ETV Bharat / state

ಈಡೇರದ ಉತ್ತರ ಕನ್ನಡಿಗರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ

author img

By ETV Bharat Karnataka Team

Published : Nov 10, 2023, 1:04 PM IST

padayatra
ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ

Super Speciality Hospital demand: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿ ಶಿರಸಿಯಿಂದ ಕಾರವಾರದವರೆಗೆ ಅನಂತಮೂರ್ತಿ ಹೆಗಡೆ ಎಂಬುವರು ಪಾದಯಾತ್ರೆ ಮಾಡಿ ಡಿಸಿಗೆ ಮನವಿ ಸಲ್ಲಿಸಿದರು.

ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಕಳೆದ ಹತ್ತು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಬಜೆಟ್‌ನಲ್ಲಿ ಘೋಷಣೆಯಾದ್ರೂ ಆಸ್ಪತ್ರೆ ಕನಸು ಮಾತ್ರ ಕನಸಾಗಿಯೇ ಉಳಿದಿದ್ದು, ಇದೀಗ ಮತ್ತೊಮ್ಮೆ ಉತ್ತರ ಕನ್ನಡದ ಜನತೆ ಹೋರಾಟಕ್ಕೆ ಮುಂದಾಗಿದ್ದಾರೆ.

ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಒತ್ತಾಯಿಸಿ ಶಿರಸಿಯಿಂದ ಕಾರವಾರದವರೆಗೆ ಅನಂತಮೂರ್ತಿ ಹೆಗಡೆ ಎಂಬವರು ಪಾದಯಾತ್ರೆ ಕೈಗೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ಕಳೆದ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಒಂದೆಡೆ, ಆಸ್ಪತ್ರೆಗಾಗಿ ಟ್ವಿಟರ್ ಅಭಿಯಾನ ನಡೆಸಿದ್ರೆ, ಇನ್ನೊಂದೆಡೆ ರಕ್ತದಲ್ಲಿ ಪತ್ರ ಬರೆದು ಪತ್ರ ಚಳವಳಿಯನ್ನು ಸಹ ನಡೆಸಲಾಗಿದೆ. ಇಷ್ಟಾದರೂ ಯಾವುದೇ ಸರ್ಕಾರ ಜಿಲ್ಲೆಯ ಜನರ ಕೂಗಿಗೆ ಸ್ಪಂದಿಸಿಲ್ಲ. ಇಷ್ಟಕ್ಕೆ ಸುಮ್ಮನಾಗದ ಜನತೆ ಇದೀಗ ಪಾದಯಾತ್ರೆ ಮೊರೆ ಹೋಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಎಂಬುವರು ನವೆಂಬರ್ 2 ರಂದು ಶಿರಸಿಯಿಂದ ಕಾರವಾರಕ್ಕೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಆರಂಭಿಸಿದ್ದರು. ಇದೀಗ ಒಂದು ವಾರಗಳ ಕಾಲ ಮೂರು ತಾಲೂಕುಗಳ ಹತ್ತಾರು ಗ್ರಾಮಗಳನ್ನು ದಾಟಿ 150 ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಇಂದು ಕಾರವಾರಕ್ಕೆ ಬಂದು ತಲುಪಿದ್ದಾರೆ. ಇಲ್ಲಿನ ಲಂಡನ್ ‌ಬ್ರಿಡ್ಜ್‌ನಿಂದ ಕಾರವಾರ ಪ್ರವೇಶಿಸಿ, ನೂರಾರು ಮಂದಿ ಬೆಂಬಲಿಗರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಆಸ್ಪತ್ರೆಗಾಗಿ ಘೋಷಣೆಗಳನ್ನ ಕೂಗಿದ್ರು. ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಾದಯಾತ್ರೆ ಪೂರ್ಣಗೊಳಿಸಿ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಸರ್ಕಾರಕ್ಕೆ ಡಿಸಿ ಮೂಲಕ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಅನಂತಮೂರ್ತಿ ಹೆಗಡೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜಿಲ್ಲೆಗೆ ಆಸ್ಪತ್ರೆ ಬೇಕು ಎಂದು ಪಾದಯಾತ್ರೆ ಮಾಡುವ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯ ಜನರಿಗೆ ಅಪಘಾತವಾದಾಗ ಪಕ್ಕದ ಜಿಲ್ಲೆಗಳು ಅಥವಾ ಗೋವಾ ರಾಜ್ಯಕ್ಕೆ ತೆರಳಬೇಕಾಗಿದೆ. ಈ ವೇಳೆ ರಸ್ತೆ ಮಧ್ಯೆಯೇ ಅನೇಕರು ಪ್ರಾಣಿಗಳಂತೆ ಜೀವ ಕಳೆದುಕೊಂಡಿದ್ದಾರೆ. ಸರ್ಕಾರವು ನಮ್ಮನ್ನು ಕೂಡ ಮನುಷ್ಯರೆಂದು ಭಾವಿಸಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಘಟ್ಟದ ಮೇಲೆ ಹಾಗೂ ಕರಾವಳಿ ಭಾಗದಲ್ಲಿ ಪ್ರತ್ಯೇಕ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳಾಗಿದೆ. ಈ ಹಿಂದೆ ಕುಮಟಾದಲ್ಲಿ ಘೋಷಣೆಯಾಗಿದ್ದ ಆಸ್ಪತ್ರೆಯನ್ನು ಕಾಂಗ್ರೆಸ್ ತಡೆ ಹಿಡಿದಿದೆ. ಹೀಗೆ ಮುಂದುವರೆದರೆ ಪ್ರತಿ ಬೀದಿಯಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಅಪಘಾತದಿಂದಲೇ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇನ್ನೂ ಹಲವರು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಾಗದೆ ಸಾವನ್ನಪ್ಪುವಂತಾಗಿದೆ. ಅದರಲ್ಲೂ ಸೂಕ್ತ ಚಿಕಿತ್ಸೆ ಸಿಗದೆ ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 8 ಮಕ್ಕಳ ಸಾವಾಗುತ್ತಿದ್ದು, ಆರೋಗ್ಯ ಸೇವೆಗಳಿಗಾಗಿ ಹೊರ ಜಿಲ್ಲೆಗಳನ್ನೇ ಅವಲಂಬಿಸಿ ಬದುಕಬೇಕಾದ ಸ್ಥಿತಿ ಜಿಲ್ಲೆಯ ಜನರದ್ದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎನ್ನುವ ಹೋರಾಟ ದೊಡ್ಡಮಟ್ಟದಲ್ಲೇ ನಡೆದಿದ್ದು ಇದೀಗ ಪಾದಯಾತ್ರೆ ಮೂಲಕ ಮತ್ತೆ ಆಸ್ಪತ್ರೆಗಾಗಿ ಧ್ವನಿಗೂಡಿಸುತ್ತಿದ್ದಾರೆ.

ಇದನ್ನೂ ಓದಿ: ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಾಲನೆ : ಸಚಿವ ಮಂಕಾಳು ವೈದ್ಯ

ಆಸ್ಪತ್ರೆಯ ವಿಷಯದಲ್ಲಿ ಯಾವುದೇ ಸರ್ಕಾರ ಬಂದರೂ ಅದೇ ರಾಗ, ಅದೇ ಹಾಡು ಎನ್ನುವಂತಾಗಿದೆ. ಸರ್ಕಾರ ಇಲ್ಲಿನ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಕನಿಷ್ಠ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಕೊಡಬೇಕು. ಕಾರವಾರದಲ್ಲಿ ಹೆಸರಿಗಷ್ಟೇ ವೈದ್ಯಕೀಯ ಕಾಲೇಜು ಇದೆ. ಹೀಗಾಗಿ, ಶೀಘ್ರದಲ್ಲಿಯೇ ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.