ETV Bharat / state

ಕಾಂಗ್ರೆಸ್​​ನವರ ಅವಸರದ ತಪ್ಪಿನಿಂದ ಶರಾವತಿ ಸಂತ್ರಸ್ತರಿಗೆ ಅನ್ಯಾಯ: ಸಿಎಂ ಬೊಮ್ಮಾಯಿ

author img

By

Published : Apr 7, 2023, 9:46 AM IST

CM Bommai inaugurates workers meeting in Mandagadde
ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದಲ್ಲಿ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕಾಂಗ್ರೆಸ್​​ನವರು ಮಾಡಿದ ಅವಸರದ ತಪ್ಪಿನಿಂದ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದಲ್ಲಿ ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, "ಶರಾವತಿ ಸಂತ್ರಸ್ತರಿಗೆ ಅನ್ಯಾಯ ಆಗಿರುವುದರ ಬಗ್ಗೆ ನನಗೆ ಬಿ.ಎಸ್. ಯಡಿಯೂರಪ್ಪ ಹಾಗೂ ಆರಗ ಜ್ಞಾನೇಂದ್ರ ಅವರು ತಿಳಿಸಿಕೊಟ್ಟರು. ವಿಚಾರ ಮಾಡಿ ನೋಡಿದಾಗ ಹಿಂದಿನವರ ಅವಸರದ ತಪ್ಪಿನಿಂದ ಅನ್ಯಾಯವಾಗಿತ್ತು. ಹಾಗಾಗಿ ನಾನು ಸರ್ವೇ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ" ಎಂದರು.

ಸಮಸ್ಯೆ ಸೃಷ್ಟಿಸಿದವರೇ ಹೋರಾಟ ಮಾಡಲು ಹೋಗುತ್ತಾರೆ. ಜನ ಒಂದು ಸಲ ಎರಡು ಸಲ ಮೋಸ ಹೋಗಬಹುದು. ಆದರೆ ಈಗ ಜನರು ಬುದ್ದಿ ಕಲಿತಿದ್ದು, ಕಾಂಗ್ರೆಸ್​ ಅನ್ನು ತಿರಸ್ಕಾರ ಮಾಡಲಿದ್ದಾರೆ ಎಂದರು. ಇದು ನನಗೆ ಅನಿರೀಕ್ಷಿತ ಸಭೆ. ನಿಮ್ಮನ್ನು ನೋಡಿ‌ ನನಗೆ ಸಂತೋಷವಾಗಿದೆ. ಆರಗ ಜ್ಞಾನೇಂದ್ರ ಹಾಗೂ ನಮ್ಮ ಸ್ನೇಹಕ್ಕೆ 25 ವರ್ಷಗಳಾಗಿವೆ. ನಮ್ಮ ಬೀಗರು ಬಂದು ನಮ್ಮ ಕೆಲಸ ಮಾಡಿಲ್ಲ ಎಂದು ಬೇಜಾರು ಮಾಡಿಕೊಂಡರು. ಏನು ಅಂತಾ ಕೇಳಿದರೆ ನಮ್ಮ ಮನೆಗೆ ಬಂದಿಲ್ಲ, ಹೊಸಹಳ್ಳಿ ಸೇತುವೆ ಮಾಡಿಕೊಟ್ಟಿಲ್ಲ ಎಂದರು. ಅವರನ್ನು ಸಂತೋಷ ಮಾಡಬೇಕಲ್ಲವೆ? ಅದಕ್ಕಾಗಿ ಬಂದಿದ್ದೇನೆ ಎಂದು ಹಾಸ್ಯದ ದಾಟಿಯಲ್ಲಿ ಮಾತನಾಡಿದರು.

