ETV Bharat / state

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ತೆರೆ : ಅದ್ಧೂರಿಯಾಗಿ ನಡೆದ ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿ

author img

By ETV Bharat Karnataka Team

Published : Sep 7, 2023, 8:48 PM IST

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ನಿಮಿತ್ತ ವಿಟ್ಲಪಿಂಡಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ಕೃಷ್ಣನ ನಗರಿ ಉಡುಪಿ ಮಥುರೆಯಂತೆ ಕಂಗೊಳಿಸುತ್ತಿತ್ತು.

Etv Bharat
Etv Bharat

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ತೆರೆ : ಅದ್ಧೂರಿಯಾಗಿ ನಡೆದ ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿ

ಉಡುಪಿ : ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ವೈಭವದ ತೆರೆ ಬಿದ್ದಿದೆ. ನಿನ್ನೆಯ ದಿನ ಉಪವಾಸ ಮಾಡಿ ಶ್ರೀಕೃಷ್ಣನ ಆರಾಧನೆ ಮಾಡಿದ ಭಕ್ತರು, ಇಂದು ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ವಿಟ್ಲಪಿಂಡಿಯ ಸಂಭ್ರಮದಿಂದಾಗಿ ಕಡೆಗೋಲು ಶ್ರೀಕೃಷ್ಣನ ನಗರಿ ಉಡುಪಿ ಅಕ್ಷರಶಃ ಮಥುರೆಯಂತಾಗಿತ್ತು. ಅಷ್ಟಮಠಗಳ ಅಂಗಳದಲ್ಲಿ ದ್ವಾರಕೆಯ ಸಂಭ್ರಮ ಮನೆಮಾಡಿತ್ತು.

ಉಡುಪಿಯಲ್ಲಿ ಹಲವು ವರ್ಷಗಳಿಂದ ಶ್ರೀ ಕೃಷ್ಣನ ಜನ್ಮಲೀಲೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದನ್ನು ವಿಟ್ಲಪಿಂಡಿ ಎಂದು ಕರೆಯುತ್ತಾರೆ. ದ್ವಾಪರ ಯುಗದಲ್ಲಿ ಕೃಷ್ಣ ಹುಟ್ಟಿದ ಮರುದಿನ ಭಕ್ತರ ಸಂಭ್ರಮ ಹೇಗಿತ್ತು ಎಂಬುದಕ್ಕೆ ಉಡುಪಿಯ ಕೃಷ್ಣಲೀಲೋತ್ಸವ ಸಾಕ್ಷಿಯಾಗಿದೆ. ಇಂದು ಒಂದು ದಿನದ ಪುಟಾಣಿ ಕೃಷ್ಣನಿಗೆ ವಜ್ರಕವಚದ ಅಲಂಕಾರವನ್ನು ಮಾಡಲಾಗಿತ್ತು. ಇಡೀ ಮಠ ಹೂವಿನಿಂದ ಸಿಂಗಾರಗೊಂಡಿತ್ತು. ಬೆಳಗ್ಗೆಯಿಂದಲೇ ಭಕ್ತರು ಉಡುಪಿ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.

ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಉಡುಪಿ ಕೃಷ್ಣ ಮಠದಿಂದ ಸಾಂಪ್ರದಾಯಿಕ ಗೊಲ್ಲ ವೇಷಧಾರಿಗಳು ರಥ ಬೀದಿಯನ್ನು ಪ್ರವೇಶ ಮಾಡಿದರು. ಮಠದ ಮುಖ ಮಂಟಪದ ಮುಂದೆ ಇರುವ ಮಡಿಕೆಯನ್ನು ಹೊಡೆದು ಬೆಣ್ಣೆ, ಮೊಸರನ್ನು ಹರಿಸುವ ಮೂಲಕ ಶ್ರೀ ಕೃಷ್ಣನಿಗೆ ಸ್ವಾಗತ ಕೋರಲಾಯಿತು. ಪಲ್ಲಕ್ಕಿಯಲ್ಲಿ ಮುದ್ದುಕೃಷ್ಣನ ಮೃಣ್ಮಯ ಮೂರ್ತಿಯನ್ನು ( ಮಣ್ಣಿನಿಂದ ತಯಾರಿಸಿದ)ಮೆರವಣಿಗೆ ಮಾಡಲಾಯಿತು. ಈ ವೇಳೆ ಸ್ವಾಮೀಜಿಗಳು ಚಿನ್ನದ ರಥಕ್ಕೆ ದೇವರನ್ನು ಆರೋಹಣ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಸಾವಿರಾರು ಜನ ಭಕ್ತರು, ನೂರಾರು ಕಲಾವಿದರು, ಹುಲಿ ವೇಷಧಾರಿಗಳ ನರ್ತನದೊಂದಿಗೆ ಶ್ರೀಕೃಷ್ಣನ ವೈಭವದ ಮೆರವಣಿಗೆ ಸಾಗಿತು.

ಮೆರವಣಿಗೆಯ ಸಂದರ್ಭ ಶ್ರೀಕೃಷ್ಣನಿಗೆ ನೈವೇದ್ಯವಾಗಿ ನೀಡಿದ ಉಂಡೆ ಚಕ್ಕುಲಿಯನ್ನು ಪ್ರಸಾದವಾಗಿ ವಿತರಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬೆಳಗ್ಗೆಯಿಂದ ಮೋಡ ತುಂತುರು ಮಳೆ ಬಿದ್ದರೂ ಕೃಷ್ಣನ ರಥ ಹೊರಟಾಗ ಸೂರ್ಯದೇವ ಪ್ರಕಾಶಮಾನವಾಗಿದ್ಧ. ಭಕ್ತರು ಅಷ್ಟಮಠ ಕೃಷ್ಣಮಠ ರಸ್ತೆಯ ಇಕ್ಕೆಲದಲ್ಲಿ ನಿಂತು ದೇವರ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ರಥ ಬೀದಿಗೆ ಉತ್ಸವ ಒಂದು ಸುತ್ತು ಬಂದ ನಂತರ ಶ್ರೀ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು. ಪರ್ಯಾಯ ಕೃಷ್ಣಾಪುರ ಹಿರಿಯ ಶ್ರೀಗಳು ಶ್ರೀ ಕೃಷ್ಣನ ಉತ್ಸವದ ಮುಂದಾಳತ್ವ ವಹಿಸಿದ್ದರು.

ಕೃಷ್ಣಮಠದಲ್ಲಿ ಸುಮಾರು 15000ಕ್ಕೂ ಅಧಿಕ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಂದರ್ಭ ದಣಿದವರಿಗೆ ಯುವ ಬ್ರಾಹ್ಮಣ ಪರಿಷತ್ ಮಜ್ಜಿಗೆ ವ್ಯವಸ್ಥೆ ಮಾಡಿತ್ತು. ಎರಡು ದಿನಗಳ ಅದ್ದೂರಿ ಕಾರ್ಯಕ್ರಮ ಮುಗಿದಿದ್ದು, ಮಠದ ಅಂಗಳದಲ್ಲಿ ಒಂದು ವಾರಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಇದನ್ನೂ ಓದಿ : ವಿಜಯನಗರ: ಉರ್ದು ಶಾಲೆಯಲ್ಲಿ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.