ETV Bharat / state

ಮತ್ಸೋದ್ಯಮ ಆಧುನೀಕರಣ: ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್​ಗಳು!

author img

By

Published : Feb 2, 2023, 4:53 PM IST

modernization-of-fisheries-long-liner-boats-that-are-useless-on-the-coast
ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್​ಗಳು

ರಾಜ್ಯ ಕರಾವಳಿಯಲ್ಲಿ ಲಾಂಗ್​ ಲೈನರ್​ ಬೋಟ್‌ಗಳು ಉಪಯೋಗಕ್ಕೆ ಬರದಂತಾಗಿದೆ. ಈ ಯೋಜನೆಯನ್ನು ಹೇರಿದರೆ ಯೋಜನೆ ಹಳ್ಳ ಹಿಡಿಯಲಿದೆ ಅಂತಿದ್ದಾರೆ ಮೀನುಗಾರರು.

ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್​ಗಳು

ಕಾರವಾರ: ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಮತ್ಸ್ಯೋದ್ಯಮವನ್ನು ಆಧುನೀಕರಣಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮತ್ಸ್ಯಸಂಪದ ಯೋಜನೆಯಡಿ ಲಾಂಗ್ ಲೈನರ್ ಬೋಟ್​ಗಳನ್ನು ಮೀನುಗಾರರಿಗೆ ನೀಡಲು ಮುಂದಾಗಿದೆ. ಆದರೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೊಡಲು ಹೊರಟಿರುವ ಈ ಬೋಟ್​ಗಳಿಂದ ರಾಜ್ಯದ ಕರಾವಳಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ.

ಮತ್ಸ್ಯಸಂಪದ ಯೋಜನೆಯಡಿ ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡಲು ಲಾಂಗ್ ಲೈನರ್ ಬೋಟ್​ಗಳನ್ನು ಮೀನುಗಾರರಿಗೆ ನೀಡಲು ಸರ್ಕಾರ ಮುಂದಾಗಿದೆ. ದೊಡ್ಡ ಬೋಟ್​ ಇರುವ ಹಿನ್ನೆಲೆಯಲ್ಲಿ ನೂರಾರು ಮೈಲು ದೂರ ತೆರಳಿ ಆಳಸಮುದ್ರ ಮೀನುಗಾರಿಕೆ ನಡೆಸುವುದರಿಂದ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಸಾಧ್ಯವಿದ್ದು, ಇದರಿಂದ ಮೀನುಗಾರರು ಹೆಚ್ಚಿನ ಲಾಭ ಗಳಿಸಬಹುದು ಎನ್ನುವ ಕಾರಣಕ್ಕೆ ಸುಮಾರು 120 ಕೋಟಿ ರೂ ವೆಚ್ಚದಲ್ಲಿ ಬೋಟ್ ಖರೀದಿಗೆ ಸರ್ಕಾರ ಹಣ ನೀಡಲು ಮುಂದಾಗಿದೆ.

ಮೀನುಗಾರರಿಗೆ ಉಪಯೋಗ ಆಗಲೆಂದು ಸಬ್ಸಿಡಿ ದರದಲ್ಲಿ ಬೋಟ್​ಗಳ ಖರೀದಿಗೆ ಸರ್ಕಾರ ಆದ್ಯತೆ ನೀಡಿದೆ. ಆದರೆ, ಈ ಯೋಜನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರರೇ ವಿರೋಧಿಸುತ್ತಿದ್ದಾರೆ. ಲಾಂಗ್ ಲೈನರ್ ಬೋಟ್​ಗಳ ಗಾತ್ರ ದೊಡ್ಡದಿದ್ದು ಅದು ಕೇರಳ, ತಮಿಳುನಾಡಿನಲ್ಲಿ ಮೀನುಗಾರಿಕೆ ಮಾಡಲು ಯೋಗ್ಯ. ಆದರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಪರ್ಶಿಯನ್ ಅಥವಾ ಟ್ರಾಲ್ ಬೋಟ್​ನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತದೆ. ಉಪಯೋಗ ಇಲ್ಲದ ಮೀನುಗಾರಿಕೆ ಯೋಜನೆಯನ್ನು ಮೀನುಗಾರರ ಮೇಲೆ ಯಾಕೆ ಹೇರಬೇಕು? ಎಂದು ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಉಪಯೋಗವಿಲ್ಲದ ಯೋಜನೆಯನ್ನು ಹೇರಿದರೆ ಯೋಜನೆ ಹಳ್ಳ ಹಿಡಿಯಲಿದೆ ಎನ್ನುವುದು ಮೀನುಗಾರರ ಅಸಮಾಧಾನ.

