ETV Bharat / state

ಕಾರವಾರ : ಬಂದರು ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಬೀದಿಗಿಳಿದ ಮೀನುಗಾರರು

author img

By

Published : Feb 24, 2021, 8:36 PM IST

fishermen-on-the-streets-demanding-to-stop-port-construction
ಬಂದರು ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಬೀದಿಗಿಳಿದ ಮೀನುಗಾರರು

ಮೀನುಗಾರರು ನೆಲೆಸಿರುವ ಪ್ರದೇಶದಲ್ಲಿ ಖಾಸಗಿ ಬಂದರು ಸ್ಥಾಪನೆ ಮಾಡಲಾಗುತ್ತಿದೆ. ಇದು ಮೀನುಗಾರರ ಪಾಲಿಗೆ ಕರಾಳ ದಿನ. ವಾಣಿಜ್ಯ ಬಂದರು ಸ್ಥಾಪನೆಯಾದಲ್ಲಿ ಮೀನುಗಾರರ ಆದಾಯ ಕುಂಟಿತವಾಗುವುದರ ಜೊತೆಗೆ ಈ ಭಾಗದಲ್ಲಿ ಮೀನುಗಾರಿಕೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ..

ಕಾರವಾರ(ಉ.ಕ): ಹೊನ್ನಾವರ ತಾಲೂಕಿನ ಕಾಸರಕೊಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್​​ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ ₹93 ಎಕರೆ ಮಂಜೂರು ಮಾಡಿದೆ.

ಇದೀಗ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿರುವ ಕಂಪನಿ ಕಡಲತೀರದ ಅಂಚಿನಲ್ಲಿ ಮಣ್ಣು ಸುರಿದು ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿತ್ತು. ಆದರೆ, ಕಾಮಗಾರಿಯಿಂದಾಗಿ ಮನೆ ಕಳೆದುಕೊಳ್ಳುವ ಆತಂಕಕ್ಕೊಳಗಾಗಿರುವ ಮೀನುಗಾರರು ಕಳೆದ ಒಂದು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರು.

ಹೊನ್ನಾವರ.. ಬಂದರು ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಬೀದಿಗಿಳಿದ ಮೀನುಗಾರರು..

ಆದರೆ, ಎಷ್ಟೇ ಪ್ರತಿಭಟನೆ ನಡೆಸಿದರೂ ಕಾಮಗಾರಿ ಸ್ಥಗಿತಗೊಳಿಸದ ಹಿನ್ನೆಲೆ ರಾಷ್ಟ್ರೀಯ ಮೀನುಗಾರರ ಸಂಘಟನೆ ಸಹಕಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಂಪೂರ್ಣ ಮೀನುಗಾರಿಕೆ ಸ್ಥಗಿತಗೊಳಿಸಿ ಕಾಮಗಾರಿ ನಡೆಸುತ್ತಿರುವ ಕಾಸರಕೊಡು ಟೊಂಕಾ ಬಂದರು ಪ್ರದೇಶದಿಂದ ಹೊನ್ನಾವರದ ಶರಾವತಿ ಸರ್ಕಲ್​​ವರೆಗೆ ಸಾವಿರಾರು ಮೀನುಗಾರರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೀನುಗಾರರು ನೆಲೆಸಿರುವ ಪ್ರದೇಶದಲ್ಲಿ ಖಾಸಗಿ ಬಂದರು ಸ್ಥಾಪನೆ ಮಾಡಲಾಗುತ್ತಿದೆ. ಇದು ಮೀನುಗಾರರ ಪಾಲಿಗೆ ಕರಾಳ ದಿನ. ವಾಣಿಜ್ಯ ಬಂದರು ಸ್ಥಾಪನೆಯಾದಲ್ಲಿ ಮೀನುಗಾರರ ಆದಾಯ ಕುಂಟಿತವಾಗುವುದರ ಜೊತೆಗೆ ಈ ಭಾಗದಲ್ಲಿ ಮೀನುಗಾರಿಕೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಎಂದು ರಾಷ್ಟ್ರೀಯ ಮೀನುಗಾರ ಸಂಘಟನೆ ಅಧ್ಯಕ್ಷ ಯು.ಆರ್ ಸಭಾಪತಿ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು, ಕಾಸರಕೋಡು, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುತ್ತಿವೆ. ಸರ್ಕಾರ ಸ್ಥಳೀಯರಿಗೆ ಸ್ಪಷ್ಟ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿದೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿ ನೆಪದಲ್ಲಿ ಮೀನುಗಾರರನ್ನು ಸಂಪೂರ್ಣ ಒಕ್ಕಲೆಬ್ಬಿಸಿ ಈ ಭಾಗದಲ್ಲಿ ಮೀನುಗಾರಿಕೆ ಸಂಪೂರ್ಣ ನಶಿಸಲು ಈ ಬಂದರು ಕಾರಣವಾಗಲಿದೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಸ್ಥಗೀತಗೊಳಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