ಬಿಜೆಪಿ ಹೋರಾಟ ನಡೆಸಿದ್ದನ್ನು ಜಾರಿ ಮಾಡಿದೆ: ಬಿಜೆಪಿ ತನ್ನ ತತ್ವ, ಆದರ್ಶಗಳಿಗೆ ಬದ್ಧವಾಗಿದೆ. ಅಧಿಕಾರದಲ್ಲಿ ಇರಲಿ‌ ಬಿಡಲಿ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಬಂದಿದೆ. ಹೋರಾಟ ಮಾಡಿಕೊಂಡ ಬಂದು ಅಧಿಕಾರಕ್ಕೆ ಬಂದಾಗ ಅದನ್ನು ಜಾರಿ ಮಾಡಿದೆ. 18 ಕೋಟಿ ಸದಸ್ಯರಿದ್ದಾರೆ. ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಮಾನ್ಯ ನಾಯಕರಾಗಿ ಭಾರತಕ್ಕೆ ಗೌರವ ತಂದು ಕೊಟ್ಟಿದ್ದಾರೆ. ವಿಶ್ವವೇ ಭಾರತದ ಕಡೆ ತಿರುಗಿ ನೋಡುವ ಕೆಲಸ ಮಾಡಿದ್ದಾರೆ‌. ಒಂದು ಬದುಕು ಕಟ್ಟಿಕೊಡಲು ಏನಾದ್ರೂ ಮಾಡಬೇಕೆಂದು ಪ್ರಧಾನ ಮಂತ್ರಿ ತೋರಿಸಿಕೊಟ್ಟಿದ್ದಾರೆ. ರಾಜೀವ್ ಗಾಂಧಿ ರವರು ನಾನು ದೆಹಲಿಯಿಂದ 100 ರೂ ಕಳಿಸಿದ್ರೆ ಹಳ್ಳಿಗೆ 15 ರೂ ಬರುತ್ತದೆ ಎಂದು ಹೇಳಿದ್ರು. ಆದರೆ, ಮೋದಿ ಅವರು ತಂತ್ರಜ್ಞಾನ ಬಳಸಿಕೊಂಡು ದೆಹಲಿಯಿಂದ ಹಳ್ಳಿಗೆ ನೂರು ರೂ.ತಲುಪಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

  • ಭಾರತೀಯ ಜನತಾ ಪಾರ್ಟಿ, ಮಂಡಗದ್ದೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ. ತೀರ್ಥಹಳ್ಳಿ. https://t.co/kn2mjMqDdI

    — Basavaraj S Bommai (@BSBommai) April 6, 2023 " class="align-text-top noRightClick twitterSection" data=" ">

ಆರಗ ಜ್ಞಾನೇಂದ್ರ ಅಲ್ಲ ಅಡಕೆ ಜ್ಞಾನೇಂದ್ರ: ಆರಗ ಜ್ಞಾನೇಂದ್ರ ಜನರ ನಾಡಿ‌ ಮಿಡಿತಕ್ಕೆ ಸ್ಪಂದಿಸುವ ವ್ಯಕ್ತಿ. ಎಂದೂ ಕೂಡ ತನ್ನ ಸ್ವಂತಕ್ಕೆ ಏನೂ ಕೇಳಲಿಲ್ಲ. ಯಡಿಯೂರಪ್ಪ ಟಾಸ್ಕ್ ಫೋರ್ಸ್ ಅಧ್ಯಕ್ಷ ಮಾಡಿದ್ದು ಯಾಕೆ?. ಇವರು ಆರಗ ಅಲ್ಲ ಅಡಕೆ ಜ್ಞಾನೇಂದ್ರ ಎ‌ಂದು ತಮಾಷೆ ಮಾಡಿದರು. ಅಭಿವೃದ್ದಿ, ಜನರ ಕಳಕಳಿಯ ವಿಚಾರದಲ್ಲಿ ಅವರು ಬಗ್ಗೆ ನನಗೆ ಅಭಿಮಾನವಿದೆ. ಜನಪರ ನಿರಂತರ ಕಾಳಜಿ ಹೊಂದಿದ್ದಾರೆ. ಅವರು ಗೃಹ ಮಂತ್ರಿಯಾದ ಮೇಲೆ ಸಾಕಷ್ಟು ಸಂಕಷ್ಟಕ್ಕೀಡಾದರು. ಆದರೆ ಅವರು ಜನಯಪಯೋಗಿ ಶಾಸಕರು, ಮಂತ್ರಿಗಳು ಎಂದರು.‌

