ETV Bharat / state

ಫೋಟೋದಿಂದ ತೇಜೋವಧೆ ಮಾಡಿದರೆ ಏನೂ ಲಾಭವಿಲ್ಲ: ಸಚಿವ ಆರಗ ಜ್ಞಾನೇಂದ್ರ

author img

By

Published : Jan 9, 2023, 2:30 PM IST

Updated : Jan 9, 2023, 3:25 PM IST

ಸ್ಯಾಂಟ್ರೋ ರವಿಯ ವಿಚಾರವಾಗಿ ಈಗಾಗಲೇ ತನಿಖೆಗೆ ಸೂಚಿಸಿದ್ದೇನೆ. ಕುಮಾರಸ್ವಾಮಿ ನನ್ನ ಫೋಟೋ ಇಟ್ಟುಕೊಂಡು ತೇಜೋವಧೆ ಮಾಡಿದರೆ ಏನೂ ಲಾಭವಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

Minister Araga Jnanendra
ಸಚಿವ ಆರಗ ಜ್ಞಾನೇಂದ್ರ

ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಶಿವಮೊಗ್ಗ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ವೈಯಕ್ತಿಕ ತೇಜೋವಧೆ ಮಾಡುವುದರಿಂದ ಅವರಿಗೆ ಏನೂ ಲಾಭವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್​ ಕೊಟ್ಟರು. ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಅವರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಎತ್ತಿದ್ದಾರೆ. ಈ ಬಗ್ಗೆ ನಮ್ಮ ತಕರಾರಿಲ್ಲ ಎಂದರು. ಮೈಸೂರು ಆಯುಕ್ತರು ಮತ್ತು ಡಿಜಿಯವರಿಗೆ ಸ್ಯಾಂಟ್ರೋ ರವಿಯನ್ನು ಕರೆತಂದು ಆತನನ್ನು ಸಂಪೂರ್ಣ ವಿಚಾರಣೆ ನಡೆಸಲು ಹೇಳಿದ್ದೇನೆ. ಆತನ ಹಿನ್ನಲೆ ಏನು? ಎಷ್ಟು ಕೇಸ್ ಇದೆ? ಯಾರನ್ನೆಲ್ಲಾ ಬ್ಲಾಕ್ ಮೇಲ್ ಮಾಡಿಕೊಂಡು ಓಡಾಡುತ್ತಿದ್ದಾನೆ ಎಲ್ಲವನ್ನೂ ವಿಚಾರಣೆಗೊಳಪಡಿಸಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ. ಸ್ಯಾಂಟ್ರೋ ರವಿ ನನ್ನ ಜೊತೆ ಬಂದಿರಬಹುದು, ಯಾರು ಬೇಕಾದರೂ ನನ್ನ ಮನೆಗೆ ಬರುತ್ತಾರೆ. ಬೇಡಿಕೆ ಇಡುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದವರು, ಸಾವಿರಾರು ಜನರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಯಾರಿಗೂ ಪೊಲೀಸ್ ಸರ್ಟಿಫಿಕೇಟ್ ಇಟ್ಟುಕೊಂಡು ಬನ್ನಿ ಎಂದಿದ್ದನ್ನು ನೋಡಿಲ್ಲ ಎಂದರು.

ಇನ್ನು ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು, ಕುಮಾರಸ್ವಾಮಿ ಸತ್ಯಕ್ಕೆ ದೂರವಾದ ಆಪಾದನೆ ಮಾಡಿದ್ದಾರೆ. ನನ್ನನ್ನು ಯಾವ ಕಾರಣದಿಂದ ತೇಜೋವಧೆ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಿಂದ ಅವರಿಗೆ ಯಾವರೀತಿ ಲಾಭವಾಗುತ್ತದೆ ಗೊತ್ತಿಲ್ಲ. ಗೃಹ ಸಚಿವನಾದ ನನ್ನನ್ನು, ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ, ದಿನನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲ ಎಂದು ಹೇಳಿದರು.

ನಾವು ಸಾರ್ವಜನಿಕ ಜೀವನದಲ್ಲಿ ಇರುವವರು. ಯಾರೂ ಕೂಡ ನನಗೆ ಹಣದ ಗಂಟು ತೋರಿಸಿ ಆಮಿಷ ತೋರಿಸುವ ಧೈರ್ಯ ಮಾಡಿಲ್ಲ. ಸಾರ್ವಜನಿಕ ಜೀವನದಲ್ಲಿ ಹೇಗೆ ಬದುಕಬೇಕೋ ಹಾಗೆ ನೈತಿಕತೆಯಲ್ಲಿ ಬದುಕಿದ್ದೇನೆ. ಸಾರ್ವಜನಿಕರ ಎದುರು ತೇಜೋವಧೆ ಮಾಡಬಹುದು ಎಂದುಕೊಂಡರೆ ಕುಮಾರಸ್ವಾಮಿಗೆ ಇದರಿಂದ ಯಾವುದೇ ಲಾಭವಾಗುವುದಿಲ್ಲ ಎಂದರು.

ರಾಜ್ಯಕ್ಕೆ ವಿಧಿ ವಿಜ್ಞಾನ ವಿಶ್ವವಿದ್ಯಾಲಯ.. ಗೃಹ ಸಚಿವ ಗುಜರಾತ್ ಪ್ರವಾಸ : ರಾಜ್ಯದಲ್ಲಿ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ, ಮಹತ್ವದ ಸಭೆ ಯಲ್ಲಿ ಪಾಲ್ಗೊಳ್ಳಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಾಳೆ ಗುಜರಾತ್ ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಗುಜರಾತ್​ನ ಅಹಮದಾಬಾದ್ ನಗರಕ್ಕೆ ಭೇಟಿ ನೀಡಲಿರುವ ಗೃಹ ಸಚಿವರು, ಅಲ್ಲಿನ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಉಪ ಕುಲಪತಿ ಹಾಗೂ ಇತರೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ತಮ್ಮ ಮೂರು ದಿನಗಳ ಭೇಟಿಯಲ್ಲಿ, ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯ ಸ್ಥಾಪನೆ ಕುರಿತು ಎಂಓಯುಗೆ ಸಹಿ ಹಾಕುವ ಸಾಧ್ಯತೆ ಇದೆ.

ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಥಮವೆನ್ನಲಾದ ವಿಧಿವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ನಾಳೆಯಿಂದ ಮೂರು ದಿನಗಳ ತಮ್ಮ ಭೇಟಿಯ ಕಾಲದಲ್ಲಿ ಸಚಿವರು ಗುಜರಾತ್​​ ಮುಖ್ಯಮಂತ್ರಿ ಶ್ರೀ ಭೂಪೆಂದ್ರ ಭಾಯ್ ಪಾಟೀಲ್ ಅವರನ್ನೂ ಸೌಜನ್ಯ ಭೇಟಿ ಮಾಡಲಿದ್ದಾರೆ. ಗುರುವಾರ ರಾಜ್ಯಕ್ಕೆ ವಾಪಾಸ್ಸಾಗಲಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ವಶಕ್ಕೆ ಪಡೆಯಲು ಪೊಲೀಸ್​ ಕಮಿಷನರ್​ಗೆ ಸೂಚನೆ: ಆರಗ ಜ್ಞಾನೇಂದ್ರ

Last Updated :Jan 9, 2023, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.