ETV Bharat / state

ಶಿರಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಹಣದ ಆಸೆಗೆ ಕೆಲಸ ನೀಡಿದ್ದ ಮಾಲೀಕನನ್ನೇ ಕೊಲೆಗೈದ ಮೂವರು ಆರೋಪಿಗಳು ಅರೆಸ್ಟ್​

author img

By ETV Bharat Karnataka Team

Published : Sep 18, 2023, 4:52 PM IST

arrest-of-three-people-who-killed-the-owner-for-money-in-shirasi
ಶಿರಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಹಣದ ಆಸೆಗೆ ಮಾಲೀಕನ ಕೊಲೆ ಮಾಡಿದ್ದ ಮೂವರ ಬಂಧನ

ಹಣದ ಆಸೆಗೆ ಮಾಲೀಕನನ್ನೇ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬನವಾಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿರಸಿ(ಉತ್ತರ ಕನ್ನಡ): ಹಣದ ಆಸೆಗಾಗಿ ಕೆಲಸ ನೀಡಿದ ಮಾಲೀಕನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಶಿರಸಿಯ ಬನವಾಸಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯ ಶವ ಶಿರಸಿಯ ವಡ್ಡಿನಕೊಪ್ಪ ಅರಣ್ಯ ಭಾಗದಲ್ಲಿ ಪತ್ತೆಯಾಗಿತ್ತು. ಕೊಲೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ನಂತರ ತನಿಖೆ ಕೈಗೊಂಡ ಬನವಾಸಿ ಠಾಣೆ ಪೊಲೀಸರು ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿ, ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿಯ ಅಶೋಕ ಗಿರಿಯಪ್ಪ ಉಪ್ಪಾರ (48) ಕೊಲೆಯಾದ ವ್ಯಕ್ತಿ. ಈತನ ಬಳಿಯೇ ಕೆಲಸ ಮಾಡಿಕೊಂಡಿದ್ದ ಕಿರಣ ಪರಶುರಾಮ ಸುರಳೇಶ್ವರ, ನಿರಂಜನ ಗೊವಿಂದಪ್ಪ ತಳವಾರ ಹಾಗೂ ಗುಡ್ಡಪ್ಪ ಅಲಿಯಾಸ್ ಗುಡ್ಯ ತಿಳುವಳ್ಳಿ ಬಂಧಿತ ಕೊಲೆ ಆರೋಪಿಗಳು. ಎಲ್ಲರೂ ಸಹ ಕೊಲೆಯಾದ ವ್ಯಕ್ತಿಯ ಗ್ರಾಮದವರೇ ಆಗಿದ್ದು, ಕೊಲೆ ರಹಸ್ಯವನ್ನು ಕೇವಲ ಎರಡೇ ದಿನಗಳಲ್ಲಿ ಪೊಲೀಸರು ಭೇದಿಸಿದ್ದಾರೆ.

ಘಟನೆಯ ವಿವರ: ಕೊಲೆಯಾದ ಅಶೋಕ್ ಉಪ್ಪಾರ್ ವ್ಯವಹಾರ ಮಾಡಿಕೊಂಡಿದ್ದು, ಎರಡು ಟ್ರಾಕ್ಟರ್​ಗಳನ್ನು ಹೊಂದಿದ್ದ. ಮೃತನ ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದ ಕಾರಣ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ. ಇದರಿಂದ ಇಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಹಣದ ಆಸೆಗಾಗಿ ಮಾಲೀಕನನ್ನೇ ಕೊಲ್ಲಲು ಸ್ಕೆಚ್ ಹಾಕಿದ್ದರು. ಅದರಂತೆ ಮೊದಲ ಆರೋಪಿ ಕಿರಣ್ ಮಾಲೀಕನನ್ನು ಸೆ.13 ರಂದು ಕರೆದುಕೊಂಡು ಗದ್ದೆ ಕೆಲಸಕ್ಕೆ ಹೋಗಿದ್ದಾನೆ. ಅಲ್ಲಿಂದ ಒಂದು ಬಾಡಿಗೆ ಕಾರನ್ನು ಪಡೆದು ಹಾನಗಲ್ ತಾಲೂಕಿನ ಕೊಂಡೋಜಿ ಕ್ರಾಸ್ ಬಳಿ ಹೋಗಿದ್ದು, ಅಲ್ಲಿ ಉಳಿದ ಆರೋಪಿಗಳು ಸೇರಿ ಹಣವನ್ನು ನೀಡಲು ಮಾಲೀಕನನ್ನು ಹೆದರಿಸಿ, ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ಆಗ ಮಾಲೀಕ ಮೃತಪಟ್ಟಿದ್ದಾನೆ. ನಂತರ ಹಣವೂ ಸಿಗದಿರುವ ಕಾರಣ ಶವವನ್ನು ಒಂದು ದಿನ ಅಲ್ಲಿಯೇ ಬಿಟ್ಟಿದ್ದಾರೆ. ನಂತರ ಇನ್ನೊಂದು ಬಾಡಿಗೆ ಕಾರು ಪಡೆದು ಶವವನ್ನು ಹಾಕಿಕೊಂಡು ಶಿರಸಿಗೆ ಬಂದು ವಡ್ಡಿನಕೊಪ್ಪ ಅರಣ್ಯ ಭಾಗದಲ್ಲಿ ಎಸೆದು ಹೋಗಿದ್ದಾರೆ.‌

ಆದರೆ ತಮ್ಮ ಮಾಲೀಕ ಕಾಣೆಯಾದ ಕುರಿತು ಎರಡು ದಿನ ಆದರೂ ಯಾರಿಗೂ ಆರೋಪಿಗಳು ಮಾಹಿತಿ ನೀಡಿರಲಿಲ್ಲ. ಇದಲ್ಲದೇ ಶವ ಸಿಕ್ಕ ಸಮೀಪದಲ್ಲೇ ಆರೋಪಿಗಳ ಮೊಬೈಲ್ ಸಂಖ್ಯೆ ಕೊನೆಯ ಬಾರಿಗೆ ಆಕ್ಟಿವ್ ಆಗಿತ್ತು. ಜೊತೆಗೆ ಮೃತನ ಮಗ ಶವ ಗುರುತಿಸಲು ಬಂದ ಸಂದರ್ಭದಲ್ಲಿ ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಆರೋಪಿತರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಗಿ ಶಿರಸಿ ಉಪವಿಭಾಗದ ಡಿವೈಎಸ್​ಪಿ ಕೆ ಎಲ್ ಗಣೇಶ್ ತಿಳಿಸಿದ್ದಾರೆ. ಕೊಲೆಗೆ ಬಳಸಿದ ಎರಡು ಕಾರುಗಳನ್ನು, ಕೊಲೆಯಾದ ವ್ಯಕ್ತಿಯ ದ್ವಿಚಕ್ರ ವಾಹನವನ್ನು, ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆ, ಆಕೆಯ ಸಹೋದರಿ, ಭಾವನಿಂದ ವಂಚನೆ ಆರೋಪ: ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.