶಿರಸಿಯಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿದ್ದು ಶೀಘ್ರವೇ ಸಂಚಾರ ಪೊಲೀಸ್ ಠಾಣೆ ಅನುಷ್ಠಾನ ಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಿರಸಿಯಲ್ಲಿ ಸಂಚಾರ ಪೊಲೀಸ್​ ಠಾಣೆ ಅನುಷ್ಠಾನಕ್ಕೆ ಮನವಿ

ಶಿರಸಿ (ಉತ್ತರಕನ್ನಡ): ಹಿಂದಿನ ಬಿಜೆಪಿ ಅಧಿಕಾರವಧಿಯಲ್ಲಿ ಶಿರಸಿಗೆ ಮಂಜೂರು ಮಾಡಿದ್ದ ಸಂಚಾರ ಪೊಲೀಸ್​​ ಠಾಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಶಿರಸಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದ್ದು, ನಗರ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ.

ವಾಣಿಜ್ಯ ನಗರ ಶಿರಸಿ ಪಟ್ಟಣದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನದಲ್ಲಿನ ದೋಷಗಳು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಜತೆಗೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ 2023ರ ಫೆಬ್ರವರಿಯಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಲಾಗಿತ್ತು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ​ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ, ವಾಣಿಜ್ಯ ಹಾಗೂ ಸಾಂಸ್ಕೃತಿಕವಾಗಿ ಬೆಳೆಯುತ್ತಿರುವ ತಾಲೂಕು ಶಿರಸಿ. ಇಲ್ಲಿಯ ಜನಜೀವನಕ್ಕೆ ಅಗತ್ಯವಿರುವಂತಹ ಅನೇಕ ಸಂಗತಿಗಳನ್ನು ನಾನು ಮಂಜೂರು ಮಾಡಿಸಿದ್ದೇನೆ. ಕೆಲವು ವಿವಿಧ ಹಂತಗಳಲ್ಲಿ ಕುಂಟುತ್ತಾ ಸಾಗುತ್ತಿವೆ. ಈ ಪೈಕಿ ಸಂಚಾರಿ ಪೊಲೀಸ್ ಠಾಣೆ ಬಹುಮುಖ್ಯವಾದದ್ದು. ಶಿರಸಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಂಥ ನಗರ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ವಾಹನ ಬಳಸಬೇಕಾದ ಸ್ಥಿತಿ ಜನರದ್ದು.

ಜನಸಂಖ್ಯೆ ಹೆಚ್ಚಿರುವುದರಿಂದ ವಾಹನ ದಟ್ಟಣೆಯ ಪ್ರಮಾಣ ಶಿರಸಿಯಲ್ಲಿ ಜಾಸ್ತಿ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್​ ಠಾಣೆಯನ್ನು ನಾನು ಮಂಜೂರು ಮಾಡಿಸಿದ್ದೆ. ಈಗ ಅದು ಅನುಷ್ಠಾನಕ್ಕೆ ಬರಬೇಕು. ರಾಜ್ಯದ ಕಾಂಗ್ರೆಸ್​ ಸರ್ಕಾರ, ಇಲ್ಲಿನ ಸ್ಥಳೀಯ ಶಾಸಕರು ಅನುಷ್ಠಾನಕ್ಕೆ ಬೇಕಾದ ಇಚ್ಛಾಶಕ್ತಿ ತೋರಿಸಿ ಶಿರಸಿ ನಗರದ ಮುಕ್ತ ಸಂಚಾರದ ಅವಕಾಶವನ್ನು ಇಲ್ಲಿಯ ಜನರಿಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸುತ್ತೇನೆ ಎಂದರು.ರಾಜಕಾರಣದ ದೃಷ್ಟಿಯಿಂದ ಈ ಅಭಿವೃದ್ಧಿ ಕೆಲಸ ಕಾರ್ಯವನ್ನು ನೋಡದೆ, ಜನತೆಯ ಅಗತ್ಯಕ್ಕೆ ಮಾಡಿಸಿರುವ ಈ ಅಭಿವೃದ್ಧಿ ಕೆಲಸಗಳ ಅನುಷ್ಠಾನ ತೀವ್ರಗತಿಯಲ್ಲಿ ಆಗಬೇಕೆಂದು ತಿಳಿಸಿದರು. ​