ವಾಣಿಜ್ಯ ಬಂದರು ಕಾಮಗಾರಿ ಸ್ಥಗಿತಗೊಳಿಸುವಂತೆ ಮೀನುಗಾರರು ಕಳೆದ ಒಂದು ತಿಂಗಳಿಂದ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಪ್ರತಿಭಟನೆಯನ್ನು ಲೆಕ್ಕಿಸುತ್ತಿಲ್ಲ. ಸ್ಥಳೀಯ ಶಾಸಕರಿಗೆ ಮೀನುಗಾರರ ಕೂಗು ಕೇಳಿಸುತ್ತಿಲ್ಲ. ಈ ಬಗ್ಗೆ ಕೇಳಿದರೆ ಕಾಮಗಾರಿಗೆ ನೂರಾರು ಕೋಟಿ ಖರ್ಚಾಗಿರುವುದಾಗಿ ಹೇಳುತ್ತಿದ್ದಾರೆ.

ಆದರೆ ಇದೀಗ ಈ ಭಾಗದಲ್ಲಿ 10 ಕೋಟಿಯೂ ಖರ್ಚಾಗಿಲ್ಲ. ಶಾಸಕರಿಗೆ ಯಾವುದು ಅಸಾಧ್ಯವಲ್ಲ. ಶಾಸಕನಾಗಿದ್ದು ತನ್ನಿಂದ ಸಾಧ್ಯವಾಗುವುದಿಲ್ಲ ಎಂದು ಹೇಳುವವವನ್ನು ಶಾಸಕನಾಗುವುದಕ್ಕೆ ಯೋಗ್ಯನಲ್ಲ ಎಂದು ಹಾಲಿ ಶಾಸಕರ ವಿರುದ್ಧ ಮಾಜಿ ಶಾಸಕ ಮಂಕಾಳ ವೈದ್ಯ ಹರಿಹಾಯ್ದಿದ್ದಾರೆ.‌

ಸರ್ಕಾರ 93 ಎಕರೆ ಖಾಸಗಿ ಜಮೀನನ್ನು ವಾಣಿಜ್ಯ ಬಂದರು ನಿರ್ಮಾಣಕ್ಕೆ ನೀಡಿದೆ. ಇದೀಗ ಸಿಆರ್​​ಜೆಡ್ ಜೀವ ವೈವಿಧ್ಯತೆ ಮಂಡಳಿಯ ಯಾವುದೇ ಪರವಾನಿಗೆ ಇಲ್ಲದೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸುತ್ತಿದೆ. ಆದರೆ ಇದಕ್ಕೆ ಮೀನುಗಾರರು ನಿರಂತರ ಹೋರಾಟದ ಮೂಲಕ ವಿರೋಧಿಸುತ್ತಿದ್ದು ಸರ್ಕಾರ ಈಗಲೂ ಯೋಜನೆ ಕೈಬಿಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಉತ್ತರಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಎಚ್ಚರಿಸಿದ್ದಾರೆ.

ಕಾಸರಕೊಡಿನ ಮೀನುಗಾರಿಕಾ ಪ್ರದೇಶದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿರುವುದು ಮೀನುಗಾರರಿಗೆ ಸಂಕಷ್ಟ ಎದುರಾಗಿದ್ದು ಸ್ಥಳೀಯರು ಬೃಹತ್ ಪ್ರತಿಭಟನೆ ಮೂಲಕ ಬಂದರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ‌. ಸರ್ಕಾರ ಮುಂದೆ ಯಾವ ನಿಲುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನೆ : ಬಂದರು ಕಾಮಗಾರಿ ಸ್ಥಗಿತಕ್ಕೆ ಹೆಚ್ಚಿದ ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.