ಹಗರಣ ಮುಚ್ಚಿ ಹಾಕುವುದು ಕಾಂಗ್ರೆಸ್​​ ಕೆಲಸ: ಹಿಜಾಬ್ ವಿಚಾರದಲ್ಲಿ ಎಲ್ಲ ಮಕ್ಕಳನ್ನು ಸರಿ ಸಮಾನರ ರೀತಿಯಲ್ಲಿ ನೋಡಬೇಕು. ಮಕ್ಕಳು ದೇವರಿದ್ದ‌ಂತೆ. ಅಲ್ಪ ಸಂಖ್ಯಾಂತ ಮಕ್ಕಳು ಪ್ರವಾಸಕ್ಕೆ ಹೋದರೆ ಇತರ ಮಕ್ಕಳು ನೋಡ್ತಾ ಇರಬೇಕಿತ್ತು. ಕಾಂಗ್ರೆಸ್​​ನವರು ಮಕ್ಕಳ ದಿಂಬು ಹಾಸಿಗೆಯಲ್ಲೂ ಭ್ರಷ್ಟಚಾರ ಮಾಡಿದರು. ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಸಿಎಂ ಕಿಡಿಕಾರಿದರು. ಪಿಎಸ್ಐ ಹಗರಣದಲ್ಲಿ ದಾಖಲೆ ತೆಗೆದುಕೊಂಡು ಬಂದು ಆರಗ ಜ್ಞಾನೇಂದ್ರ ತೋರಿಸಿದರು. ಆಗ ನಾನು ತನಿಖೆಗೆ ಸೂಚಿಸಿದೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿ ಜೈಲಿಗೆ ಹೋಗಬೇಕಾಯಿತು. ಅಕ್ಕಿ ಸಾಗಣೆ ತಡೆಯಲು ಹೋದ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಲಾಯಿತು. ಸಿದ್ದರಾಮಯ್ಯ ಸರ್ಕಾರ ಆ ಕೇಸ್ ಅನ್ನು ಮುಚ್ಚಿ ಹಾಕಿತು. ಅದೇ ಕಲಬುರಿಗಿಯಲ್ಲಿ ಐಜಿ ಹಗರಣ ಮಾಡಿದರೂ ಸಹ ಅದನ್ನು ಮುಚ್ಚಿ ಹಾಕುವುದು ಕಾಂಗ್ರೆಸ್​​ನವರ ಕೆಲಸ ಎಂದು ದೂರಿದರು.

ನಿಮ್ಮ ಸೇವೆಗೆ ಆರಗ ಜ್ಞಾನೇಂದ್ರ ಬೇಕಾಗುತ್ತದೆ. ಸಾಮಾಜಿಕ ನ್ಯಾಯ ನೀಡುವ ಮೀಸಲಾತಿಯನ್ನು ನೀಡಿದ್ದೇನೆ. ನಮ್ಮ ನಾಯಕರಾದ ಬಿ.ಎಸ್​ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎಲ್ಲ ಸ್ಥಾನ ಗೆಲ್ಲುತ್ತೇವೆ. ಯಡಿಯೂರಪ್ಪ ಅವರ ಶ್ರಮಕ್ಕೆ ಗೌರವ ನೀಡುವಂತೆ ಬಹುಮತದ ಸರ್ಕಾರ ಬರುತ್ತದೆ. ಆರಗ ಜ್ಞಾನೇಂದ್ರ ಅವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಿ. ವಿಜಯೋತ್ಸವಕ್ಕೆ ನಾನು ಬರುತ್ತೇನೆ ಎಂದು ಸಿಎಂ ಮನವಿ ಮಾಡಿದರು.