ಇನ್ನು ಶಿರಸಿ ವೃತ್ತದಲ್ಲಿ 2021ರಲ್ಲಿ ಒಟ್ಟು 71 ಅಪಘಾತ ಪ್ರಕರಣಗಳು ದಾಖಲಾಗಿತ್ತು. ಅವುಗಳಲ್ಲಿ 15 ಜನ ಮೃತಪಟ್ಟಿದ್ದು, 93 ಜನ ಗಾಯಗೊಂಡಿದ್ದರು. 2015 ರಿಂದ 2022ರವರೆಗೆ ಒಟ್ಟೂ 3184 ಅಪಘಾತ ಪ್ರಕರಣಗಳು ದಾಖಲಾಗಿವೆ. ಪ್ರಸಕ್ತ ವರ್ಷ ಈವರೆಗೆ 76ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 10 ಜನ ಮೃತಪಟ್ಟರೆ, 63 ಜನ ಗಾಯಗೊಂಡಿದ್ದಾರೆ. ಈ ಎಲ್ಲ ಸಮಸ್ಯೆ ನಿವಾರಣೆ ಉದ್ದೇಶದಿಂದ 1 ಪಿಎಸ್ಐ, 2 ಎಎಸ್ಐ, 8 ಹೆಡ್ ಕಾನ್‌ಸ್ಟೆಬಲ್ ಹಾಗೂ 31 ಸಿಬ್ಬಂದಿ ಸೇರಿ 42 ವಿವಿಧ ದರ್ಜೆಯ ಹುದ್ದೆಗಳೊಂದಿಗೆ ಸಂಚಾರ ಠಾಣೆ ಮಂಜೂರಾತಿ ಆದೇಶ ಹೊರಡಿಸಲಾಗಿತ್ತು. ಬದಲಾದ ಸರ್ಕಾರದ ವ್ಯವಸ್ಥೆಯಲ್ಲಿ ಇನ್ನೂ ಅನುಷ್ಠಾನಕ್ಕೆ ಅನುಮತಿ ಸಿಕ್ಕಿಲ್ಲ. ಕಾರಣ ಈಗಿನ ಸರ್ಕಾರದ ಪ್ರಯತ್ನ ಹೆಚ್ಚಬೇಕಿದೆ.‌

ನಗರ ವ್ಯಾಪ್ತಿಯಲ್ಲಿ ಮಾರಿಕಾಂಬಾ ದೇವಾಲಯ, ತೋಟಗಾರಿಕಾ ಕಾಲೇಜು, ವಿವಿಧ ಆಸ್ಪತ್ರೆಗಳು, ಅನೇಕ ವಾಣಿಜ್ಯ ಸಂಸ್ಥೆಗಳು, ಮಾರುಕಟ್ಟೆ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಕಾರಣ ವಾಹನ ದಟ್ಟಣೆ ಸಮಸ್ಯೆ ಹೆಚ್ಚಿದೆ. ಇದರ ಜೊತೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆ ಸಂದರ್ಭದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿರ್ವಹಣೆಗಾಗಿ ಜಿಲ್ಲೆಯ ಇತರ ಠಾಣೆಗಳಿಂದ ಪೊಲೀಸರನ್ನು ನಿಯೋಜಿಸಲಾಗುತ್ತದೆ.

ನಗರದ ಹೃದಯ ಭಾಗವಾದ ಹಳೇ ಬಸ್ ನಿಲ್ದಾಣ ವೃತ್ತದಿಂದ ಹಿಡಿದು ಡ್ರೈವರ್ ಕಟ್ಟೆ, ಶಿವಾಜಿ ಚೌಕದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ನಿತ್ಯ ಹರಸಾಹಸಪಡಬೇಕಾದ ಸ್ಥಿತಿಯಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಕೆಲ ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಪೊಲೀಸ್ ಇಲಾಖೆ ಗುರುತು ಮಾಡಿತ್ತು. ಆದರೆ, ಅದು ಕೆಲವೇ ದಿನಗಳಿಗೆ ಮಾತ್ರ ಸೀಮಿತವಾಗಿ ಇದೀಗ ಯಥಾರೀತಿ ಮೊದಲಿನಂತೆ ಸಂಚಾರ ವ್ಯವಸ್ಥೆ ನಡೆದಿದೆ ಎನ್ನುತ್ತಾರೆ ಸ್ಥಳೀಯರು.

ಶಿರಸಿಯಲ್ಲಿ ಮೂರು ಪೊಲೀಸ್ ಠಾಣೆಗಳಿದ್ದು, ಕೆಲವೊಮ್ಮೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಬ್ಬಂದಿ ಕೊರತೆ ಸಹ ಎದುರಾಗುತ್ತಿದೆ. ಈ ಹಿಂದೆ ಇದ್ದ ರಸ್ತೆಯನ್ನು ವಿಸ್ತರಿಸಿ ನಗರದ ಮುಖ್ಯ ರಸ್ತೆಗಳನ್ನು ದ್ವಿ ಪಥ ಮಾರ್ಗಗಳಾಗಿ ನಿರ್ಮಿಸಲಾಗಿದೆ. ಆದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಪೊಲೀಸರಿಗೂ ಸಮಸ್ಯೆಯಾಗಿ ಕಾಡುತ್ತಿದೆ. ಕಾರಣ ಶೀಘ್ರವಾಗಿ ಸಂಚಾರ ಪೊಲೀಸ್ ಠಾಣೆ ಅನುಷ್ಠಾನ ಆಗಲಿ ಎನ್ನುವುದು ಸಾರ್ವಜನಿಕರ ಆಗ್ರಹ.

ಇದನ್ನೂ ಓದಿ: ನನೆಗುದಿಗೆ ಬಿದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.