ETV Bharat / state

ಕರ್ನಾಟಕ ಏಕೀಕರಣದ ನೆನಪು: ಶಿವಮೊಗ್ಗದಲ್ಲಿ ನಿವೃತ್ತ ಕನ್ನಡ ಶಿಕ್ಷಕರು ಹೇಳಿದ್ದೇನು?

author img

By ETV Bharat Karnataka Team

Published : Nov 1, 2023, 9:22 AM IST

Updated : Nov 1, 2023, 1:04 PM IST

ಕರ್ನಾಟಕ ಏಕೀಕರಣದ ಕುರಿತು ನಿವೃತ್ತ ಕನ್ನಡ ಪ್ರಾಂಶುಪಾಲ ಪಂಚಾಕ್ಷರಿ ಮತ್ತು ನಿವೃತ್ತ ಶಿಕ್ಷಕಿ ವಿಶಾಲಕ್ಷಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Kannada Teachers
ಶಿವಮೊಗ್ಗದ ನಿವೃತ್ತ ಕನ್ನಡ ಶಿಕ್ಷಕರು

ಕರ್ನಾಟಕ ಏಕೀಕರಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿವೃತ್ತ ಕನ್ನಡ ಶಿಕ್ಷಕರು

ಶಿವಮೊಗ್ಗ: ರಾಜ್ಯ ಪುನರ್‌ವಿಂಗಡಣಾ ಸಮಿತಿಯ ಪ್ರಕಾರ ಈಗಿನ ಕರ್ನಾಟಕ ರಚನೆಯಾಗಿದೆ. ಆದರೂ ಬಹುಪಾಲು ಕನ್ನಡದ ಪ್ರದೇಶಗಳು ರಾಜ್ಯಕ್ಕೆ ಸೇರಲಿಲ್ಲ. ಕವಿರಾಜ ಮಾರ್ಗದ ನೃಪತುಂಗ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿಯತನಕ ಹರಡಿಕೊಂಡಿತೆಂದು ಕರ್ನಾಟಕ ಏಕೀಕರಣದ ಕುರಿತು ನಿವೃತ್ತ ಕನ್ನಡ ಪ್ರಾಂಶುಪಾಲ ಪಂಚಾಕ್ಷರಿ ಹೇಳಿದರು.

ಸ್ವತಂತ್ರ ಭಾರತದಲ್ಲಿ ಹರಿದು ಹಂಚಿ ಹೋಗಿದ್ದ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಲು ಮತ್ತು ರಾಜರು ಸೇರ್ಪಡೆಗೊಳ್ಳಲು ಅಂದಿನ ಕೇಂದ್ರ ಸರ್ಕಾರದ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು‌. ನಂತರ ಭಾಷಾವಾರು ಪ್ರದೇಶಗಳನ್ನು ಒಗ್ಗೂಡಿಸಲು ಸಮಿತಿ ರಚನೆ ಮಾಡಲಾಯಿತು. 1956ರಲ್ಲಿ ನವೆಂಬರ್ 1ರಂದು ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳೆಲ್ಲಾ ಒಂದಾದವು ಎಂದರು.

"ಛಿದ್ರವಾಗಿದ್ದ ಕರುನಾಡು ಒಂದಾಗಿದ್ದು ರಾಜ್ಯ ಪುನರ್‌ವಿಂಗಡಣಾ ಸಮಿತಿ ತೀರ್ಮಾನದಂತೆ. ಆದ್ರೆ, 1956ರಲ್ಲಿ ಕರ್ನಾಟಕ ಅಂತ ಹೆಸರು ನಾಮಕರಣ ಮಾಡಲು ಆಗಲಿಲ್ಲ. ಆಗ ಅದನ್ನು ವಿಶಾಲ ಮೈಸೂರು ರಾಜ್ಯ ಎಂದು ಹೆಸರಿಡಲಾಯಿತು. ಹಳೇ ಪ್ರಾಂತ್ಯದವರು ಮೈಸೂರು ಅಂತ ಇರಲಿ ಎಂದು ಹೇಳಿದ್ರೆ, ಉತ್ತರ‌ ಕರ್ನಾಟಕ ಭಾಗದವರು ಕರ್ನಾಟಕ ಎಂಬ ಹೆಸರಿಡಬೇಕೆಂದು ಧ್ವನಿ ಎತ್ತಿದರು. ಇದರಿಂದಾಗಿ ರಾಜ್ಯ ಸರ್ಕಾರ ಒತ್ತಡದಲ್ಲಿ ಸಿಲುಕಿತು. 1973ರ ಅಕ್ಟೋಬರ್‌ 20ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು" ಎಂದು ತಿಳಿಸಿದರು.

