ETV Bharat / state

ಉತ್ತರಕನ್ನಡದಲ್ಲಿ ನಡೆದ ಭೀಕರ ಭೂ ಕುಸಿತಕ್ಕೆ 2 ವರ್ಷ; ಜನರಿಗೆ ಇನ್ನೂ ಸಿಗದ ಪರಿಹಾರ

author img

By ETV Bharat Karnataka Team

Published : Oct 12, 2023, 3:44 PM IST

Updated : Oct 12, 2023, 4:31 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ
ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ

ಉತ್ತರಕನ್ನಡ ಜಿಲ್ಲೆಯಲ್ಲಿ ಭೂಕುಸಿತದಿಂದ ಅಪಾರ ಹಾನಿ ಅನುಭವಿಸಿದ್ದ ಗ್ರಾಮಸ್ಥರಿಗೆ ಸರ್ಕಾರ ನೀಡಿದ್ದ ಸ್ಥಳಾಂತರ ಭರವಸೆ ಮರೀಚಿಕೆಯಾಗಿದೆ. ಇನ್ನಾದರೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಸರ್ಕಾರವನ್ನು ಸಂತ್ರಸ್ಥರು ಒತ್ತಾಯಿಸುತ್ತಿದ್ದಾರೆ.

ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಕಾರವಾರ (ಉತ್ತರ ಕನ್ನಡ) : ಎರಡು ವರ್ಷದ ಹಿಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಗ್ರಾಮದ ಹಲವು ಮನೆ, ತೋಟ, ಗದ್ದೆಗಳಿಗೆ ಹಾನಿ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.‌ ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಡೀ ಗ್ರಾಮವನ್ನು ಸ್ಥಳಾಂತರಿಸುವುದರ ಜೊತೆಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆದರೆ ಅವಘಡ ಸಂಭವಿಸಿ ಎರಡು ವರ್ಷಗಳೇ ಕಳೆದರೂ ಸರ್ಕಾರ ನೀಡಿದ ಭರವಸೆ ಭರವಸೆಯಾಗಿಯೇ ಉಳಿದುಕೊಂಡಿದ್ದು, ಭೂಕುಸಿತ ಸ್ಥಳದಲ್ಲೇ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಜನರು ಅಳಲು ತೊಡಿಕೊಂಡಿದ್ದಾರೆ.

2021ರಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಬಗೆಗೆ ನೆನಸಿಕೊಂಡಲ್ಲಿ ಈಗಲೂ ತೊಂದರೆಗೊಳಗಾದ ಜನ‌ ನಡುಗುವಂತಾಗಿತ್ತು. ವರುಣನ ಅಬ್ಬರಕ್ಕೆ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ವಾರಗಳ ಕಾಲ ನೆರೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೊಂದೆಡೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವೆಡೆ ಭೂಕುಸಿತ ಸಂಭವಿಸಿ ಸಾಕಷ್ಟು ಅವಘಡ ಕೂಡ ಸೃಷ್ಟಿಯಾಗಿತ್ತು. ಅಲ್ಲದೇ, ಕಳಚೆ ಗ್ರಾಮದಲ್ಲೂ ಭೂ ಕುಸಿತಗೊಂಡಿತ್ತು.

ಇದನ್ನೂ ಓದಿ : ಕೊನೆಗೂ ಸುರಂಗ ಮಾರ್ಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ: ಸುರಕ್ಷತೆಗೆ ಪ್ರಾಧಿಕಾರವೇ ಹೊಣೆ ಎಂದ ಜಿಲ್ಲಾಡಳಿತ!

ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಬಸವರಾಜ ಬೊಮ್ಮಾಯಿ ಕಳಚೆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್ ಸಹ ಭೇಟಿ ನೀಡಿ ಇಡೀ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರ ಹಾಗು ತೀರ ತೊಂದರೆಗೊಳಗಾದವರಿಗೆ ಬೇರೆ ಸ್ಥಳದಲ್ಲಿ ನಿವೇಶನ ನೀಡುವ ಭರವಸೆ ನೀಡಿದ್ದರು.

ಬೆಳೆ ಹಾನಿ ಹಾಗೂ ಭೂಮಿ ಕಳೆದುಕೊಂಡವರ ಸರ್ವೆ ನಡೆಸಿ ಪರಿಹಾರ ನೀಡಲು ಸೂಚಿಸಿದ್ದರು. ಆದರೆ ಈವರೆಗೆ ಮನೆ ಕಳೆದುಕೊಂಡ ಕೆಲವರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಭೂಮಿ ಯಾವ ಪ್ರಮಾಣದಲ್ಲಿ ಕೊಚ್ಚಿ ಹೋಗಿದೆ ಎಂಬ ಬಗ್ಗೆ ಈವರೆಗೂ ಸರ್ವೆ ನಡೆದಿಲ್ಲ. ಬೆಳೆ ಹಾನಿಯ ಕುರಿತು ಸರ್ವೆ ನಡೆದಿದೆಯಾದರೂ ಯಾವುದೇ ಪರಿಹಾರ ನೀಡಿಲ್ಲ ಎಂದು ಕಳಚೆ ಗ್ರಾಮದ ಮುಖಂಡರಾದ ಉಮೇಶ ಭಾಗ್ವತ್ ದೂರಿದರು.

ಭೂಕುಸಿತ ಪ್ರದೇಶ ಸದ್ಯ ಯಾವ ಸ್ಥಿತಿಯಲ್ಲಿದೆ ಎನ್ನುವುದು ನಿಖರವಾಗಿ ತಿಳಿದಿಲ್ಲ. ಗ್ರಾಮದ ಬಹುತೇಕರು ಮೊದಲಿನಂತೆ ಕೃಷಿ ಮಾಡುತ್ತಿದ್ದು ಸರ್ಕಾರ ಗ್ರಾಮಸ್ಥರಿಗೆ ಪುನರ್ವಸತಿ ಪರಿಹಾರ ಕೊಟ್ಟು ಸ್ಥಳಾಂತರ ಮಾಡುವ ಯೋಚನೆಯಲ್ಲಿದ್ದರೆ ಈ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಮೊದಲಿನಂತೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರಾವರಿ ಬಾಂದಾರು, ಕಾಲುಸಂಕಗಳನ್ನು ನಿರ್ಮಿಸಿಕೊಡಿ ಎಂದು ಕಳಚೆ ಗ್ರಾಮಸ್ಥರಾದ ರಾಮಕೃಷ್ಣ ಹೆಗಡೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಹೆಚ್ಚುತ್ತಿರುವ ಡೆಂಘಿ ಪ್ರಕರಣಗಳು: 3 ತಿಂಗಳಲ್ಲಿ 42 ಮಂದಿ ಶಂಕಿತರು ಪತ್ತೆ!

Last Updated :Oct 12, 2023, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.