ETV Bharat / state

ಕೋವಿಡ್​ ಹತ್ತಿಕ್ಕುವ ಸಲುವಾಗಿ ಪ್ರವಾಸಿ ತಾಣಗಳಿಗೆ ವಾರಾಂತ್ಯದ ನಿಷೇಧಾಜ್ಞೆ ಜಾರಿ

author img

By

Published : Aug 10, 2021, 9:39 PM IST

ಹೊರ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ಪ್ರವಾಸಿಗರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, ಇದರಿಂದಾಗಿ ಕೋವಿಡ್ -19 ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದನ್ನು ಹತ್ತಿಕ್ಕುವ ಸಲುವಾಗಿ ಪ್ರವಾಸಿ ತಾಣಗಳಿಗೆ ವಾರಾಂತ್ಯದ ನಿಷೇಧಾಜ್ಞೆ ಜಾರಿ ಮಾಡಿ ಇಲ್ಲಿನ ಡಿಸಿ ಆದೇಶ ಹೊರಡಿಸಿದ್ದಾರೆ.

Restriction to tourist destinations
ರಾಮನಗರ ಜಿಲ್ಲೆಯ ಪ್ರವಾಸಿ ತಾಣ

ರಾಮನಗರ: ವಾರಾಂತ್ಯ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಪ್ರವಾಸಿ ತಾಣಗಳನ್ನು ನೋಡಲು ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕೋವಿಡ್ -19 ಮೂರನೇ ಅಲೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರಾಮನಗರ ಜಿಲ್ಲಾ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ವಾರಾಂತ್ಯದ ನಿಷೇಧಾಜ್ಞೆ ಜಾರಿ ಮಾಡಿ ಇಲ್ಲಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ರಾಮನಗರ ತಾಲೂಕಿನ ಶ್ರೀ ರಾಮದೇವರ ಬೆಟ್ಟ, ಶ್ರೀ ರೇವಣ್ಣಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣ ತಾಲೂಕಿನ ಕಣ್ಣ ಜಲಾಶಯ, ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ, ಸಾವನದುರ್ಗ ಬೆಟ್ಟ ಮತ್ತು ಕನಕಪುರ ತಾಲೂಕಿನ ಸಂಗಮ, ಮೇಕೆದಾಟು ಮತ್ತು ಚುಂಚಿ ಜಲಪಾತ ಪ್ರವಾಸಿ ತಾಣಗಳಲ್ಲಿ ಸಾರ್ವತ್ರಿಕ ರಜಾ ದಿನಗಳು ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರು ಆಗಮಿಸುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ತಮಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ.

ವಾರಾಂತ್ಯದ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಹೊರ ಜಿಲ್ಲೆಗಳಿಂದ ಪ್ರವಾಸಿಗರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, ಇದರಿಂದಾಗಿ ಕೋವಿಡ್ -19 ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರಿಂದಾಗಿ ಕೋವಿಡ್ -19 ಮೂರನೇ ಅಲೆ ನಿಯಂತ್ರಣಕ್ಕೆ ತರುವುದು ಕಷ್ಟ ಸಾಧ್ಯವಾಗಿರುತ್ತದೆ. ರಾಮನಗರ ಜಿಲ್ಲಾದ್ಯಂತ ಕೋವಿಡ್ -19 ಮೂರನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸದರಿ ಆದೇಶ ಹೊರಡಿಸಲಾಗಿದೆ.

ಸರ್ಕಾರವು ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.