ETV Bharat / city

ಗಂಗಾವಳಿ ನದಿ ಅಣೆಕಟ್ಟು ಯೋಜನೆಗೆ ಅಡ್ಡಿಪಡಿಸುವಂತಿಲ್ಲ: ಹೈಕೋರ್ಟ್ ಆದೇಶ

author img

By

Published : Aug 28, 2021, 4:48 AM IST

ಯೋಜನೆಗೆ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರ ಮಧ್ಯಂತರ ಮನವಿ ಪರಿಗಣಿಸಲಾಗದು. ಕುಡಿಯವ ನೀರು ಯೋಜನೆಗೆ ಅಡ್ಡಿಪಡಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

hc
hc

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಕಾಮಗಾರಿ ಮುಂದುವರಿಸಬಹುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸ್ಪಷ್ಟಪಡಿಸಿದೆ.


ಯೋಜನೆ ಪ್ರಶ್ನಿಸಿ ಅಂಕೋಲ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ್ ಗಾಂವ್ಕರ್ ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಹೆಚ್. ಸುನಿಲ್ ಕುಮಾರ್ ವಾದಿಸಿ, ಗಂಗಾವಳಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಅಲ್ಲಿಂದ ಕಾರವಾರ, ಅಂಕೋಲ ಗ್ರಾಮಗಳು ಮತ್ತು 'ಸಿ ಬರ್ಡ್' ಭಾರತೀಯ ನೌಕಾ ನೆಲೆಗೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ. ಯೋಜನೆ ಜಾರಿ ಮುನ್ನ ಪರಿಸರ ಇಲಾಖೆ ಅನುಮತಿ ಪಡೆದಿಲ್ಲ. ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲ. ಸೀ ಬರ್ಡ್ ನೌಕಾ ನೆಲೆಯಿಂದ ಕೇವಲ 20 ಕಿ.ಮೀ ದೂರದಲ್ಲಿ ಕಾಳಿ ನದಿಯಿದೆ. ಆದರೂ 58 ಕಿ.ಮೀ. ದೂರದ ಗಂಗಾವಳಿ ನದಿಯಿಂದ ನೀರು ಪೂರೈಕೆಗೆ ಸರ್ಕಾರ ಯೋಜನೆ ರೂಪಿಸಿದೆ. ಯೋಜನೆ ಜಾರಿಯಾದರೆ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದರು.


ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪರ ವಕೀಲ ಹೆಚ್.ಎನ್ ಶಶಿಧರ್ ವಾದಿಸಿ, ನೌಕಾ ನೆಲೆಗೆ ವರ್ಷದಲ್ಲಿ ಕೇವಲ ನಾಲ್ಕು ತಿಂಗಳ ಮಾತ್ರ ಕುಡಿಯುವ ನೀರು ಪೂರೈಸಲು ಈ ಯೋಜನೆ ಹಮ್ಮಿಕೊಂಡಿದೆ. ಕುಡಿಯುವ ನೀರು ಯೋಜನೆಗೆ ಪರಿಸರ ಪರಿಣಾಮ ಅಧ್ಯಯನ ನಡೆಸುವ ಹಾಗೂ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯವಿಲ್ಲ. ಈ ಸಂಬಂಧ 2006ರಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದರು.


ವಾದ ಪರಿಗಣಿಸಿದ ಪೀಠ, ಯೋಜನೆಗೆ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರ ಮಧ್ಯಂತರ ಮನವಿ ಪರಿಗಣಿಸಲಾಗದು. ಕುಡಿಯವ ನೀರು ಯೋಜನೆಗೆ ಅಡ್ಡಿಪಡಿಸುವಂತಿಲ್ಲ. ಅದರಲ್ಲೂ ದೇಶದ ರಕ್ಷಣೆ ಕೆಲಸ ಮಾಡುತ್ತಿರುವ ನೌಕಾ ನೆಲೆಗೆ ಕುಡಿಯುವ ನೀರು ಪೂರೈಸುವ ಮುಖ್ಯವಾದ ಯೋಜನೆ ಇದಾಗಿದೆ. ಆದ್ದರಿಂದ ಯೋಜನೆಗೆ ಅಡ್ಡಿಪಡಿಸುವುದು ಬೇಡವಾಗಿದ್ದು, ಕಾಮಗಾರಿ ಮುಂದುವರಿಯಲಿ ಎಂದು ಸೂಚಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.