120 ಬೋಟ್​ಗಳ ಖರೀದಿಗೆ ಸರ್ಕಾರ ಹಣ ಮಂಜೂರು ಮಾಡಿದ್ದರೂ ಕೇವಲ ಮೂರ್ನಾಲ್ಕು ಜನ ಮಾತ್ರ ಬೋಟ್ ಖರೀದಿಗೆ ಅರ್ಜಿ ಹಾಕಿದ್ದಾರೆ. ಲೋನ್​ಗಾಗಿ ಮನೆಗಳನ್ನು ಅಡ ಇಡಬೇಕಾಗಿದ್ದು ಇಷ್ಟೊಂದು ದೊಡ್ಡ ಮೊತ್ತ ಹಾಕಿ ಬೋಟ್ ಖರೀದಿಸಿ ನಂತರ ಮೀನುಗಳೇ ಸಿಗದೇ ಇದ್ದರೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಬೇಕು. ಈ ಹಿನ್ನೆಲೆಯಲ್ಲಿ ಲಾಂಗ್ ಲೈನರ್ ಬದಲು ಬೇರೆ ಬೋಟ್​ಗಳನ್ನ ನೀಡಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಂಪರ್ಕಿಸಿದಾಗ, "ಕಳೆದ ಬಜೆಟ್​ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯ ಸಂಪದ ಯೋಜನೆಯಡಿ ಕೇಂದ್ರ ಸರ್ಕಾರ 1.5 ಕೋಟಿ ರೂ ವೆಚ್ಚದ ಸುಮಾರು 50 ಬೋಟ್ ನೀಡಲು ಆಹ್ವಾನಿಸಿತ್ತು. ಆದರೆ ಇದರ ವಿನ್ಯಾಸ ರಾಜ್ಯ ಕರಾವಳಿಯಲ್ಲಿ ಉಪಯೋಗಕ್ಕೆ ಬಾರದ ಕಾರಣ ಬದಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದು ವಾಪಸ್ ಬರಲಿದ್ದು ಮೀನುಗಾರರಿಗೆ ಅನುಕೂಲವಾಗಲಿದೆ" ಎಂದು ಹೇಳಿದರು.

ಈಗಿರುವ ಟ್ರಾಲ್ ಬೋಟ್, ಪರ್ಶಿಯನ್ ಬೋಟ್ ಖರೀದಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ ಎಂದು ಕಾಯುತ್ತಿದ್ದ ಮೀನುಗಾರರಿಗೆ, ಸರ್ಕಾರದ ಲಾಂಗ್ ಲೈನರ್ ಬೋಟ್ ಖರೀದಿ ಯೋಜನೆ ಸಾಕಷ್ಟು ನಿರಾಸೆ ಮೂಡಿಸಿದೆ. ಕಡಲ ಮಕ್ಕಳ ಅಭಿವೃದ್ದಿಗಾಗಿ ಸರ್ಕಾರ ಮತ್ತೊಮ್ಮೆ ಗಮನಹರಿಸಿ ಲಾಂಗ್ ಲೈನರ್ ಬೋಟ್​ಗಳ ಬದಲು ಅವರಿಗೆ ಅಗತ್ಯವಿರುವ ಬೋಟ್ ಖರೀದಿಗೆ ಅನುದಾನ ಬಿಡುಗಡೆ ಮಾಡಬೇಕಾಗಿದೆ.

ಇದನ್ನೂ ಓದಿ: ಕಾಡುಹಂದಿ ಮಾಂಸ ಅಂತಾ ಊರ ಹಂದಿ ಮಾಂಸ ತಿನ್ನಿಸಿದ ಯುವಕರು.. ಗ್ರಾಮಸ್ಥರಿಂದ ಗೂಸಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.