"ಎಸ್.ನಿಜಲಿಂಗಪ್ಪನವರು ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಒಮ್ಮೆ ನಿಜಲಿಂಗಪ್ಪನವರು ಕುವೆಂಪುರವರಿಗೆ ಸನ್ಮಾನ ಮಾಡಲು ಆಹ್ವಾನ ನೀಡಲು ಹೋದಾಗ ಕುವೆಂಪು ಅವರು ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಬೇಕು ಹಾಗೂ ಕೆಳ ಹಂತದಿಂದ ಉನ್ನತ ಮಟ್ಟದ ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡಬೇಕೆಂದು ಸಲಹೆ ನೀಡಿದ್ದರು. ಹೀಗೆ ಕನ್ನಡ ಕರ್ನಾಟಕದಲ್ಲಿ ಜಾರಿಗೆ ಬಂದಿತು. 1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅಧಿವೇಶನದಲ್ಲಿ ಕರ್ನಾಟಕ ನಾಮಕರಣದ ಕುರಿತು ಚರ್ಚೆಗೆ ತಂದು ಅದನ್ನು ಮಸೂದೆಯನ್ನಾಗಿಸಿದರು. ಅಂದಿನಿಂದ ವಿಶಾಲ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಹೆಸರಿಡಲಾಯಿತು" ಎಂದರು.

ಇದನ್ನೂ ಓದಿ: ಅಮೃತ ಭಾರತಿಗೆ 50ರ ಕನ್ನಡದ ಆರತಿ : ದೇಶದ ಆರ್ಥಿಕ ವಿಕಾಸದ ಹಾದಿಯಲ್ಲಿ ಕರ್ನಾಟಕದ್ದೇ ಮೇಲ್ಪಂಕ್ತಿ

ಈ ಕುರಿತು ಮಾತನಾಡಿರುವ ನಿವೃತ್ತ ಶಿಕ್ಷಕರಾದ ವಿಶಾಲಾಕ್ಷಿ, "ಕರ್ನಾಟಕ ರಾಜ್ಯಕ್ಕೆ ನಮ್ಮ ಮಲೆನಾಡು ಶಿವಮೊಗ್ಗ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ನಾಲ್ವರು ಮುಖ್ಯಮಂತ್ರಿಗಳು, ಇಬ್ಬರು ರಾಷ್ಟ್ರಕವಿಗಳಿಗೆ ಜನ್ಮ ನೀಡಿದೆ. ಕುವೆಂಪು ಹಾಗೂ ಯು.ಆರ್.ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳನ್ನು ಕೊಡುಗೆಯಾಗಿ‌ ನೀಡಿದೆ. ಕರ್ನಾಟಕ ಎಂದು ಮರುನಾಮಕರಣ ಮಾಡಿದಾಗ ಮಲೆನಾಡಿನಲ್ಲಿ ಸಂತಸ ಮನೆಮಾಡಿತ್ತು. ಕನ್ನಡ ಭಾಷೆಯನ್ನು ಪ್ರೀತಿಸುವ, ಆರಾಧಿಸುವವರು ಇಲ್ಲಿ ಇದ್ದರು. ರಾಜ್ಯೋತ್ಸವವನ್ನು ಸಾಕಷ್ಟು ಅರ್ಥಪೂರ್ಣ ಹಾಗೂ ಔಚಿತ್ಯ ಪೂರ್ಣವಾಗಿ ಹಿಂದೆಯೂ ಮಾಡಲಾಗುತ್ತಿತ್ತು. ಈಗಲೂ ಸಹ ಅಷ್ಟೇ ಅರ್ಥಪೂರ್ಣವಾಗಿ ಸಾಕಷ್ಟು ಅಭಿಮಾನದಿಂದ ಆಚರಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವವನ್ನು ತಿಂಗಳುಗಳ ಕಾಲ ನಡೆಸುವ ಸಂಘ ಸಂಸ್ಥೆಗಳಿವೆ" ಎಂದು ಹೇಳಿದರು.

ಇದನ್ನೂ ಓದಿ: ಅನ್ಯ ರಾಜ್ಯ ಪಾಲಾಗುತ್ತಿದ್ದ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿದ್ದರು ಬಳ್ಳಾರಿ ಸಿದ್ದಮ್ಮ.. ಇವರ ಬಗ್ಗೆ ನಿಮಗೆಷ್ಟು ಗೊತ್ತು?!

Last Updated :Nov 1, 2023, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.