50 ಕೋಟಿ ರೂ. ಅನುದಾನ: ಇದಕ್ಕೂ ಮೊದಲು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ "ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಷೇತ್ರದ ತಮ್ಮ ಬೀಗರ ಮನೆಗೆ ಹೋಗಬೇಕೆಂದು ಎಂದುಕೊಂಡಿದ್ದರು. ಹೊಸಹಳ್ಳಿ ಶ್ಯಾಮೆಗೌಡರ ಮೊಮ್ಮಗಳು ಬೊಮ್ಮಾಯಿ ಅವರ ಸೊಸೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಹೊಸಹಳ್ಳಿ ಸೇತುವೆ ಆಗಬೇಕೆಂದು ಬಹಳ ದಿನದ ಬೇಡಿಕೆಯಾಗಿತ್ತು. ಮಹಿಷಿಯಿಂದ ಹೆದ್ದೂರಿಗೆ ಸೇತುವೆ ನಿರ್ಮಾಣವಾಗಿದೆ. ಈಗ ಇನ್ನೊಂದು ತುಂಗಾ ನದಿಯ ಸೇತುವೆ. ಶರಾವತಿ ಹಿನ್ನಿರಿನಿಂದ ಮುಳುಗಡೆಯಾದ ಕಾರಣಗಿರಿ ಹಿಂಬದಿಯ ಸೇತುವೆಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಎರಡು ಸೇತುವೆಗಳಿಗೆ ಸೇರಿ 50 ಕೋಟಿ ರೂ. ಅನುದಾನ ನೀಡಿದ್ದಾರೆ" ಎಂದರು.

ತಾಕತ್ ಇದ್ದರೆ ಪಿಎಸ್​ಐ ಹಗರಣ ತನಿಖೆ ನಡೆಸಲಿ: ನಾವು ಅಭಿವೃದ್ದಿಯ ಮಂತ್ರದ ಮೇಲೆ ಮತಯಾಚನೆ ಮಾಡುತ್ತೇವೆ. ಇದರಿಂದ ಎದುರಾಳಿಯ ಠೇವಣಿ‌ ಕಳೆದುಕೊಳ್ಳುತ್ತಾರೆ. ಹಿಂದಿನ ಶಾಸಕರು ಮಾಡಿದ ಅಭಿವೃದ್ದಿ ಎಲ್ಲಿ ಅಂತಾ ಹುಡುಕಬೇಕಿದೆ. ಕಿಮ್ಮನೆ ರತ್ನಾಕರ್​ ಅವರಿಗೆ ತಾಕತ್ ಇದ್ದರೆ ಪಿಎಸ್ಐ ಪರೀಕ್ಷೆ ಹಗರಣವನ್ನು ಎಲ್ಲಿ ಬೇಕಾದರೂ ತನಿಖೆ ನಡೆಸಲಿ‌ ಎಂದು ಸವಾಲು ಹಾಕಿದರು. ಇವರು ಮಂತ್ರಿಯಾಗಿದ್ದಾಗ ಏನು ಮಾಡಿದರು?. ಅರ್ಜಿ ಹಾಕದೇ ಇದ್ದವರು ಇಂದು ಶಿಕ್ಷಕರಾಗಿದ್ದಾರೆ‌. ಅವರನ್ನು ಈಗ ಎಳೆತಂದು ಜೈಲಿಗೆ ಹಾಕಿದ್ದಾರೆ. ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ‌. ಇವರು ಮಾಡಿದ್ದು, ಧರಣಿ ಸತ್ಯಾಗ್ರಹ, ಪಾದಯಾತ್ರೆ ಅಷ್ಟೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ: ಅಧಿಕಾರ ಶಾಶ್ವತವಲ್ಲ ನಿಮ್ಮ ಹೃದಯದಲ್ಲಿರುವ ಜಾಗ ಶಾಶ್ವತ: ಸಿಎಂ ಭಾವುಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.