ETV Bharat / state

ಗಂಗಾವಳಿ ಕಿಂಡಿ ಅಣೆಕಟ್ಟು.. ಊರು ಮುಳುಗಡೆಯಾಗುವ ಆತಂಕದಲ್ಲಿ ಜನ

author img

By

Published : Dec 15, 2022, 12:49 PM IST

Updated : Dec 15, 2022, 1:17 PM IST

locals-oppose-gangavalli-river-dam-project
ಗಂಗಾವಳಿ ಕಿಂಡಿ ಅಣೆಕಟ್ಟು: ಊರು ಮುಳುಗಡೆಯಾಗುವ ಆತಂಕದಲ್ಲಿ ಜನ!

ಗಂಗಾವಳಿ ನದಿಗೆ ಅಡ್ಡಲಾಗಿ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಕಿಂಡಿ ಅಣೆಕಟ್ಟನ್ನು ಕಟ್ಟಲು ಸರ್ಕಾರ ಯೋಜನೆ ರೂಪಿಸಿದ್ದು ಇದರ ಅನುಷ್ಠಾನಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗಂಗಾವಳಿ ಕಿಂಡಿ ಅಣೆಕಟ್ಟು.. ಊರು ಮುಳುಗಡೆಯಾಗುವ ಆತಂಕದಲ್ಲಿ ಜನ

ಕಾರವಾರ: ಅದು ನದಿಪಾತ್ರಕ್ಕೆ ಹೊಂದಿಕೊಂಡಿರುವ ಗ್ರಾಮ. ಕಳೆದ ಮೂರು ವರ್ಷಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸತತವಾಗಿ ಪ್ರವಾಹ ಎದುರಿಸುವಂತಾಗಿದೆ. ಇದರ ನಡುವೆ ಸರ್ಕಾರ ಇದೇ ಪ್ರದೇಶದಲ್ಲಿ ನದಿಗೆ ಅಡ್ಡಲಾಗಿ ಕಿಂಡಿ ಆಣೆಕಟ್ಟನ್ನು ನಿರ್ಮಿಸಲು ಇದೀಗ ಯೋಜನೆ ರೂಪಿಸುತ್ತಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ನೂರಾರು ಕುಟುಂಬಗಳ ಬದುಕು ದುಸ್ತರ.. ಕರಾವಳಿ ಜಿಲ್ಲೆ ಉತ್ತರಕನ್ನಡದ ಜೀವನಾಡಿಗಳಲ್ಲಿ ಗಂಗಾವಳಿ ನದಿ ಕೂಡ ಒಂದು. ನದಿಗೆ ಹೊಂದಿಕೊಂಡೇ ಹತ್ತಾರು ಗ್ರಾಮಗಳಿದ್ದು, ನೂರಾರು ಕುಟುಂಬಗಳು ಕೃಷಿ, ತೋಟಗಾರಿಕೆ ಹಾಗೂ ಮೀನುಗಾರಿಕೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೇ ಕದ್ರಾ, ಕೊಡಸಳ್ಳಿ ಜಲಾಶಯ ಯೋಜನೆಯ ನಿರಾಶ್ರಿತರು ಇದೇ ನದಿಯ ತಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಧಾರಾಕಾರ ಮಳೆಯಿಂದ ಸತತವಾಗಿ ನೆರೆ ಪ್ರವಾಹ ಎದುರಾಗಿದ್ದು, ಜನರು ಜೀವನ ನಡೆಸಲು ಪರದಾಡುವಂತಾಗಿತ್ತು. ತಾವು ಬೆಳೆದ ಬೆಳೆ ಸೇರಿದಂತೆ ಹಲವರು ಮನೆಗಳನ್ನು ಕೂಡ ಕಳೆದುಕೊಂಡಿದ್ದರು.

ಆದರೆ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಕಿಂಡಿ ಅಣೆಕಟ್ಟನ್ನು ಕಟ್ಟಲು ಸರ್ಕಾರ ಯೋಜನೆ ರೂಪಿಸಿದ್ದು ಇದರ ಅನುಷ್ಠಾನಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನದಿ ಸರಾಗವಾಗಿ ಹರಿದುಹೋಗುವಾಗಲೇ ನೆರೆ ಪ್ರವಾಹ ಉಂಟಾಗಿದ್ದು, ಚೆಕ್‌ಡ್ಯಾಂ ನಿರ್ಮಾಣವಾದಲ್ಲಿ ಈ ಭಾಗದ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಕಿಂಡಿ ಅಣೆಕಟ್ಟು ಯೋಜನೆ ಜಾರಿಯಾಗಬಾರದು ಅನ್ನೋದು ಗ್ರಾಮಸ್ಥರ ಬೇಡಿಕೆಯಾಗಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಿಂಡಿ ಅಣೆಕಟ್ಟು: ಬೇಸಿಗೆ ಸಂದರ್ಭದಲ್ಲಿ ನೌಕಾನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಹಿನ್ನಲೆ ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೌಕಾನೆಲೆಗೆ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿಯೇ ನೌಕಾನೆಲೆ 75 ಕೋಟಿ ರೂಪಾಯಿ ಹಣವನ್ನು ನೀಡಿತ್ತು. ಇದರೊಂದಿಗೆ ರಾಜ್ಯ ಸರ್ಕಾರವೂ ಹಣ ಹಾಕಿ ಸ್ಥಳೀಯರಿಗೂ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ ಕಿಂಡಿಅಣೆಕಟ್ಟು ನಿರ್ಮಿಸುವುದು ಯೋಜನೆಯ ಉದ್ದೇಶವಾಗಿತ್ತು.

ಆದರೆ ಇದರಿಂದ ಸುತ್ತಲಿನ ಜನವಸತಿ ಪ್ರದೇಶ, ಕೃಷಿಭೂಮಿ ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಅಕ್ಕಪಕ್ಕದ ಗ್ರಾಮಗಳ ಜನರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕುಡಿಯುವ ನೀರು ಪೂರೈಕೆಯ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿದ್ದೇವೆ. ಇದಕ್ಕೆ ಜನರು ವಿರೋಧಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸ್ಥಳೀಯ ಶಾಸಕರು ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಗಂಗಾವಳಿ ನದಿ ಅಣೆಕಟ್ಟು ಯೋಜನೆಗೆ ಅಡ್ಡಿಪಡಿಸುವಂತಿಲ್ಲ: ಹೈಕೋರ್ಟ್ ಆದೇಶ

Last Updated :Dec 15, 2022, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.